ADVERTISEMENT

ಕುರುಗೋಡು | ಪುರಸಭೆ ಸಾಮಾನ್ಯಸಭೆ; ಪ್ರತಿಧ್ವನಿಸಿದ ವಿದ್ಯುತ್ ಸಮಸ್ಯೆ

​ಪ್ರಜಾವಾಣಿ ವಾರ್ತೆ
Published 8 ಆಗಸ್ಟ್ 2025, 5:43 IST
Last Updated 8 ಆಗಸ್ಟ್ 2025, 5:43 IST
ಕುರುಗೋಡಿನ ಪುರಸಭೆಯಲ್ಲಿ ಗುರುವಾರ ಸಾಮಾನ್ಯ ಸಭೆ ನಡೆಯಿತು
ಕುರುಗೋಡಿನ ಪುರಸಭೆಯಲ್ಲಿ ಗುರುವಾರ ಸಾಮಾನ್ಯ ಸಭೆ ನಡೆಯಿತು   

ಕುರುಗೋಡು: ಇಲ್ಲಿನ ಪುರಸಭೆಯಲ್ಲಿ ಗುರುವಾರ ಜರುಗಿದ ಸಾಮಾನ್ಯ ಸಭೆಯಲ್ಲಿ ಪಟ್ಟಣದ ವಿವಿಧ ವಾರ್ಡ್‌ಗಳಲ್ಲಿನ ವಿದ್ಯುತ್ ಸಮಸ್ಯೆ ಪ್ರತಿಧ್ವನಿಸಿತು.

‘7ನೇ ವಾರ್ಡ್‌ನಲ್ಲಿ ವಿದ್ಯುತ್ ಕಂಬ ಮತ್ತು ಪರಿವರ್ತಕಗಳ ಬದಲಾವಣೆಗೆ ಅನುದಾನ ಮೀಸಲಿಡಿಸಿದ್ದು ನಾನು. ಆದರೂ ಈ ವರೆಗೆ ಅನುಷ್ಠಾನಗೊಂಡಿಲ್ಲ. ಜೆಸ್ಕಾಂ ಅಧಿಕಾರಿಗಳಿಗೆ ಕರೆ ಮಾಡಿದರೆ ನಿರುತ್ತರರಾಗಿದ್ದಾರೆ. ಯಾರನ್ನು ಕೇಳಬೇಕು ಎನ್ನುವುದೇ ಅರ್ಥವಾಗುತ್ತಿಲ್ಲ’ ಎಂದು ಸದಸ್ಯ ಎನ್.ಗುರುಮೂರ್ತಿ ಏನುಧ್ವನಿಯಲ್ಲಿ ಪ್ರಶ್ನಿಸಿದರು.

ಇದಕ್ಕೆ ದನಿಗೂಡಿಸಿದ ನಾಮ ನಿರ್ದೇಶನ ಸದಸ್ಯ ಮೃತ್ಯುಂಜಯ, ‘3ನೇ ವಾರ್ಡ್‌ನಲ್ಲಿ ಪರಿವರ್ತಕ ದಾರಿಹೋಕರ ಕೈಗೆ ತಾಕುವಂತಿದೆ. ಈ ಬಗ್ಗೆ ಇಲಾಖೆ ಗಮನಕ್ಕೆ ತಂದರೂ ಯಾವುದೇ ಕ್ರಮಕೈಗೊಂಡಿಲ್ಲ. ಜನರ ಸಾವಿಗಾಗಿ ಕಾಯುತ್ತಿದ್ದೀರಾ’ ಎಂದು ಪ್ರಶ್ನಿಸಿದರು.

ADVERTISEMENT

‘2ನೇ ಮತ್ತು 16ನೇ ವಾರ್ಡ್‌ನಲ್ಲಿ ವಿದ್ಯುತ್ ಕಂಬಗಳ ಬದಲಾವಣೆಗೆ ಇದೇ ಸಂದರ್ಭದಲ್ಲಿ ಬೇಡಿಕೆ ಬಂತು. ಇದಕ್ಕೆ ಪ್ರತಿಕ್ರಿಯಿಸಿದ ಜೆಸ್ಕಾಂ ಎಇಇ ರಾಜೇಂದ್ರ ಪ್ರಸಾದ್, ಇಲಾಖೆಯಲ್ಲಿ ಅನುದಾನ ಮೀಸಲಿರುವುದಿಲ್ಲ. ದುರಸ್ತಿ ಅಥವಾ ಹೊಸ ಕಂಬ, ಪರಿವರ್ತಕ ಅಳವಡಿಕೆ ಅಗತ್ಯವಿದ್ದಲ್ಲಿ ಕ್ರಿಯಾಯೋಜನೆ ತಯಾರಿಸಿ ಇಲಾಖೆ ಮೇಲಧಿಕಾರಿಗಳಿಗೆ ಕಳುಹಿಸಲಾಗುತ್ತದೆ. ಅನುದಾನ ಬಿಡುಗಡೆಯಾದ ನಂತರ ಅನುಷ್ಠಾನಗೊಳಿಸಲಾಗುವುದು. ತುರ್ತು ದುರಸ್ತಿ ಇದ್ದಲ್ಲಿ ನನ್ನ ಗಮನಕ್ಕೆ ತಂದರೆ ತಾತ್ಕಾಲಿಕವಾಗಿ ಸರಿಪಡಿಸಲಾಗುವುದು’ ಎಂದರು.

ಪೊಲೀಸ್ ಇಲಾಖೆ ಗುರುತಿಸಿರುವ ಆಯಕಟ್ಟಿನ ಸ್ಥಳಗಳಲ್ಲಿ ಸಿಸಿಟಿವಿ ಕ್ಯಾಮೆರಾಗಳನ್ನು ಅಳವಡಿಸಲು ₹14.25 ಲಕ್ಷ ಅನುದಾನ ಮಂಜೂರು ಮಾಡಲು ಸದಸ್ಯರ ಒತ್ತಿಗೆ ಕೇಳಿದಾಗ ಕೆಲವು ಸದಸ್ಯರು ವಾರ್ಡ್‌ಗಳ ಅಭಿವೃದ್ಧಿಗೆ ಅನುದಾನದ ಕೊರತೆಯಾಗುತ್ತದೆ. ನಿಮ್ಮ ಇಲಾಖೆಯ ಅನುದಾನದಲ್ಲಿ ಖರೀದಿಸಿ ಎಂದು ಹೇಳಿದರು.

ಮಧ್ಯಪ್ರವೇಶಿಸಿದ ಶಾಸಕ ಜೆ.ಎನ್.ಗಣೇಶ್, ಪಟ್ಟಣದಲ್ಲಿ ಜರುಗುವ ಕಳ್ಳತನ, ಅಪಘಾತದಂತಹ ಘಟನೆಗಳನ್ನು ಪತ್ತೆಹಚ್ಚುವಲ್ಲಿ ಸಿ.ಸಿ.ಟಿ.ವಿ ಕ್ಯಾಮೆರಾಗಳು ಹೆಚ್ಚು ಮಹತ್ವ ಪಡೆದಿವೆ. ಸಮಸ್ಯೆಗಳಿರುವ ವಾರ್ಡ್ಗಳಿಗೆ ಶಾಸಕರ ಅನುದಾನದಲ್ಲಿ ಹಣ ನೀಡುವೆ ಎಂದು ಹೇಳಿ ಸದಸ್ಯರ ತಕರಾರಿಗೆ ತೆರೆ ಎಳೆದರು.

ಕುಡಿಯುವ ನೀರು, ಚರಂಡಿ ಸ್ವಚ್ಛತೆ, ಬ್ಯಾನರ್ ಅಳವಡಿಕೆ ಕುಡಿಯುವ ನೀರು ಸರಬರಾಜು ಪೈಪ್‌ಲೈನ್ ಅಳವಡಿಕೆ ಸಮಸ್ಯೆಗಳ ಕುರಿತು ಬಿಸಿಚರ್ಚೆ ಜರುಗಿತು.

ಪುರಭಸೆ ಉಪಾಧ್ಯಕ್ಷ ಚನ್ನಪಟ್ಟಣ ಮಲ್ಲಿಕಾರ್ಜುನ, ಮುಖ್ಯಾಧಿಕಾರಿ ಹರ್ಷವರ್ಧನ ರೆಡ್ಡಿ, ಸಿಪಿಐ ವಿಶ್ವನಾಥ ಕೆ.ಹಿರೇಗೌಡರ್ ಮತ್ತು ಪಿಎಸ್‌ಐ. ಸುಪ್ರಿತ್ ಇದ್ದರು.

ಪಟ್ಟಣದಲ್ಲಿ ವಿದ್ಯುತ್ ಸಮಸ್ಯೆಗೆ ಶಾಶ್ವತ ಪರಿಹಾರ ನೀಡಲು ₹12 ಲಕ್ಷ ಅನುದಾನ ಮೀಸಲಿರಿಸಿದೆ. ಅದಕ್ಕೆ ಇನ್ನು ₹10 ಲಕ್ಷ ಹೆಚ್ಚಿಸಲಾಗುವುದು
ಟಿ.ಶೇಖಣ್ಣ ಪುರಸಭೆ ಅಧ್ಯಕ್ಷ

ಪಕ್ಷಾತೀತವಾಗಿ ಅರ್ಹರಿಗೆ ಆಶ್ರಯ ಮನೆ ಹಂಚಿಕೆ:

‘ಆಶ್ರಯ ನಿವೇಶನ ಹಂಚಿಕೆ ಮಾಡಲು 16 ಎಕರೆ ಭೂಮಿ ಗುರುತಿಸಿದೆ. ಪಕ್ಷಾತೀತವಾಗಿ ಅರ್ಹ ಫಲಾನುಭವಿಗಳಿಗೆ ಹಂಚಿಕೆ ಮಾಡಲಾಗುವುದು. ನಿವೇಶನ ಬದಲಿಗೆ ಜಿ+1 ಮಾದರಿಯಲ್ಲಿ ಮನೆ ನಿರ್ಮಾಣಮಾಡಿದರೆ 1200 ಫಲಾನುಭವಿಗಳಿಗೆ ಮನೆ ಹಂಚಿಕೆ ಮಾಡಬಹುದು. ಈ ಕುರಿತು ವಸತಿ ಸಚಿವ ಬಿ.ಝಡ್‌. ಜಮೀರ್ ಅಹಮ್ಮದ್ ಅವರೊಂದಿಗೆ ಮಾತನಾಡಿದ್ದೇನೆ. ₹10 ಕೋಟಿ ಅನುದಾನ ನೀಡಲು ಒಪ್ಪಿದ್ದಾರೆ. ಜಿಲ್ಲಾ ಖನಿಜ ನಿಧಿಯ ಅನುದಾನ ಬಳಸಿ ಮನೆಗಳನ್ನು ನಿರ್ಮಿಸಲಾಗುವುದು’ ಎಂದು ಶಾಸಕ ಜೆ.ಎನ್.ಗಣೇಶ್ ಭರವಸೆ ನೀಡಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.