ADVERTISEMENT

ಹೊಸಪೇಟೆ| ನಾಪತ್ತೆಯಾಗಿದ್ದ ಮಹಿಳೆ ಜಬಲ್ಪುರದಲ್ಲಿ ಪತ್ತೆ

ಅಪಹರಣವಲ್ಲ, ದೇವಸ್ಥಾನಕ್ಕೆ ಹೋಗಿದ್ದೆ–ಪ್ರಿಯಾಂಕಾ

​ಪ್ರಜಾವಾಣಿ ವಾರ್ತೆ
Published 24 ಡಿಸೆಂಬರ್ 2019, 16:38 IST
Last Updated 24 ಡಿಸೆಂಬರ್ 2019, 16:38 IST

ಹೊಸಪೇಟೆ: ನಾಪತ್ತೆಯಾಗಿದ್ದ ಇಲ್ಲಿನ ಬಸವೇಶ್ವರ ಬಡಾವಣೆಯ ಗೃಹಿಣಿ ಪ್ರಿಯಾಂಕಾ ಅವರನ್ನು ಚಿತ್ತವಾಡ್ಗಿ ಪೊಲೀಸರು ಮಧ್ಯ ಪ್ರದೇಶದ ಜಬಲ್ಪುರದಲ್ಲಿ ಪತ್ತೆ ಮಾಡಿ, ಮಂಗಳವಾರ ನಗರಕ್ಕೆ ಕರೆತಂದಿದ್ದಾರೆ.ಈ ಮೂಲಕ ಒಂದೇ ವಾರದೊಳಗೆ ಪ್ರಕರಣವನ್ನು ಭೇದಿಸಿದ್ದಾರೆ.

‘ತನ್ನ ಹೆಂಡತಿ ಪ್ರಿಯಾಂಕಾ ಡಿ. 18ರಂದು ಟೈಲರ್‌ ಮಳಿಗೆಯಿಂದ ಮನೆಗೆ ಹೋಗುವಾಗ ಯಾರೊ ಅಪಹರಣ ಮಾಡಿದ್ದಾರೆ. ಆಕೆ ನನಗೆ ಕರೆ ಮಾಡಿ ವಿಷಯ ತಿಳಿಸಿದ್ದಳು. ನಂತರ ಕರೆ ಕಟ್‌ ಆಗಿತ್ತು’ ಎಂದು ಅವರ ಪತಿ ಚಂದನ್‌ ಮಿಶ್ರಾ ಡಿ. 19ರಂದು ಚಿತ್ತವಾಡ್ಗಿ ಠಾಣೆಗೆ ದೂರು ಕೊಟ್ಟಿದ್ದರು. ದೂರು ದಾಖಲಿಸಿಕೊಂಡ ಬಳಿಕ ಡಿ.ವೈ.ಎಸ್ಪಿ. ವಿ. ರಘುಕುಮಾರ ಅವರು, ಸಿ.ಪಿ.ಐ. ಸಿದ್ದೇಶ್ವರ ನೇತೃತ್ವದಲ್ಲಿ ಎರಡು ತಂಡಗಳನ್ನು ರಚಿಸಿದ್ದರು.

ಪ್ರಿಯಾಂಕಾ, ಕೊನೆಯ ಬಾರಿಗೆ ಪತಿಯ ಮೊಬೈಲ್‌ಗೆ ಕರೆ ಮಾಡಿದ ಸಂಖ್ಯೆಯ ಜಾಡು ಹಿಡಿದು ತನಿಖೆ ನಡೆಸಿದ ಪೊಲೀಸರು ಅಂತಿಮವಾಗಿ ಅವರನ್ನು ಜಬಲ್ಪುರದಲ್ಲಿ ಪತ್ತೆ ಮಾಡಿದ್ದಾರೆ. ‘ನನ್ನನ್ನು ಯಾರೂ ಅಪಹರಿಸಿಲ್ಲ. ಪರಿಚಿತರೊಂದಿಗೆ ದೇವರ ದರ್ಶನಕ್ಕೆ ಹೋಗಿದ್ದೆ ಎಂದು ಪ್ರಿಯಾಂಕಾ ತಿಳಿಸಿದ್ದಾರೆ. ಚಂದನ್‌ ಅವರನ್ನು ಕರೆಸಿ, ಮಾಹಿತಿ ಕೊಡಲಾಗಿದೆ. ಗಂಡ–ಹೆಂಡತಿ ಮಧ್ಯೆ ಹೊಂದಾಣಿಕೆ ಕೊರತೆಯಿಂದ ಹೀಗಾಗಿದೆ. ಪ್ರಿಯಾಂಕಾ ಹೇಳಿದಂತೆ ಇದು ಅಪಹರಣದ ಕೃತ್ಯವಲ್ಲ’ ಎಂದು ರಘುಕುಮಾರ ‘ಪ್ರಜಾವಾಣಿ’ಗೆ ಮಾಹಿತಿ ನೀಡಿದರು.

ADVERTISEMENT

ತನಿಖಾ ತಂಡದಲ್ಲಿ ಎ.ಎಸ್‌.ಐ. ಕುಮಾರಸ್ವಾಮಿ, ಮುಖ್ಯ ಪೇದೆ ಶ್ರೀಕಾಂತ್‌, ಕಾನ್‌ಸ್ಟೆಬಲ್‌ಗಳಾದ ಜಾವೀದ್‌, ಶಿಲ್ಪಾ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.