ಮರಿಯಮ್ಮನಹಳ್ಳಿ ಸಮೀಪದ ಗುಂಡಾ ಸ್ಟೇಷನ್ ಗ್ರಾಮಸ್ಥರು ನಡೆಸುತ್ತಿದ್ದ ಅನಿರ್ದಿಷ್ಟ ಹೋರಾಟದ ಸ್ಥಳಕ್ಕೆ ಬುಧವಾರ ಕೆಎಂಎಫ್ ಅಧ್ಯಕ್ಷ ಭೀಮಾನಾಯ್ಕ, ಉಪವಿಭಾಗಾಧಿಕಾರಿ ಪಿ.ವಿವೇಕಾನಂದ, ತಹಶೀಲ್ದಾರ್ ಶೃತಿ ಎಂ.ಮಳ್ಳಪ್ಪಗೌಡ, ಡಿವೈಎಸ್ಪಿ ಮಲ್ಲೇಶ್ ದೊಡ್ಡಮನಿ ಹಾಗೂ ಕಂಪನಿಯ ಮುಖ್ಯಸ್ಥ ಗಣೇಶ್ ಹೆಗಡೆ ಭೇಟಿ ನೀಡಿ ಸಮಸ್ಯೆ ಆಲಿಸಿದರು
ಮರಿಯಮ್ಮನಹಳ್ಳಿ: 114-ಡಣಾಪುರದ ಬಿಎಂಎಂ ಇಸ್ಪಾತ್ ಕಂಪನಿಯ ವಿರುದ್ಧ ಗುಂಡಾ ಸ್ಟೇಷನ್ ಗ್ರಾಮಸ್ಥರು ಮೂರು ದಿನಗಳಿಂದ ನಡೆಸುತ್ತಿದ್ದ ಅನಿರ್ದಿಷ್ಟ ಹೋರಾಟ ಬುಧವಾರ ನಡೆದ ಸಂಧಾನ ಸಭೆಯಲ್ಲಿ ಗ್ರಾಮ ಸ್ಥಳಾಂತರಕ್ಕೆ ಪರ್ಯಾಯ 7ಎಕರೆ ಭೂಮಿ ನೀಡಲು ಒಪ್ಪಿಕೊಂಡ ಹಿನ್ನೆಲೆಯಲ್ಲಿ ಅಂತ್ಯಗೊಂಡಿತು.
ಬಿಎಂಎಂ ಇಸ್ಪಾತ್ ಕಂಪನಿಯಿಂದ ವಾಯು ಹಾಗೂ ಶಬ್ದ ಮಾಲಿನ್ಯದಿಂದ ಸೇರಿದಂತೆ ಹಲವು ಸಮಸ್ಯೆಗಳು ಮತ್ತು ಗ್ರಾಮ ಸ್ಥಳಾಂತರ ಮಾಡದಿರುವುದನ್ನು ವಿರೋಧಿಸಿ ಗ್ರಾಮದ 35ಕುಟುಂಬಗಳ 100ಕ್ಕೂ ಹೆಚ್ಚು ಜನ ಧರಣಿ ನಡೆಸಿದ್ದರು.
ಕೆಎಂಎಫ್ ಅಧ್ಯಕ್ಷ ಎಲ್.ಬಿ.ಪಿ.ಭೀಮಾನಾಯ್ಕ ಅವರು ಉಪವಿಭಾಗಾಧಿಕಾರಿ ಪಿ.ವಿವೇಕಾನಂದ, ತಹಶೀಲ್ದಾರ್ ಶೃತಿ ಎಂ.ಮಳ್ಳಪ್ಪಗೌಡ ಅವರೊಂದಿಗೆ ಮಧ್ಯಾಹ್ನ 12ಗಂಟೆಗೆ ಹೋರಾಟ ಸ್ಥಳಕ್ಕೆ ಬಂದ ಅವರು ಗ್ರಾಮಸ್ಥರ ಸಮಸ್ಯೆಗಳನ್ನು ಆಲಿಸಿದರು.
ಹಿಂದೆ ಶಾಸಕರಾಗಿದ್ದ ಸಂದರ್ಭ ಸೇರಿದಂತೆ ಕಳೆದ 13 ವರ್ಷಗಳಿಂದ ಗ್ರಾಮಸ್ಥರು ಈ ಸಮಸ್ಯೆ ಎದುರಿಸುತ್ತಿದ್ದಾರೆ. ಇದನ್ನು ಬಗೆಹರಿಸದಿದ್ದರೆ ಹೇಗೆ ಎಂದು ಉಪವಿಭಾಗಾಧಿಕಾರಿ ಅವರನ್ನು ಪ್ರಶ್ನಿಸಿದ ಭೀಮಾನಾಯ್ಕ ಅವರು, ಕೂಡಲೇ ಕಂಪನಿಯ ಅಧಿಕಾರಿಗಳನ್ನು ಕರೆಯಿಸಿ ಇತ್ಯರ್ಥಗೊಳಿಸಿ ಎಂದು ಸೂಚಿಸಿದರು.
ದೂರವಾಣಿಯ ಮೂಲಕ ಕಂಪನಿಯ ಅಧಿಕಾರಿಗಳನ್ನು ಸ್ಥಳಕ್ಕೆ ಕರೆಯಿಸಿದರು. ನಂತರ ಸ್ಥಳಕ್ಕೆ ಬಂದ ಕಂಪನಿಯ ಅಧಿಕಾರಿಗಳನ್ನು ತರಾಟೆಗೆ ತೆಗೆದುಕೊಂಡ ಭೀಮಾನಾಯ್ಕ, ಸಾವಿರಾರು ಕೋಟಿಯ ಕಂಪನಿಗೆ ಗ್ರಾಮ ಸ್ಥಳಾಂತರಕ್ಕೆ ಎರಡು ಎಕರೆ ಕೊಡಲು ಆಗುತ್ತಿಲ್ಲ ಎಂದರೆ ಹೇಗೆ? ಒಂದೆರಡು ದಿನ ಇದ್ದು ಇಲ್ಲಿಯ ಪರಿಸ್ಥಿತಿ ನೋಡಿ ಆಗ ಗ್ರಾಮಸ್ಥರ ಸಮಸ್ಯೆ ಗೊತ್ತಾಗುತ್ತೆ ಎಂದರು.
ನಂತರ ಮಾತನಾಡಿದ ಕಂಪನಿಯ ಮುಖ್ಯಸ್ಥ ಗಣೇಶ್ ಹೆಗಡೆ, ಹಿಂದೆ ಎರಡು ಬಾರಿ ಅಧಿಕಾರಿಗಳ ಸಮ್ಮುಖದಲ್ಲಿ ನಡೆದ ಸಭೆಯಲ್ಲಿನ ಕಾರಾರಿನಂತೆ, ಕುಟುಂಬವೊಂದಕ್ಕೆ 30*40 ನಿವೇಶನ ಹಾಗೂ ₹7.50ಲಕ್ಷ ಪರಿಹಾರ ಹಾಗೂ ಉದ್ಯೋಗ ನೀಡುವುದಾಗಿ ತಿಳಿಸಿದ್ದೇವು. ಆದರೆ, ಗ್ರಾಮಸ್ಥರು ಒಪ್ಪದ ಕಾರಣ ಸಮಸ್ಯೆ ಮುಂದುವರೆದಿದೆ ಎಂದರು.
ನಂತರ ನಡೆದ ಸಭೆಯಲ್ಲಿ, 15ದಿನದೊಳಗೆ ಗ್ರಾಮ ಸ್ಥಳಾಂತರಕ್ಕೆ ಗ್ರಾಮದ ಒಟ್ಟು 70 ಕುಟುಂಬಗಳಿಗೆ 60*40ನಿವೇಶನಕ್ಕಾಗಿ 7ಎಕರೆ ಭೂಮಿ ಸೇರಿದಂತೆ ₹7.50ಲಕ್ಷ ರೂಪಾಯಿ ಬಡ್ಡಿ ಸಮೇತ ಪರಿಹಾರ ಹಾಗೂ ಮನೆಯ ಒಬ್ಬರಿಗೆ ಉದ್ಯೋಗ ನೀಡುವುದಾಗಿ ಕಂಪನಿಯ ಅಧಿಕಾರಿಗಳು ಭರವಸೆ ನೀಡಿದರು.
ಭೀಮಾನಾಯ್ಕ ಮಾತನಾಡಿ, ಗ್ರಾಮಸ್ಥರು ಮನೆಕಟ್ಟಿಕೊಳ್ಳಲು ₹25ಲಕ್ಷ ಪರಿಹಾರದ ಬೇಡಿಕೆ ಇಟ್ಟಿದ್ದಾರೆ. ಇದರ ಬಗ್ಗೆ ಜಿಲ್ಲಾಧಿಕಾರಿಗಳ ಸಮ್ಮುಖದಲ್ಲಿ ನಡೆಯುವ ಸಭೆಯಲ್ಲಿ ತೀರ್ಮಾನಿಸಲಾಗುವುದು ಹಾಗೂ ಬಡಾವಣೆ ಅಭಿವೃದ್ಧಿ ಮಾಡಿ ಕೊಡಲು ಕಂಪನಿಗೆ ತಿಳಿಸಲಾಗುವುದು ಎಂದರು.
ಡಿವೈಎಸ್ಪಿ ಮಲ್ಲೇಶ್ ದೊಡ್ಡಮನಿ, ಸಿಪಿಐ ವಿಕಾಸ್ ಲಮಾಣಿ ಸೇರಿದಂತೆ ಅಧಿಕಾರಿಗಳು ಹಾಗೂ ಗ್ರಾಮಸ್ಥರು ಉಪಸ್ಥಿತರಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.