ADVERTISEMENT

ಪ್ರವಾಸಿ ತಾಣಕ್ಕೆ ವಲಸೆ ಗೋವಿನ ಹಿಂಡು

ಶಶಿಕಾಂತ್ ಎಸ್. ಶೆಂಬೆಳ್ಳಿ
Published 23 ಆಗಸ್ಟ್ 2019, 12:18 IST
Last Updated 23 ಆಗಸ್ಟ್ 2019, 12:18 IST
ಹಂಪಿಗೆ ಬಂದಿರುವ ವಲಸೆ ಗೋವುಗಳ ಹಿಂಡು
ಹಂಪಿಗೆ ಬಂದಿರುವ ವಲಸೆ ಗೋವುಗಳ ಹಿಂಡು   

ಹೊಸಪೇಟೆ: ತಾಲ್ಲೂಕಿನ ಹಂಪಿಯ ಸುತ್ತಮುತ್ತಲಿನ ಸ್ಮಾರಕಗಳ ಬಳಿ ಒಂದೆಡೆ ಪ್ರವಾಸಿಗರ ಜನಜಂಗುಳಿ ಇದ್ದರೆ, ಮತ್ತೊಂದೆಡೆ ಅದರ ವಿಶಾಲವಾದ ಬಯಲು ಪ್ರದೇಶದಲ್ಲಿ ನೂರಾರು ವಲಸೆ ಗೋವುಗಳ ಕಾರುಬಾರು ಕಂಡು ಬರುತ್ತಿದೆ.

ಕಳೆದ ಕೆಲವು ದಿನಗಳಿಂದ ಹಂಪಿಯಲ್ಲಿ ಸಾಮಾನ್ಯವಾಗಿ ಈ ದೃಶ್ಯ ಕಂಡು ಬರುತ್ತಿದೆ. ಒಂದೆಡೆ ಹಂಪಿಯ ತುಂಗಭದ್ರಾ ನದಿ ಮೈದುಂಬಿಕೊಂಡು ಹರಿಯುತ್ತಿದೆ. ಇನ್ನೊಂದೆಡೆ ಅದರ ಸುತ್ತಮುತ್ತಲಿನ ಪರಿಸರ ಹಸರಿನಿಂದ ಕಂಗೊಳಿಸುತ್ತಿದೆ. ಅಪಾರವಾದ ಮೇವು ಬೆಳೆದು ನಿಂತಿದ್ದು, ಇದು ಸಹಜವಾಗಿಯೇ ನೂರಾರು ಗೋವುಗಳಿಗೆ ಆಹಾರ ಒದಗಿಸುವ ಸ್ಥಳವಾಗಿ ಮಾರ್ಪಟ್ಟಿದೆ.

ನೆರೆಯ ಕೊಪ್ಪಳ ಜಿಲ್ಲೆಯ ಕನಕಗಿರಿ ತಾಲ್ಲೂಕು ಈ ಸಲವೂ ಬರಗಾಲಕ್ಕೆ ತುತ್ತಾಗಿದೆ. ಅಲ್ಲದೇ ಜನ ಈಗಾಗಲೇ ಬೇರೆ ಬೇರೆ ಊರುಗಳಿಗೆ ವಲಸೆ ಹೋಗಿದ್ದಾರೆ. ಇನ್ನು ನೂರಾರು ದನ–ಕರುಗಳನ್ನು ಹೊಂದಿದವರು ತಾಲ್ಲೂಕಿನ ಹಂಪಿ, ಬುಕ್ಕಸಾಗರ ಸುತ್ತಮುತ್ತಲಿನ ಪ್ರದೇಶಕ್ಕೆ ವಲಸೆ ಬಂದು ವಾಸ್ತವ್ಯ ಹೂಡಿದ್ದಾರೆ.

ADVERTISEMENT

ಸುಮಾರು ಹತ್ತಕ್ಕೂ ಹೆಚ್ಚು ದನಗಾಹಿ ಕುಟುಂಬಗಳು ಐದು ನೂರಕ್ಕೂ ಹೆಚ್ಚು ಗೋವುಗಳೊಂದಿಗೆ ಹಂಪಿಗೆ ಬಂದಿದ್ದಾರೆ. ಬಯಲಿನಲ್ಲೇ ಟೆಂಟ್‌ ಹೊಡೆದುಕೊಂಡು ಜೀವನ ಸಾಗಿಸುತ್ತಿದ್ದಾರೆ. ದನಗಳು ಬಯಲು, ಬೆಟ್ಟ ಗುಡ್ಡಗಳಲ್ಲಿ ಮುಕ್ತವಾಗಿ ಓಡಾಡಿಕೊಂಡು ಮೇಯುತ್ತಿವೆ. ಅಂದಹಾಗೆ, ಕನಕಗಿರಿಯಿಂದ ಹಂಪಿಗೆ ವಲಸೆ ಬರುತ್ತಿರುವುದು ಇದೇ ಮೊದಲೇನಲ್ಲ. ಈ ಹಿಂದೆಯೂ ಸಾಕಷ್ಟು ಸಲ ಇಲ್ಲಿಗೆ ಬಂದಿದ್ದಾರೆ. ಹೋದ ವರ್ಷವೂ ಕನಕಗಿರಿ ಸುತ್ತಮುತ್ತ ಬರಗಾಲ ಇತ್ತು. ಆ ಸಂದರ್ಭದಲ್ಲೂ ನೂರಾರು ದನಗಳೊಂದಿಗೆ ಇಲ್ಲಿಗೆ ಬಂದು ವಾಸ್ತವ್ಯ ಹೂಡಿದ್ದರು.

‘ಮೂರು ವರ್ಷಗಳಿಂದ ಬೆಂಬಿಡದೆ ಬರ ನಮ್ಮನ್ನು ಕಾಡುತ್ತಿದೆ. ಮನುಷ್ಯರಷ್ಟೇ ಇದ್ದರೆ ಎಲ್ಲಿಗಾದರೂ ಹೋಗಿ ಜೀವನ ನಡೆಸಬಹುದು. ನಮ್ಮ ಜತೆ ಸಾಕಷ್ಟು ದನ–ಕರುಗಳು ಇವೆ. ಅವುಗಳನ್ನು ಬಿಟ್ಟು ಹೋಗಲು ಆಗುವುದಿಲ್ಲ. ಅವುಗಳೊಂದಿಗೆ ಹಂಪಿಗೆ ಬಂದಿದ್ದೇವೆ. ಕೆಲವರು ಬುಕ್ಕಸಾಗರ ಸುತ್ತಮುತ್ತ ಉಳಿದುಕೊಂಡಿದ್ದಾರೆ’ ಎಂದು ಕನಕಗಿರಿಯ ಕರಿಯಪ್ಪ ‘ಪ್ರಜಾವಾಣಿ’ಗೆ ತಿಳಿಸಿದರು.

‘ಹಂಪಿ ಸುತ್ತಮುತ್ತ ಉತ್ತಮ ರೀತಿಯಲ್ಲಿ ಮಳೆಯಾಗಿದೆ. ಎಲ್ಲ ಕಡೆ ಹಚ್ಚ ಹಸಿರು ಇದೆ. ಮೇವಿಗೆ ಯಾವುದೇ ಸಮಸ್ಯೆಯಿಲ್ಲ. ಅಷ್ಟೇ ಅಲ್ಲ, ಈ ಬಾರಿ ತುಂಗಭದ್ರಾ ನದಿಯಲ್ಲೂ ಸಾಕಷ್ಟು ನೀರಿದೆ. ಮೇವು, ನೀರು ಯಥೇಚ್ಛವಾಗಿದೆ. ಅದನ್ನು ನೋಡಿಕೊಂಡೇ ಇಲ್ಲಿಗೆ ಬಂದಿದ್ದೇವೆ. ದನ, ಕರುಗಳು ಮೇವು ತಿಂದು, ಎಲ್ಲೆಡೆ ಹಾಯಾಗಿ ಓಡಾಡಿಕೊಂಡಿವೆ. ಅವುಗಳ ಜೀವ ಉಳಿದಿರುವುದೇ ದೊಡ್ಡದು’ ಎಂದು ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.