ಬಳ್ಳಾರಿ: ರಾಜ್ಯದಲ್ಲಿ ಹಿಂಗಾರು ಹಂಗಾಮಿನಲ್ಲಿ ಬೆಳೆದ 1 ಲಕ್ಷ ಮೆಟ್ರಿಕ್ ಟನ್ (10 ಲಕ್ಷ ಕ್ವಿಂಟಲ್) ಬಿಳಿ ಜೋಳವನ್ನು ಬೆಂಬಲ ಬೆಲೆ ಯೋಜನೆಯಡಿ (ಎಂಎಸ್‌ಪಿ) ಖರೀದಿಸಲು ಜಿಲ್ಲೆಗಳಿಗೆ ಹೇರಿರುವ ಮಿತಿ ಸಮಸ್ಯೆ ಸೃಷ್ಟಿಸಿದೆ. ಸರ್ಕಾರದ ಮಿತಿಗೂ, ವಾಸ್ತವದಲ್ಲಿ ರೈತರು ಬೆಳೆದಿರುವ ಬೆಳೆಗೂ ಅಜಗಜಾಂತರ ವ್ಯತ್ಯಾಸ ಕಂಡು ಬಂದಿದೆ.
ಬೆಂಬಲ ಬೆಲೆಯಡಿ ಮಾಲ್ದಂಡಿ ಜೋಳ ಪ್ರತಿ ಕ್ವಿಂಟಲ್‌ಗೆ ₹3,421, ಹೈಬ್ರಿಡ್ ಜೋಳ ಪ್ರತಿ ಕ್ವಿಂಟಲ್‌ಗೆ ₹3,371 ನಿಗದಿ ಮಾಡಲಾಗಿತ್ತು. ಕರ್ನಾಟಕ ಆಹಾರ ಮತ್ತು ನಾಗರಿಕ ಸರಬರಾಜು ನಿಗಮವು ನೋಡಲ್ ಏಜೆನ್ಸಿಯಾಗಿದೆ. ಪ್ರತಿ ರೈತರಿಂದ ಎಕರೆಗೆ 20 ಕ್ವಿಂಟಲ್‌ನಂತೆ ಗರಿಷ್ಠ 150 ಕ್ವಿಂಟಲ್ ಬಿಳಿಜೋಳ ಖರೀದಿಸಲು ಉದ್ದೇಶಿಸಲಾಗಿದೆ.
ಆದರೆ, ಖರೀದಿ ವೇಳೆ ಬಳ್ಳಾರಿಗೆ 40 ಸಾವಿರ ಕ್ವಿಂಟಲ್, ರಾಯಚೂರಿಗೆ 80 ಸಾವಿರ ಕ್ವಿಂಟಲ್ ಸೇರಿ ಬೇರೆ ಬೇರೆ ಜಿಲ್ಲೆಗಳಿಗೆ ಬೇರೆ ಬೇರೆ ಪ್ರಮಾಣದ ಮಿತಿ ನಿಗದಿ ಮಾಡಲಾಗಿದೆ.
ಬಳ್ಳಾರಿ ಜಿಲ್ಲೆಯಲ್ಲಿ ಹಿಂಗಾರು ಹಂಗಾಮಿನಲ್ಲಿ 59,305 ಎಕರೆ (24 ಸಾವಿರ ಹೆಕ್ಟೇರ್) ಪ್ರದೇಶದಲ್ಲಿ ಹೈಬ್ರಿಡ್ ಜೋಳ ಬೆಳೆಯಲಾಗಿದೆ. ಒಂದು ಎಕರೆಗೆ 28 ರಿಂದ 30 ಕ್ವಿಂಟಲ್ ಇಳುವರಿ ಸಿಕ್ಕಿದೆ. ಎಕರೆಗೆ ಕನಿಷ್ಠ 20 ಕ್ವಿಂಟಲ್ ಎಂದು ಲೆಕ್ಕ ಹಾಕಿದರೂ, ಅಂದಾಜು 11.80 ಲಕ್ಷ ಕ್ವಿಂಟಲ್ ಬೆಳೆ ಕೈಸೇರಿದೆ. ಆದರೆ, ಸರ್ಕಾರ ಜಿಲ್ಲೆಯಲ್ಲಿ ಖರೀದಿಸುತ್ತಿರುವುದು ಕೇವಲ 40 ಸಾವಿರ ಕ್ವಿಂಟಲ್ (4 ಸಾವಿರ ಟನ್).
ರಾಜ್ಯದಲ್ಲಿ ಮಾಲ್ದಂಡಿ ಮತ್ತು ಹೈಬ್ರಿಡ್ ಜೋಳ ಎಂಬ ಎರಡು ವಿಧದ ಬೆಳೆಗಳನ್ನು ಬೆಳೆಯಲಾಗುತ್ತದೆ. ವಿಜಯಪುರ, ಬಾಗಲಕೋಟೆ ಸೇರಿ ಇತರ ಜಿಲ್ಲೆಗಳಲ್ಲಿ ಮಾಲ್ದಂಡಿ ಹೆಚ್ಚು ಬೆಳೆಯಲಾಗುತ್ತದೆ. ಮಾಲ್ದಂಡಿ ಜೋಳದ ಮಾರುಕಟ್ಟೆ ದರವು ಬೆಂಬಲ ಬೆಲೆಗಿಂತಲೂ ಅಧಿಕವಿದೆ. ಅದಕ್ಕೆ ಸರ್ಕಾರಕ್ಕೆ ಮಾರುವವರಿಲ್ಲ. ಬೆಂಬಲ ಬೆಲೆ ಯೋಜನೆಯಡಿ ಮಾರಲೆಂದೇ ಬಳ್ಳಾರಿ, ರಾಯಚೂರು, ವಿಜಯನಗರ ಜಿಲ್ಲೆಗಳಲ್ಲಿ ಹೈಬ್ರಿಡ್ ಜೋಳವನ್ನು ಹೆಚ್ಚು ಬೆಳೆಯಲಾಗುತ್ತದೆ.
‘ಈ ಹಿಂದೆ ಯಾವ ವರ್ಷವೂ ಹೀಗೆ ಮಿತಿ ಹೇರಿರಲಿಲ್ಲ. ಈ ಹಿಂದಿನ ಮುಂಗಾರು ಬೆಳೆಗೂ ಮಿತಿ ಇರಲಿಲ್ಲ. ಇದೇ ಮೊದಲ ಬಾರಿಗೆ ಇಂಥ ಮಿತಿ ಹಾಕಲಾಗಿದೆ’ ಎಂದು ಅಧಿಕಾರಿಗಳು ಹೇಳಿದ್ದಾರೆ.
ಖರೀದಿ ಕೇಂದ್ರಕ್ಕೆ ಬೀಗ ಹಾಕಿ ಪ್ರತಿಭಟನೆ
ಬಳ್ಳಾರಿ ಜೋಳ ನೋಂದಣಿ ಪ್ರಕ್ರಿಯೆ ಮುಗಿದಿರುವುದು ತಿಳಿದು ರೈತರು ಎಪಿಎಂಸಿ ಆವರಣದ ಖರೀದಿ ಕೇಂದ್ರಕ್ಕೆ ಬೀಗ ಹಾಕಿ ಮಂಗಳವಾರ ಪ್ರತಿಭಟಿಸಿದರು. ನೋಂದಣಿಯಲ್ಲಿ ಅಕ್ರಮ ನಡೆದಿದೆ ಎಂದು ಆರೋಪಿಸಿದರು. ಖರೀದಿಯಲ್ಲಿ ಜಿಲ್ಲೆಗೆ ಮಿತಿ ವಿಧಿಸಿರುವುದನ್ನು ವಿರೋಧಿಸಿದರು.
ಮಿತಿ ವಿಧಿಸಿ ರೈತರಿಂದ ಜೋಳ ಖರೀದಿಸಿದರೆ ಉಳಿದ ಬೆಳೆ ಮತ್ತು ರೈತರ ಗತಿಯೇನು? ನೋಂದಣಿಯಲ್ಲಿ ಅಕ್ರಮ ನಡೆದಿದೆ. ಸರ್ಕಾರ ಕೂಡಲೇ ಇದನ್ನು ಗಮನಿಸಬೇಕು.ಮಾಧವ ರೆಡ್ಡಿ, ರಾಜ್ಯ ರೈತ ಸಂಘ–ಹಸಿರು ಸೇನೆ ಅಧ್ಯಕ್ಷ
ರಾಜ್ಯದ ಚಿತ್ರಣ ಅವಲೋಕಿಸಿ ಸರ್ಕಾರವು ಜಿಲ್ಲೆಗಳಿಗೆ ಖರೀದಿ ಪ್ರಮಾಣ ನಿಗದಿಪಡಿಸಿದೆ. ಬಳ್ಳಾರಿ ಜಿಲ್ಲೆಯ ಮಿತಿ ಹೆಚ್ಚಿಸಲು ಸರ್ಕಾರಕ್ಕೆ ಕೋರಲಾಗಿದೆ. ಕನಿಷ್ಠ 20 ಸಾವಿರ ಕ್ವಿಂಟಲ್ ಹೆಚ್ಚುವರಿ ಖರೀದಿಗೆ ಅವಕಾಶ ಸಿಗಬಹುದು.ಮೊಹಮದ್ ಝುಬೇರ, ಹೆಚ್ಚುವರಿ ಜಿಲ್ಲಾಧಿಕಾರಿ ಬಳ್ಳಾರಿ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.