ADVERTISEMENT

ಹೊಸಪೇಟೆ: ನಷ್ಟದಲ್ಲಿ ಸರಕು ಲಾರಿ ಮಾಲೀಕರು

ಡೀಸೆಲ್‌ ದರ ಸತತ ಹೆಚ್ಚಳದಿಂದ ಕಂಗಾಲಾಗಿರುವ ಗೂಡ್ಸ್‌ ವಾಹನ ವಾರಸುದಾರರು

ಶಶಿಕಾಂತ್ ಎಸ್. ಶೆಂಬೆಳ್ಳಿ
Published 28 ಜುಲೈ 2021, 19:30 IST
Last Updated 28 ಜುಲೈ 2021, 19:30 IST
–ಸಾಂದರ್ಭಿಕ ಚಿತ್ರ
–ಸಾಂದರ್ಭಿಕ ಚಿತ್ರ   

ಹೊಸಪೇಟೆ: ಡೀಸೆಲ್‌ ದರ ಸತತವಾಗಿ ಏರಿಕೆ ಆಗುತ್ತಿರುವುದರಿಂದ ಸರಕು ಸಾಗಣೆ ಲಾರಿ ಮಾಲೀಕರು ತೀವ್ರ ಸಂಕಷ್ಟಕ್ಕೆ ಒಳಗಾಗಿದ್ದಾರೆ.

ಅವಳಿ ಜಿಲ್ಲೆಗಳಾದ ಹೊಸಪೇಟೆ– ಬಳ್ಳಾರಿಯಲ್ಲಿ ಹತ್ತು ಸಾವಿರಕ್ಕೂ ಅಧಿಕ ಲಾರಿಗಳಿವೆ. ಅದಿರು, ಸ್ಪಾಂಜ್‌, ಉಕ್ಕಿನ ಕಚ್ಚಾ ಸಾಮಗ್ರಿಗಳು, ಭತ್ತ ಸೇರಿದಂತೆ ಇತರೆ ವಸ್ತುಗಳನ್ನು ಸಾಗಣೆ ಮಾಡುತ್ತವೆ. ಸರಕು ಸಾಗಣೆಗೆ ಇಪ್ಪತ್ತು ವರ್ಷಗಳ ಹಿಂದೆ ಯಾವ ಬೆಲೆಯಿತ್ತೋ ಈಗಲೂ ಅದೇ ಇದೆ. ಆದರೆ, ಡೀಸೆಲ್‌ ದರ ಮಾತ್ರ ದುಪ್ಪಟ್ಟು ಆಗಿದೆ. ಹೀಗಾಗಿ ನಷ್ಟದಲ್ಲಿ ಅವರು ವ್ಯವಹಾರ ನಡೆಸುತ್ತಿದ್ದಾರೆ.

ಡೀಸೆಲ್‌ ದರ ಹೆಚ್ಚಿರುವುದರಿಂದ ಸಹಜವಾಗಿಯೇ ಹೆಚ್ಚಿನ ಆರ್ಥಿಕ ಹೊರೆ ಬೀಳುತ್ತಿದೆ. ಸರಕು ಸಾಗಣೆ ದರ ಪರಿಷ್ಕರಿಸಬೇಕು ಎಂದು ಎರಡ್ಮೂರು ವರ್ಷಗಳಿಂದ ಲಾರಿ ಮಾಲೀಕರು ಸರ್ಕಾರಕ್ಕೆ ಮೇಲಿಂದ ಮೇಲೆ ಮನವಿ ಸಲ್ಲಿಸುತ್ತಿದ್ದಾರೆ. ಆದರೆ, ಯಾರೊಬ್ಬರೂ ಅದಕ್ಕೆ ಕಿವಿಗೊಟ್ಟಿಲ್ಲ. ಏನು ಮಾಡಬೇಕು ಎನ್ನುವುದು ಅವರಿಗೆ ದಿಕ್ಕು ತೋಚುತ್ತಿಲ್ಲ.

ADVERTISEMENT

‘ಹತ್ತು ವರ್ಷಗಳ ಹಿಂದೆ ಪ್ರತಿ ಲೀಟರ್‌ ಡೀಸೆಲ್‌ ದರ ₹55ರಿಂದ ₹60 ಇತ್ತು. ಈಗ ನೂರರ ಸನಿಹಕ್ಕೆ ಬಂದಿದೆ. ಆದರೆ, ಸರಕು ಸಾಗಣೆಯ ಬೆಲೆ ಹಳೆಯದೇ ಇದೆ. ಲಾರಿ ಮಾಲೀಕರಿಗೆ ಹೆಚ್ಚಿನ ಖರ್ಚು ಬರುವುದೇ ಡೀಸೆಲ್‌ನಿಂದ. ಇದನ್ನು ತಿಳಿಯಲು ಹೆಚ್ಚು ಬುದ್ಧಿವಂತಿಕೆ ಬೇಕಿಲ್ಲ. ಆದರೂ,ಸರ್ಕಾರ ಸಮಸ್ಯೆ ಬಗೆಹರಿಸಲು ಮುಂದಾಗುತ್ತಿಲ್ಲ’ ಎನ್ನುತ್ತಾರೆ ಲಾರಿ ಮಾಲೀಕರ ಸಂಘದ ಕಾರ್ಯದರ್ಶಿ ಮುಕ್ತಾರ್‌ ಮಾಬು.

‘ಕೆಲವರು ಒಂದೆರಡು ಲಾರಿ ಹೊಂದಿದ್ದರೆ, ಕೆಲವೆಡೆ 30ರಿಂದ 40 ಲಾರಿ ಹೊಂದಿದವರು ಇದ್ದಾರೆ. ಆದರೆ, ಒಬ್ಬೊಬ್ಬರದು ಒಂದೊಂದು ರೀತಿಯ ಸಮಸ್ಯೆ ಇದೆ. ಅದರಲ್ಲೂ ಒಂದೋ, ಎರಡೋ ಲಾರಿ ಇಟ್ಟುಕೊಂಡವರಿಗೆ ತೈಲ ದರ ಸರಿದೂಗಿಸಿಕೊಂಡು ವ್ಯವಹಾರ ನಡೆಸುವುದು ಬಹಳ ಕಷ್ಟವಾಗುತ್ತಿದೆ’ ಎಂದು ಗೋಳು ತೋಡಿಕೊಂಡರು.

‘ಕೆಲವರು ಅನ್ಯ ವ್ಯವಹಾರಗಳ ಜೊತೆಗೆ ಲಾರಿಗಳನ್ನು ಇಟ್ಟುಕೊಂಡಿದ್ದಾರೆ. ಆದರೆ, ಯಾರೂ ಕೂಡ ನಷ್ಟದಲ್ಲಿ ವ್ಯವಹಾರ ನಡೆಸಲು ಬಯಸುವುದಿಲ್ಲ. ಈಗಾಗಲೇ ಕೆಲವರು ಈ ವ್ಯವಹಾರ ಬಿಟ್ಟು ಹೋಗಿದ್ದಾರೆ. ಸರ್ಕಾರ ನಮ್ಮ ಮನವಿಗೆ ಸ್ಪಂದಿಸದಿದ್ದಲ್ಲಿ ಅನೇಕರು ಈ ಕ್ಷೇತ್ರದಿಂದ ಹಿಂದೆ ಸರಿಯಬಹುದು’ ಎಂದು ಆತಂಕ ವ್ಯಕ್ತಪಡಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.