ADVERTISEMENT

ಕಳಪೆ ಆಹಾರ ಪೂರೈಕೆ: ಶಾಸಕರ ಆಕ್ರೋಶ

ಜವಾಹರ್ ನವೋದಯ ವಿದ್ಯಾಲಯದಲ್ಲಿ ಅವ್ಯವಸ್ಥೆ

​ಪ್ರಜಾವಾಣಿ ವಾರ್ತೆ
Published 10 ಜೂನ್ 2025, 15:40 IST
Last Updated 10 ಜೂನ್ 2025, 15:40 IST
ಕೂಡ್ಲಿಗಿ ತಾಲ್ಲೂಕಿನ ಚಿಕ್ಕಜೋಗಿಹಳ್ಳಿಯಲ್ಲಿನ ಜವಾಹರ್ ನವೋದಯ ವಿದ್ಯಾಲಯಕ್ಕೆ ಮಂಗಳವಾರ ಭೇಟಿ ನೀಡಿದ ಶಾಸಕ ಡಾ. ಶ್ರೀನಿವಾಸ್ ಎನ್.ಟಿ. ಅವರು ಅಲ್ಲಿ ಅಡುಗೆ ಕೋಣೆ ಪರಿಶೀಲಿಸಿದರು
ಕೂಡ್ಲಿಗಿ ತಾಲ್ಲೂಕಿನ ಚಿಕ್ಕಜೋಗಿಹಳ್ಳಿಯಲ್ಲಿನ ಜವಾಹರ್ ನವೋದಯ ವಿದ್ಯಾಲಯಕ್ಕೆ ಮಂಗಳವಾರ ಭೇಟಿ ನೀಡಿದ ಶಾಸಕ ಡಾ. ಶ್ರೀನಿವಾಸ್ ಎನ್.ಟಿ. ಅವರು ಅಲ್ಲಿ ಅಡುಗೆ ಕೋಣೆ ಪರಿಶೀಲಿಸಿದರು   

ಕೂಡ್ಲಿಗಿ: ತಾಲ್ಲೂಕಿನ ಚಿಕ್ಕಜೋಗಿಹಳ್ಳಿಯಲ್ಲಿನ ಪಿಎಂ ಶ್ರೀ ಜವಾಹಾರ್ ನವೋದಯ ವಿದ್ಯಾಲಯದಲ್ಲಿ ವಿದ್ಯಾರ್ಥಿಗಳಿಗೆ ಕಳಪೆ ಆಹಾರ ಪೂರೈಕೆ  ಮಾಡುತ್ತಿರುವುದನ್ನು ಗಮನಿಸಿದ ಶಾಸಕ ಡಾ.ಶ್ರೀನಿವಾಸ್ ಎನ್.ಟಿ. ಅಲ್ಲಿನ ಸಿಬ್ಬಂದಿಯ ವಿರುದ್ದ ತೀವ್ರ ಅಸಮಧಾನಗೊಂಡ ಘಟನೆ ಮಂಗಳವಾರ ನಡೆಯಿತು.

ಅರಣ್ಯ ಇಲಾಖೆ ಹಾಗೂ ವಿದ್ಯಾಲಯದಿಂದ ಮಂಗಳವಾರ ಹಮ್ಮಿಕೊಂಡಿದ್ದ ವಿಶ್ವ ಪರಿಸರ ದಿನಾಚರಣೆಯಲ್ಲಿ ಭಾಗಿಯಾಗಲು ವಿದ್ಯಾಲಯಕ್ಕೆ ಭೇಟಿ ನೀಡಿದ್ದ ಶಾಸಕರು ಕಾರ್ಯಕ್ರಮದ ನಂತರ ಗಣ್ಯರು ಹಾಗೂ ಪತ್ರಕರ್ತರೊಂದಿಗೆ ವಿದ್ಯಾರ್ಥಿನಿಯರ ವಸತಿ ನಿಲಯದ ಊಟದ ಕೊಠಡಿಗೆ ಹೋದಾಗ ವಿದ್ಯಾರ್ಥಿಗಳಿಗೆ ಕಳಪೆ ಆಹಾರ ಪೂರೈಕೆ ಮಾಡುತ್ತಿದ್ದ ಕಂಡು ಬಂದಿತು.

ಇದನ್ನು ಪತ್ರಕರ್ತರು ಶಾಸಕರ ಗಮನಕ್ಕೆ ತಂದಾಗ ಶಾಸಕ ಡಾ.ಶ್ರೀನಿವಾಸ್ ಅವರು ಪರಿಶೀಲಿಸಿದಾಗ ಅಡುಗೆ ಕೋಣೆಯಲ್ಲಿ ನೊಣಗಳು ಆಹಾರ ಸಾಮಗ್ರಿಗೆ ಮುತ್ತಿದ್ದವು. ವಿದ್ಯಾರ್ಥಿಗಳಿಗೆಂದು ಸಿದ್ದಪಡಿಸಲಾಗಿದ್ದ ವೆಜ್ ಪಲಾವ್‍ನಲ್ಲಿ ಒಂದೇ ಒಂದು ತರಕಾರಿ ಇದ್ದಿಲ್ಲ. ಅಕ್ಕಿಯೂ ಕಳಪೆಯಾಗಿತ್ತು, ಚಪಾತಿ ಹಿಟ್ಟು ಕಲಿಸುವ ಯಂತ್ರವನ್ನು ಸರಿಯಾಗಿ ಸ್ವಚ್ಛತೆ ಮಾಡದೆ ತುಕ್ಕು ಹಿಡಿದಂತಿತ್ತು.

ADVERTISEMENT

ಅಡುಗೆ ಮಾಡುವವರು ಸಹ ಸ್ವಚ್ಛವಿಲ್ಲದ್ದನ್ನು ಗಮನಿಸಿದ ಶಾಸಕರು ಅತ್ಯಂತ ಎಚ್ಚರಿಕೆಯಿಂದ ಕೆಲಸ ಮಾಡಬೇಕು. ವಿದ್ಯಾರ್ಥಿಗಳಿಗೆ ನೀಡುವ ಆಹಾರ ಗುಣಮಟ್ಟದ್ದಾಗಿರಲಿ ಎಂದು ವಸತಿ ನಿಲಯದ ಮೇಲ್ವಿಚಾರಕ ಹಾಗೂ ಪ್ರಾಚಾರ್ಯರಿಗೆ ತಾಕೀತು ಮಾಡಿದರು.

ಈ ಬಗ್ಗೆ ವಿದ್ಯಾರ್ಥಿಗಳಾಗಲಿ, ಅವರ ಪೋಷಕರಾಗಲಿ ಪ್ರಶ್ನಿಸಿದರೆ ಅಂತಹ ಮಕ್ಕಳನ್ನು ಶಿಕ್ಷಿಸಲಾಗುತ್ತದೆ ಎಂಬ ದೂರು ಸಹ ಕೇಳಿ ಬಂದಿತು.

ಇನ್ನೂ ವಿದ್ಯಾರ್ಥಿಗಳ ವಸತಿ ನಿಲಯಗಳ ಸುತ್ತ ಬೆಳೆದು ನಿಂತಿದ್ದ ಗಿಡಕಂಟೆಗಳ ಮಧ್ಯ ಇದ್ದ ನಾಗರ ಹಾವೊಂದನ್ನು ಎಲ್ಲರು ನೋಡಿದರು. ಅದನ್ನು ಹಿಡಿದು ಬೇರೆ ಕಡೆ ಸಾಗಿಸುವಂತೆ ಸ್ಥಳದಲ್ಲಿದ್ದ ಅರಣ್ಯಾಧಿಕಾರಿಗಳಿಗೆ ಶಾಸಕರು ಸೂಚನೆ ನೀಡಿದರು.

ಇಷ್ಟೇಲ್ಲ ಅವ್ಯವಸ್ಥೆ ಗಮನಿಸಿದ ಶಾಸಕ ಡಾ. ಶ್ರೀನಿವಾಸ್ ಎನ್.ಟಿ. ಅವರು, ನವೋದಯ ವಿದ್ಯಾಲಯಕ್ಕೆ ತನ್ನದೇ ಘನತೆ ಇದ್ದು, ಸಾವಿರಾರು ವಿದ್ಯಾರ್ಥಿಗಳು ಇಲ್ಲಿ ಅಭ್ಯಾಸ ಮಾಡಿ ಉನ್ನತ ಹುದ್ದೆಗಳನ್ನು ಪಡೆದಿದ್ದಾರೆ. ಅದಕ್ಕೆ ತಕ್ಕಂತೆ ಕರ್ತವ್ಯ ಪಾಲನೆ ಮಾಡಿ ಎಂದು ಪ್ರಾಚಾರ್ಯ ಸುದೇಶ್ ಗೋಪಾಲ ಅವರಿಗೆ ಖಡಕ್ ಸೂಚನೆ ನೀಡಿದರು.

ನಂತರ ಹೊಸಪೇಟೆ ಸಹಾಯಕ ಆಯುಕ್ತ ವಿವೇಕಾನಂದ ಅವರೊಂದಿಗೆ ಪೋನಿನಲ್ಲಿ ಮಾತನಾಡಿದ ಶಾಸಕರು ವಿದ್ಯಾಲಯದಲ್ಲಿನ ಕಳಪೆ ಆಹಾರದ ಬಗ್ಗೆ ಪರಿಶೀಲನೆ ಮಾಡುವಂತೆ ಹೇಳಿದರು.

ಗ್ರಾಮ ಪಂಚಾಯ್ತಿ ಅಧ್ಯಕ್ಷ ಎಂ.ಸಿ. ಅಶೋಕ ನಾಯ್ಕ್, ಎಪಿಎಂಸಿ ಅಧ್ಯಕ್ಷ ಎಂ. ಮುತ್ತೆಪಾಲಯ್ಯ, ಪಿಡಿಒ ಭರತ್ ಕುಮಾರ್, ಗ್ರಾಪಂ ಸದಸ್ಯರಾದ ರಾಜೇಶ್ ನಾಯ್ಕ್, ಓಬಣ್ಣ ಇದ್ದರು.

10KDL3 : ಕೂಡ್ಲಿಗಿ ತಾಲ್ಲೂಕಿನ ಚಿಕ್ಕಜೋಗಿಹಳ್ಳಿಯಲ್ಲಿನ ಜವಾಹಾರ್ ನವೋದಯ ವಿದ್ಯಾಲಯದಲ್ಲಿ ವಿದ್ಯಾರ್ಥಿಗಳಿಗೆ ನೀಡಲು ಸಿದ್ದಪಡಿಸಿದ್ದ ವೆಜ್  ಪಲಾವ್.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.