ADVERTISEMENT

ಮಾದಿಗ ಕೇರಿ, ಹಟ್ಟಿಗಳಲ್ಲಿ ಶಿಕ್ಷಣ ಜಾಗೃತಿ

ಅಂಬೇಡ್ಕರ್ ಮೂರ್ತಿ ಅನಾವರಣ ಸಮಾರಂಭ: ಬಸವಮೂರ್ತಿ ಮಾದಾರ ಚನ್ನಯ್ಯ ಶ್ರೀ ಹೇಳಿಕೆ

​ಪ್ರಜಾವಾಣಿ ವಾರ್ತೆ
Published 27 ಏಪ್ರಿಲ್ 2025, 13:10 IST
Last Updated 27 ಏಪ್ರಿಲ್ 2025, 13:10 IST
ಹರಪನಹಳ್ಳಿ ತಾಲ್ಲೂಕಿನ ಬಾಗಳಿ ಗ್ರಾಮದಲ್ಲಿ ಅಂಬೇಡ್ಕರ ಮೂರ್ತಿ ಅನಾವರಣ ಮಾಡಲಾಯಿತು 
ಹರಪನಹಳ್ಳಿ ತಾಲ್ಲೂಕಿನ ಬಾಗಳಿ ಗ್ರಾಮದಲ್ಲಿ ಅಂಬೇಡ್ಕರ ಮೂರ್ತಿ ಅನಾವರಣ ಮಾಡಲಾಯಿತು    

ಹರಪನಹಳ್ಳಿ: ‘ಮಾದಿಗ ಕೇರಿ, ಹಟ್ಟಿಗಳಲ್ಲಿ ಅಂಬೇಡ್ಕರ್‌ ಮೂರ್ತಿ ನಿರ್ಮಾಣದಿಂದ ಶಿಕ್ಷಣ ಜಾಗೃತಿ ಆಗುತ್ತಿರುವುದು ಸಮಧಾನಕರ’ ಎಂದು ಚಿತ್ರದುರ್ಗ ಮಾದಾರ ಚನ್ನಯ್ಯ ಗುರುಪೀಠದ ಬಸವಮೂರ್ತಿ ಮಾದಾರ ಚನ್ನಯ್ಯ ಸ್ವಾಮೀಜಿ ಹೇಳಿದರು.

ತಾಲ್ಲೂಕಿನ ಬಾಗಳಿ ಗ್ರಾಮದಲ್ಲಿ ಡಾ.ಬಿ.ಆರ್.ಅಂಬೇಡ್ಕರ್ ಮಾದಿಗ ಸಂಘದಿಂದ ಭಾನುವಾರ ಆಯೋಜಿಸಿದ್ದ ಅಂಬೇಡ್ಕರ ಮೂರ್ತಿ ಅನಾವರಣ ಸಮಾರಂಭದ ಸಾನ್ನಿಧ್ಯ ವಹಿಸಿ ಮಾತನಾಡಿದರು.

‘ಅಂಬೇಡ್ಕರ್‌ ಹೇಳಿದಂತೆ ಸಂಘಟನೆ, ಹೋರಾಟದಲ್ಲಿ ಮುಂದಿದ್ದೇವೆ, ಆದರೆ ಪ್ರಮುಖ ಶಿಕ್ಷಣದಲ್ಲಿ ಹಿಂದೆ ಇರುವುದು ವಿಷಾದದ ಸಂಗತಿ. ನಮ್ಮ ಆರಾಧ್ಯ ದೈವ ಅಂಬೇಡ್ಕರ್‌ ಪುತ್ಥಳಿ ನಿರ್ಮಿಸುವ ನೆಪದಲ್ಲಾದರೂ ಎಲ್ಲರಿಗೂ ಶಿಕ್ಷಣ ಕೊಡಿಸಿ’ ಎಂದರು.

ADVERTISEMENT

ನೀಲಗುಂದ ಗುಡ್ಡದ ವಿರಕ್ತ ಮಠದ ಚನ್ನಬಸವ ಶಿವಯೋಗಿ ಸ್ವಾಮೀಜಿ ಮಾತನಾಡಿ, ‘ಬುದ್ದ, ಬಸವ ಮತ್ತು ಅಂಬೇಡ್ಕರ್‌ ಆದರ್ಶ ತಿಳಿದುಕೊಳ್ಳಬೇಕು’ ಎಂದು ಹೇಳಿದರು.

ಶಾಸಕಿ ಎಂ.ಪಿ.ಲತಾ ಮಲ್ಲಿಕಾರ್ಜುನ, ‘ಜಯಂತಿ ಮಾಡುವುದಕ್ಕಿಂತ ಪಾಲಿಸುವ ಅಗತ್ಯವಿದೆ. ನಮ್ಮ ಹಕ್ಕು ಪಡೆಯಲು ಹೊಡೆದಾಡುವ ಅಗತ್ಯವಿಲ್ಲ. ನಡೆ, ನುಡಿಯಿಂದ ಪಡೆಯಬೇಕು. ಮೂರ್ತಿ ಪ್ರತಿಷ್ಠಾಪಿಸುವುದಷ್ಟೆ ಅಲ್ಲ, ಅಗೌರವ ಆಗದಂತೆ ನೋಡಿಕೊಳ್ಳಿ’ ಎಂದು ಸಲಹೆ ನೀಡಿದರು.

ಕಾಂಗ್ರೆಸ್ ಪಕ್ಷದ ಮುಖಂಡ ಕೋಡಿಹಳ್ಳಿ ಭೀಮಪ್ಪ, ‘ಎಲ್ಲ ಮಕ್ಕಳಿಗೂ ಶಿಕ್ಷಣ ಕೊಡಿಸಿದಾಗ ಮಾತ್ರ ಸಮ ಸಮಾಜದ ಕನಸು ಕಂಡಿದ್ದ ಅಂಬೇಡ್ಕರ್‌ ಆಶಯಗಳಿಗೆ ಗೌರವ ಸಲ್ಲುತ್ತದೆ’ ಎಂದು ಹೇಳಿದರು.

ತೆಗ್ಗಿನಮಠದ ವರಸದ್ಯೋಜಾತ ಶಿವಾಚಾರ್ಯ ಸ್ವಾಮೀಜಿ, ‘ಅಂಬೇಡ್ಕರ್‌ ಒಂದು ಜಾತಿಗೆ ಸೀಮಿತರಲ್ಲ’ ಎಂದರು.

ಬಿಜೆಪಿ ಮುಖಂಡ ಕಣಿವಿಹಳ್ಳಿ ಮಂಜುನಾಥ, ‘ಪುತ್ಥಳಿ ನಿರ್ಮಿಸುವಷ್ಟೆ ಕಾಳಜಿ ಶಿಕ್ಷಣ ಕೊಡಿಸುವಲ್ಲಿಯು ಇದ್ದರೆ, ಸಂವಿಧಾನ ಶಿಲ್ಪಿಯ ಆಶಯ ಈಡೇರುತ್ತದೆ’ ಎಂದು ತಿಳಿಸಿದರು.

ಕೂಲಹಳ್ಳಿ ಗೋಣಿ ಬಸವೇಶ್ವರ ಸಂಸ್ಥಾನ ಮಠದ ಚಿನ್ಮಯಿ ಸ್ವಾಮೀಜಿ, ಚಿತ್ರದುರ್ಗ ಜಿಲ್ಲಾ ಸರ್ಕಾರಿ ನೌಕರರ ಸಂಘದ ಅಧ್ಯಕ್ಷ ಮುದ್ದಜ್ಜಿ ಮಾಲತೇಶ್, ನಾಟಿ ವೈದ್ಯ ಬಡಮ್ಮನರ ಹೊಸೂರಪ್ಪ , ಎಂ.ಪಿ.ವೀಣಾ ಮಹಾಂತೇಶ್, ಹಲಗೇರಿ ಮಂಜಪ್ಪ, ಹುಲಿಕಟ್ಟೆ ಚಂದ್ರಪ್ಪ, ಒ.ರಾಮಪ್ಪ ಮಾತನಾಡಿದರು. ಗ್ರಾಮಪಂಚಾಯ್ತಿ ಅಧ್ಯಕ್ಷೆ ಉತ್ತಂಗಿ ರೇಣುಕಮ್ಮ, ಉಪಾಧ್ಯಕ್ಷೆ ಕರಿಯಮ್ಮ, ಬಣಕಾರ ಮಂಜಣ್ಣ, ಚನ್ನಬಸಪ್ಪ, ಕೆ.ಸುಭಾಷ್, ಸರ್ಕಾರಿ ನೌಕರರ ಸಂಘದ ಅಧ್ಯಕ್ಷ ಎನ್.ಜಿ.ಮನೋಹರ, ರಾಜ್ಯ ಪರಿಷತ್ ಸದಸ್ಯ ಎಂ.ಶರೀಫ್, ಗುರುಮೂರ್ತಿ, ಬಾಗಳಿ ಕೊಟ್ರೇಶಪ್ಪ, ಚಾಕರಿ ದುರುಗಪ್ಪ, ಎನ್.ಹಾಲಪ್ಪ, ಮಾಳಗಿ ದೊಡ್ಡ ಚೌಡಪ್ಪ, ಗೋಣೆಪ್ಪ, ಮಹಾಂತೇಶ್ ಇತರರಿದ್ದರು.

ಇದಕ್ಕೂ ಮುನ್ನ ಗ್ರಾಮದ ಪ್ರಮುಖ ಬೀದಿಗಳಲ್ಲಿ ಮೆರವಣಿಗೆ ನಡೆಯಿತು. ಗಾಯಕ ದುರುಗಪ್ಪ, ಬಾಗಳಿ ರೇವಣ್ಣ ಸಂಗೀತ ಕಾರ್ಯಕ್ರಮ ನಡೆಸಿಕೊಟ್ಟರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.