ADVERTISEMENT

ಸದ್ಭಾವನೆಗೆ ಹಾಸನ ಮಲ್ಲೇಗೌಡ ಭಾರತ ಯಾತ್ರೆ

ಶಶಿಕಾಂತ್ ಎಸ್. ಶೆಂಬೆಳ್ಳಿ
Published 11 ಜುಲೈ 2019, 9:55 IST
Last Updated 11 ಜುಲೈ 2019, 9:55 IST
ವಿಶ್ವಶಾಂತಿ, ಸದ್ಭಾವನೆಗಾಗಿ ಹಾಸನದ ಮಲ್ಲೇಗೌಡ ನಾಗರಾಜಗೌಡ ಬೈಸಿಕಲ್‌ನಲ್ಲಿ ಭಾರತ ಯಾತ್ರೆ ಕೈಗೊಂಡಿರುವುದು
ವಿಶ್ವಶಾಂತಿ, ಸದ್ಭಾವನೆಗಾಗಿ ಹಾಸನದ ಮಲ್ಲೇಗೌಡ ನಾಗರಾಜಗೌಡ ಬೈಸಿಕಲ್‌ನಲ್ಲಿ ಭಾರತ ಯಾತ್ರೆ ಕೈಗೊಂಡಿರುವುದು   

ಹೊಸಪೇಟೆ: ರಾಷ್ಟ್ರೀಯ ಏಕತೆ, ಸದ್ಭಾವನೆಗಾಗಿ ಹಾಸನದ ಮಲ್ಲೇಗೌಡ ನಾಗರಾಜಗೌಡ ಅವರು ಏಕಾಂಗಿಯಾಗಿ ಬೈಸಿಕಲ್‌ನಲ್ಲಿ ಭಾರತ ಯಾತ್ರೆ ಕೈಗೊಂಡಿದ್ದಾರೆ.

2017ರ ಡಿಸೆಂಬರ್‌ 3ರಂದು ಮುಂಬೈನಿಂದ ಆರಂಭಗೊಂಡಿರುವ ಅವರ ಬೈಸಿಕಲ್‌ ಯಾತ್ರೆ, ಗುರುವಾರ ಸಂಜೆ ಪಾರಂಪರಿಕ ನಗರಿ ಹೊಸಪೇಟೆ ತಲುಪಿತು.

ಮಹಾರಾಷ್ಟ್ರದ ಮುಂಬೈನಿಂದ ಪ್ರಾರಂಭಗೊಂಡ ಅವರ ಯಾತ್ರೆ, ಗುಜರಾತ್‌, ರಾಜಸ್ತಾನ, ಹರಿಯಾಣ, ಪಂಜಾಬ್‌, ಹಿಮಾಚಲ ಪ್ರದೇಶ, ಉತ್ತರಾಖಂಡ್‌, ನವದೆಹಲಿ, ಉತ್ತರ ಪ್ರದೇಶ, ಮಧ್ಯ ಪ್ರದೇಶ, ತೆಲಂಗಾಣದ ಮೂಲಕ ಹಾದು ಗಡಿ ಜಿಲ್ಲೆಬೀದರ್‌ ಮೂಲಕ ರಾಜ್ಯ ಪ್ರವೇಶಿಸಿತು. ಅಲ್ಲಿಂದ ಕಲಬುರ್ಗಿ, ವಿಜಯಪುರ, ಕೂಡಲಸಂಗಮ ಮಾರ್ಗವಾಗಿ ನಗರಕ್ಕೆ ಬಂದು ತಲುಪಿದರು.

ADVERTISEMENT

ನಿತ್ಯ 90ರಿಂದ 100 ಕಿ.ಮೀ ಕ್ರಮಿಸಿದ ನಂತರ ಆ ಭಾಗದಲ್ಲಿ ಬರುವ ಮಂದಿರ, ಮಸೀದಿ, ಗುರುದ್ವಾರ, ಗಾಂಧಿ ಆಶ್ರಮ, ಕರ್ನಾಟಕ ರಕ್ಷಣಾ ವೇದಿಕೆ, ರಾಷ್ಟ್ರೀಯ ಸ್ವಯಂ ಸೇವಕ ಸಂಘ ಸೇರಿದಂತೆ ಇತರೆ ಯಾವುದಾದರೂ ಸಂಘಟನೆಗೆ ಸಂಬಂಧಿಸಿದ ಸ್ಥಳದಲ್ಲಿ ರಾತ್ರಿ ಕಳೆಯುತ್ತಾರೆ. ಮರುದಿನ ಬೆಳಕು ಹರಿಯುವ ಮುನ್ನ ಮುಂದಿನ ಪ್ರಯಾಣಕ್ಕೆ ಸಿದ್ಧರಾಗುತ್ತಾರೆ.

ನಾಗರಾಜಗೌಡ ಅವರಿಗೆ ಈಗ ವಯಸ್ಸು 65.ಈಗಾಗಲೇ ಮೂರು ಸಾವಿರ ಕಿ.ಮೀ ಗೂ ಅಧಿಕ ರಸ್ತೆ ಮಾರ್ಗವನ್ನು ಕ್ರಮಿಸಿದ್ದಾರೆ. ಆದರೆ, ಅವರ ಮುಖದಲ್ಲಿ ಎಳ್ಳಷ್ಟೂ ಆಯಾಸ ಕಂಡು ಬರಲಿಲ್ಲ. ನಗರದಿಂದ ಹೊರಡುವಾಗ ಅದೇ ಉತ್ಸಾಹದಿಂದ ಬೈಸಿಕಲ್‌ ತುಳಿಯುತ್ತ ಮುಂದಿನ ಊರಿಗೆ ಪ್ರಯಾಣ ಬೆಳೆಸಿದರು. ಅಂದಹಾಗೆ, ಅವರು ಚಿತ್ರದುರ್ಗ, ತುಮಕೂರು ಮೂಲಕ ಬೆಂಗಳೂರು ತಲುಪುವರು. ಬಳಿಕ ತಮಿಳುನಾಡು, ಕೇರಳ ಮೂಲಕ 2020ರ ಡಿಸೆಂಬರ್‌ 3ರಂದು ಮುಂಬೈಗೆ ತಲುಪಿ, ಎಲ್ಲಿ ಯಾತ್ರೆ ಆರಂಭಿಸಿದರೋ ಅಲ್ಲಿಯೇ ಕೊನೆಗೊಳಿಸುವರು.

‘ನಾವೆಲ್ಲರೂ ಒಂದೇ,ವಿಶ್ವ ಶಾಂತಿ’ ಎಂಬ ಬರಹ ಅವರ ಬೈಸಿಕಲ್‌ ಮುಂಭಾಗದಲ್ಲಿದೆ. ಅದರ ಮೇಲ್ಭಾಗದಲ್ಲಿ ಎಲ್ಲ ಧರ್ಮಗಳ ಚಿಹ್ನೆ ಇದೆ. ಕನ್ನಡ ಹಾಗೂತ್ರಿವರ್ಣ ಧ್ವಜ ಇರುವ ಬೈಸಿಕಲ್‌ ಮೇಲೆದೈನಂದಿನ ಅಗತ್ಯಕ್ಕೆ ಬೇಕಿರುವ ವಸ್ತುಗಳನ್ನು ಇಟ್ಟುಕೊಂಡಿದ್ದಾರೆ.

ಮಾರ್ಗದುದ್ದಕ್ಕೂ ವಿಶ್ವಶಾಂತಿ, ಸದ್ಭಾವನೆ, ಭಾವೈಕ್ಯತೆ, ದೇಶಪ್ರೇಮ, ಗೋರಕ್ಷಣೆ, ಸರ್ವಧರ್ಮ ಸಮನ್ವಯ ಕುರಿತು ಅರಿವು ಮೂಡಿಸುತ್ತಾರೆ. ಜತೆಗೆ ಗಿಡ ಮರಗಳನ್ನು ಬೆಳೆಸುವುದು, ನೀರಿನ ಮಿತಬಳಕೆಯ ಕುರಿತು ಜನರಿಗೆ ತಿಳಿವಳಿಕೆ ಮೂಡಿಸುವ ಕೆಲಸ ಮಾಡುತ್ತಾರೆ. ಯಾವುದೇ ಫಲಾಪೇಕ್ಷೆಯಿಲ್ಲದೆ ಕೈಗೊಂಡಿರುವ ಅವರ ಈ ಯಾತ್ರೆಗೆ ಮೆಚ್ಚುಗೆ ವ್ಯಕ್ತವಾಗಿದೆ. ಮಾರ್ಗ ಮಧ್ಯದಲ್ಲಿ ಅನೇಕ ಜನ ಆಹಾರ, ವಸತಿ, ಕೈಲಾದಷ್ಟು ನೆರವು ನೀಡಿ ಬೆನ್ನು ತಟ್ಟುವ ಕೆಲಸ ಮಾಡಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.