ಬಳ್ಳಾರಿ: ನಗರದಲ್ಲಿ ಕ್ರಿಕೆಟ್ ಮೈದಾನ ಸೇರಿದಂತೆ ಕ್ರೀಡೆಗೆ ಮೂಲಸೌಲಭ್ಯ ಕಲ್ಪಿಸುವಂತೆ ಆಗ್ರಹಿಸಿ ಎಸ್.ಎಸ್.ಕ್ರಿಕೆಟ್ ಕ್ಲಬ್‌ನ ಅಧ್ಯಕ್ಷ ಎಸ್.ಎಸ್. ಮೆಹಬೂಬ್ ಭಾಷ ಸೋಮವಾರ ಬಳ್ಳಾರಿಯಿಂದ ಬೆಂಗಳೂರಿಗೆ ‘ಮ್ಯಾರಥಾನ್’ ಕೈಗೊಂಡು ಪ್ರತಿಭಟನೆ ಆರಂಭಿಸಿದರು.
ನಗರದ ಕನಕದುರ್ಗಮ್ಮ ದೇವಾಲಯದಲ್ಲಿ ಸೋಮವಾರ ಬೆಳಿಗ್ಗೆ ವಿಶೇಷ ಪೂಜೆ ಸಲ್ಲಿಸಿದ ಬಳಿಕ, ‘ಮ್ಯಾರಥಾನ್’ ಆರಂಭಿಸಿದರು.
ಇದಕ್ಕೂ ಮೊದಲು ಮಾಧ್ಯಮಗಳೊಂದಿಗೆ ಮಾತನಾಡಿದ 51 ವರ್ಷದ ಮೆಹಬೂಬ್ ಭಾಷ, ‘ಬಳ್ಳಾರಿ ನಗರದಲ್ಲಿ ಕ್ರಿಕೆಟ್‌ಗೆ ಮೈದಾನ, ಮೂಲಸೌಲಭ್ಯವೇ ಇಲ್ಲ. ಬಳ್ಳಾರಿಯಲ್ಲಿ ಸಾಕಷ್ಟು ಪ್ರತಿಭಾವಂತ ಕ್ರಿಕೆಟ್ ಆಟಗಾರರು ಇದ್ದಾರೆ. ಆದರೆ, ಪ್ರತಿಭೆ ಪ್ರದರ್ಶನಕ್ಕೆ ಸೌಲಭ್ಯಗಳೇ ಇಲ್ಲ. ಹಾಗಾಗಿ ಬಳ್ಳಾರಿಯಿಂದ ‘ಮ್ಯಾರಥಾನ್’ ಮೂಲಕ ಬೆಂಗಳೂರಿಗೆ ತೆರಳಿ, ಅಲ್ಲಿ ರಾಜ್ಯ ಕ್ರಿಕೆಟ್ ಅಸೋಸಿಯೇಷನ್‌ಗೆ (ಕೆಎಸ್‌ಸಿಎ) ಮನವಿ ಸಲ್ಲಿಸಲಾಗುವುದು’ ಎಂದು ಅವರು ತಿಳಿಸಿದ್ದಾರೆ.
‘7–8 ದಿನಗಳೊಳಗಾಗಿ ಬೆಂಗಳೂರಿಗೆ ತಲುಪುವ ಗುರಿ ಇದೆ. ಪ್ರತಿದಿನ ಬೆಳಿಗ್ಗೆ 20 ಕಿ.ಮೀ, ಸಂಜೆ 20 ಸೇರಿ ಒಟ್ಟು 40 ಕಿ.ಮೀ. ಕ್ರಮಿಸಲಾಗುವುದು. ಅದಕ್ಕಾಗಿ ಎಲ್ಲ ಸಿದ್ಧತೆ ಮಾಡಿಕೊಂಡಿದ್ದೇನೆ. ಕ್ಲಬ್ ಉಪಾಧ್ಯಕ್ಷ ಪಾಲಿಕೆ ಸದಸ್ಯ ಪ್ರಭಂಜನ್ ಕುಮಾರ್, ಬಳ್ಳಾರಿ ಸೈಕ್ಲಿಂಗ್ ಕ್ಲಬ್‌ನವರು ನೆರವು ನೀಡಿದ್ದಾರೆ’ ಎಂದು ಅವರು ವಿವರಿಸಿದರು.
ಈ ವೇಳೆ ಕ್ಲಬ್ ಗೌರವಾಧ್ಯಕ್ಷ ಎಂ.ನಾರಾಯಣರಾವ್, ಬಳ್ಳಾರಿ ಸೈಕ್ಲಿಂಗ್ ಕ್ಲಬ್‌ನ ಮುಖ್ಯಸ್ಥ ಡಾ. ರವಿಶಂಕರ್, ಕೃಷ್ಣಾರೆಡ್ಡಿ, ಮಾಜಿ ಕ್ರಿಕೆಟ್ ಪಟುಗಳಾದ ಬಿ.ಬಾಲಕೃಷ್ಣ, ಹುಸೇನ್, ಸೀನಾ, ಬಾಬು, ಶ್ರೀನಿವಾಸ್ ಇದ್ದರು.
ಮೆಹಬೂಬ್ ಭಾಷ ಮೊದಲಿನಿಂದಲೂ ಕ್ರಿಕೆಟ್‌ಗಾಗಿ ಶ್ರಮಿಸಿದ್ದಾರೆ. ಆದರೆ ಬಳ್ಳಾರಿಯಲ್ಲಿ ಕ್ರಿಕೆಟ್‌ಗೆ ಮೂಲಸೌಲಭ್ಯಗಳೇ ಇಲ್ಲ. ಸಾಕಷ್ಟು ಅನುದಾನ ಇದ್ದರೂ ಸಮರ್ಪಕ ಬಳಕೆ ಆಗುತ್ತಿಲ್ಲಪ್ರಭಂಜನ ಕುಮಾರ್ ಎಸ್.ಎಸ್. ಕ್ರಿಕೆಟ್ ಕ್ಲಬ್ ಉಪಾಧ್ಯಕ್ಷ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.