ADVERTISEMENT

ಮರಿಯಮ್ಮನಹಳ್ಳಿ: ಬಾರದ ಮಳೆ, ಬಾಡುತ್ತಿರುವ ಬೆಳೆಗಳು

ಎಚ್.ಎಸ್.ಶ್ರೀಹರಪ್ರಸಾದ್
Published 8 ಆಗಸ್ಟ್ 2024, 5:56 IST
Last Updated 8 ಆಗಸ್ಟ್ 2024, 5:56 IST
ಮರಿಯಮ್ಮನಹಳ್ಳಿ ತಾಂಡಾ ಬಳಿ ಇರುವ ಹೊಲಗಳಲ್ಲಿ ಬೆಳೆದ ಮುಸುಕಿನ ಜೋಳದ ಬೆಳೆಗಳು ಮಳೆ ಇಲ್ಲದೆ ಬಾಡುತ್ತಿವೆ
ಮರಿಯಮ್ಮನಹಳ್ಳಿ ತಾಂಡಾ ಬಳಿ ಇರುವ ಹೊಲಗಳಲ್ಲಿ ಬೆಳೆದ ಮುಸುಕಿನ ಜೋಳದ ಬೆಳೆಗಳು ಮಳೆ ಇಲ್ಲದೆ ಬಾಡುತ್ತಿವೆ   

ಮರಿಯಮ್ಮನಹಳ್ಳಿ: ಹೋಬಳಿ ವ್ಯಾಪ್ತಿಯಲ್ಲಿ ಮಳೆ ಮಾಯವಾಗಿದ್ದರಿಂದ ರೈತರು ಮತ್ತೆ ಮುಗಿಲ ಕಡೆ ಮುಖ ಮಾಡುವಂತಾಗಿದೆ.

ಕಳೆದ ವರ್ಷದ ಬರಗಾಲದಿಂದ ತತ್ತರಿಸಿದ್ದ ರೈತರಿಗೆ ಈ ಬಾರಿ ಆರಂಭದಲ್ಲಿ ಉತ್ತಮವಾಗಿ ಸುರಿದ ಮುಂಗಾರು ಮಳೆಗೆ ರೈತರು ಸಂತಸದಿಂದಲೇ ಜೋಳ, ಮುಸುಕಿನ ಜೋಳ ಬಿತ್ತನೆ ಮಾಡಿದ್ದರು.

ಆರಂಭದಲ್ಲಿ ಸಂತಸ ಮೂಡಿಸಿದ್ದ ವರುಣದೇವ, ನಂತರ ಜುಲೈ ತಿಂಗಳಾದ್ಯಂತ ಅವಕೃಪೆ ತೋರಿದ್ದರಿಂದ ರೈತರು ಮತ್ತೆ ಸಂಕಷ್ಟ ಎದುರಿಸುವಂತಾಗಿದೆ. ಎರಡು ತಿಂಗಳ ಬೆಳವಣಿಗೆ ಹಂತದಲ್ಲಿರುವ ಜೋಳ, ಮುಸುಕಿನ ಜೋಳದ ಬೆಳೆಗಳಿಗೆ ಆಗಾಗ ಸುರಿದ ತುಂತುರು ಮಳೆಯೇ ಕೊಂಚ ಆಸರೆಯಾಗಿತ್ತು.

ADVERTISEMENT

ಆದರೆ ಕಳೆದ ಎರಡು ವಾರಗಳಿಂದ ತುಂತುರು ಮಳೆ ಇಲ್ಲದೇ ಸಾಧಾರಣ ಬೆಳೆವಣಿಗೆ ಹಂತದಲ್ಲಿರುವ ಬೆಳೆಗಳು ಬಾಡುವ ಹಂತ ತಲುಪಿದ್ದು, ಇಳುವರಿ ಕುಂಠಿತವಾಗುವ ಸಾಧ್ಯತೆ ಇರುವುದರಿಂದ ಅನ್ನದಾತರು ಪರಿತಪಿಸುವಂತಾಗಿದೆ.

ಹೋಬಳಿ ವ್ಯಾಪ್ತಿಯಲ್ಲಿ ಒಟ್ಟು 5300 ಹೆಕ್ಟೇರ್ ಪ್ರದೇಶ ಬಿತ್ತನೆಗೆ ಲಭ್ಯವಿದ್ದು, 3100ಹೆ. ಖುಷ್ಕಿ ಹಾಗೂ 2200ಹೆ. ನೀರಾವರಿ ಪ್ರದೇಶ ಹೊಂದಿದೆ. ಈಗಾಗಲೇ 2900ಹೆಕ್ಟೇರ್ ಪ್ರದೇಶದಲ್ಲಿ ಮುಸುಕಿನ ಜೋಳ, 1100ಹೆ. ಜೋಳ, 110ಹೆ. ಭತ್ತ, 120ಹೆ. ರಾಗಿ, 250ಹೆ. ಸಜ್ಜೆ, 95ಹೆ. ತೊಗರಿ, 50ಹೆಕ್ಟೇರ್ ಶೇಂಗಾ ಸೇರಿದಂತೆ ಒಟ್ಟು 4625ಹೆಕ್ಟೇರ್ ಬಿತ್ತನೆಯಾಗಿದೆ.

ಇನ್ನು ಸುಮಾರು 1000ಹೆಕ್ಟೇರ್ ಪ್ರದೇಶ ಬಿತ್ತನೆಯಾಗದೇ ಇದ್ದು, ಉತ್ತಮ ಮಳೆಗಾಗಿ ಎದುರು ನೋಡುತ್ತಿರುವ ರೈತರು, ಸದ್ಯ ಮಳೆ ಬಂದರೆ ಸಾಕು ಇರುವ ಬೆಳೆಗಳು ಚೇರಿಕೊಳ್ಳುವುದಲ್ಲದೆ, ಬಿತ್ತನೆಯಾಗದೇ ಖಾಲಿ ಇರುವ ಕಡೆ ಶೇಂಗಾ, ರಾಗಿ ಬಿತ್ತನೆಗೆ ಮುಂದಾಗಲಿದ್ದಾರೆ.

‘ಕಳೆದ ವರ್ಷ ಬರಗಾಲದಿಂದ ಕಂಗೆಟ್ಟಿದ್ದವು. ಆದರೆ ಈ ಬಾರಿ ಮುಂಗಾರು ಉತ್ತಮವಾಗಿದ್ದರಿಂದ ಜೋಳ, ಮುಸುಕಿನ ಜೋಳ ಬಿತ್ತನೆ ಮಾಡಿದ್ದು, ಮತ್ತೆ ಮಳೆ ಕೈಕೊಟ್ಟಿದ್ದರಿಂದ ಇರುವ ಎರಡು ತಿಂಗಳ ಬೆಳೆಗಳ ಇಳುವರಿ ಕುಂಠಿತವಾಗಲಿದ್ದು, ಬಾಡುವ ಹಂತ ತಲುಪಿವೆ’ ಎನ್ನುತ್ತಾರೆ ತಾಂಡಾದ ರೈತ ರಾಮಾನಾಯ್ಕ.

ಮುಂಗಾರು ಆರಂಭದಲ್ಲಿ ಉತ್ತಮವಾಗಿತ್ತು. ಆದರೆ ಜುಲೈನಲ್ಲಿ ವಾಡಿಕೆಗಿಂತ ಮಳೆ ಕಡಿಮೆಯಾದ್ದರಿಂದ ಎರಡು ತಿಂಗಳ ಬೆಳವಣಿಗೆ ಹಂತದಲ್ಲಿರುವ ಬೆಳೆಗಳ ಇಳುವರಿ ಕುಂಠಿತವಾಗುವ ಸಾಧ್ಯತೆ ಇದೆ
ಶಿವಮೂರ್ತಿ, ಕೃಷಿ ಅಧಿಕಾರಿ ರೈತ ಸಂಪರ್ಕ ಕೇಂದ್ರ ಮರಿಯಮ್ಮನಹಳ್ಳಿ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.