ADVERTISEMENT

ಖನಿಜ ನಿಧಿ: ಜಾಗೃತಿ ಕೊರತೆ ನೀಗಿಸಿ

ಜಿಲ್ಲಾ ಖನಿಜ ಪ್ರತಿಷ್ಠಾನದ ನಿಧಿ ಬಳಕೆ ಕುರಿತ ಕಾರ್ಯಾಗಾರ

​ಪ್ರಜಾವಾಣಿ ವಾರ್ತೆ
Published 16 ಡಿಸೆಂಬರ್ 2018, 12:48 IST
Last Updated 16 ಡಿಸೆಂಬರ್ 2018, 12:48 IST
ಸಮಾಲೋಚನೆ ಕಾರ್ಯಾಗಾರದಲ್ಲಿ ಮೈನ್ಸ್‌, ಮಿನರಲ್ಸ್‌ ಅಂಡ್‌ ಪೀಪಲ್‌ ಸಂಘಟನೆಯ ಪ್ರಧಾನ ಕಾರ್ಯದರ್ಶಿ ಅಶೋಕ್ ಶ್ರೀಮಾಲಿ ಮಾತನಾಡಿದರು.
ಸಮಾಲೋಚನೆ ಕಾರ್ಯಾಗಾರದಲ್ಲಿ ಮೈನ್ಸ್‌, ಮಿನರಲ್ಸ್‌ ಅಂಡ್‌ ಪೀಪಲ್‌ ಸಂಘಟನೆಯ ಪ್ರಧಾನ ಕಾರ್ಯದರ್ಶಿ ಅಶೋಕ್ ಶ್ರೀಮಾಲಿ ಮಾತನಾಡಿದರು.   

ಬಳ್ಳಾರಿ: 'ಗಣಿಕಾರಿಕೆಯಿಂದ ಬಾಧಿತವಾದ ಪ್ರದೇಶಗಳ ಜನರ ಅಭಿವೃದ್ಧಿಗಾಗಿಯೇ ಜಿಲ್ಲಾ ಖನಿಜ ಪ್ರತಿಷ್ಠಾನವನ್ನು ಸ್ಥಾಪಿಸಲಾಗಿದೆ. ಆದರೆ ಜನರಿಗೆ ಆ ಪ್ರತಿಷ್ಠಾನದ ನಿಧಿಯ ಕುರಿತು ಜಾಗೃತಿಯೇ ಇಲ್ಲದಿರುವುದು ವಿಪರ್ಯಾಸ’ ಎಂದು ಮೈನ್ಸ್‌, ಮಿನರಲ್ಸ್‌ ಅಂಡ್‌ ಪೀಪಲ್‌ ಸಂಘಟನೆಯ ಪ್ರಧಾನ ಕಾರ್ಯದರ್ಶಿ ಅಶೋಕ್ ಶ್ರೀಮಾಲಿ ವಿಷಾದಿಸಿದರು.

ಗಣಿ ಪ್ರದೇಶದ ಮಕ್ಕಳು, ಅಕ್ರಮ ಗಣಿಗಾರಿಕೆ ಮತ್ತು ಜಿಲ್ಲಾ ಖನಿಜ ಪ್ರತಿಷ್ಠಾನ ಕುರಿತು ಸಂಘಟನೆಯು ನಗರದಲ್ಲಿ ಭಾನುವಾರ ಏರ್ಪಡಿಸಿದ್ದ ರಾಜ್ಯಮಟ್ಟದ ಸಮಾಲೋಚನೆ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ‘ಪ್ರತಿಷ್ಠಾನದಲ್ಲಿರುವ ಕೋಟ್ಯಂತರ ರುಪಾಯಿ ಅನುದಾನ, ಅನುಕೂಲಗಳ ಬಗ್ಗೆ ತಿಳಿವಳಿಕೆ ಇಲ್ಲದೆ ಜನ ಈಗಲೂ ಸಮಸ್ಯೆಗಳ ಸುಳಿಯಲ್ಲಿ ನಲುಗುತ್ತಿದ್ದಾರೆ’ ಎಂದರು.

‘ಪ್ರತಿಷ್ಠಾನದ ಕುರಿತು ಗ್ರಾಮಮಟ್ಟದಲ್ಲಿ ಪ್ರಚಾರ ಹೆಚ್ಚಾಗಬೇಕು. ಸಾಮಾಜಿಕವಾಗಿ, ಆರ್ಥಿಕವಾಗಿ ಹಿಂದುಳಿದಿರುವ ಗಣಿ ಭಾದಿತರ ಅಭಿವೃದ್ಧಿಯಾಗಬೇಕು. ಅದಕ್ಕೆ , ಪ್ರತಿಷ್ಠಾನದ ನಿಧಿ ಸದ್ಬಳಕೆಯಾಗಬೇಕು. ಸಂತ್ರಸ್ತ ಜನರ ಸಹಭಾಗಿತ್ವದಿಂದ ಮಾತ್ರ ಅದು ಸಾಧ್ಯ’ ಎಂದು ಪ್ರತಿಪಾದಿಸಿದರು.

ADVERTISEMENT

ಸಂಘಟನೆಯ ಕಾರ್ಯಕಾರಿ ಸಮಿತಿ ಸದಸ್ಯ ಶಿವಕುಮಾರ ಮಾಳಗಿ ಮಾತನಾಡಿ, ‘ಗಣಿಗಾರಿಕೆಯಿಂದ ಬಾಧಿತರಾದ ಜನರ ಕಲ್ಯಾಣಕ್ಕಾಗಿ ರೂಪಿಸುವ ಕಾರ್ಯಕ್ರಮಗಳಲ್ಲಿ ಸ್ಥಳೀಯ ಸಮುದಾಯದ ಪಾಲ್ಗೊಳ್ಳುವಿಕೆ ಕಡ್ಡಾಯವಾಗಬೇಕು ಮತ್ತು ಅವರ ತೀರ್ಮಾನವೇ ಅಂತಿಮವಾಗಿರಬೇಕು’ ಎಂದು ಪ್ರತಿಪಾದಿಸಿದರು.

‘ಪ‍್ರತಿಷ್ಠಾನದ ಯೋಜನೆಗಳನ್ನುಗ್ರಾಮ ಪಂಚಾಯ್ತಿ ಮಟ್ಟದಲ್ಲಿ ರೂಪಿಸಬೇಕು. ಪಂಚಾಯ್ತಿ ರೂಪಿಸಿದ ಕ್ರಿಯಾ ಯೋಜನೆಗೆ ಅಗತ್ಯವಾಗಿರುವ ಅನುದಾನವನ್ನು ಪ್ರತಿಷ್ಠಾನದ ವತಿಯಿಂದ ಒದಗಿಸಬೇಕು. ಪ್ರಧಾನಮಂತ್ರಿ ಖನಿಜ ಕ್ಷೇತ್ರ ಕಲ್ಯಾಣ ಯೋಜನೆಯ ಅಡಿ ಕೈಗೊಳ್ಳುವ ಎಲ್ಲಾ ಕಾರ್ಯಕ್ರಮಗಳು ಗಣಿಬಾಧಿತ ಗ್ರಾಮ ಮತ್ತು ಪಟ್ಟಣ ಕೇಂದ್ರೀಕೃತವಾಗಿರಬೇಕು. ಫಲಾನುಭವಿಗಳ ಆಯ್ಕೆಯ ಸಂದರ್ಭದಲ್ಲಿ, ಗಣಿಗಾರಿಕೆಯಿಂದ ನೇರವಾಗಿ ಭಾದಿತರಾದ ಎಲ್ಲ ಸಮುದಾಯಗಳ ಜನರಿಗೆ ಮೊದಲ ಆದ್ಯತೆ ನೀಡಬೇಕು’ ಎಂದು ಆಗ್ರಹಿಸಿದರು.

ಕಚೇರಿ ತೆರೆಯಿರಿ: ‘ಜಿಲ್ಲಾ ಮಟ್ಟದಲ್ಲಿ ಮತ್ತು ಉಪವಿಭಾಗ ಮಟ್ಟದಲ್ಲಿ ಪ್ರತ್ಯೇಕವಾಗಿ ಕಚೇರಿ ತೆರೆದು ಅಗತ್ಯ ಸಿಬ್ಬಂದಿಯನ್ನು ನೇಮಿಸಬೇಕು. ಜಿಲ್ಲೆಯಲ್ಲಿ ಸಕ್ರಿಯರಾಗಿರುವ ಸ್ತ್ರೀ ಶಕ್ತಿ ಗುಂಪುಗಳು, ಕುರಿಗಾರರ ಸಂಘಗಳು, ನಿರುದ್ಯೋಗಿ ಯುವಕ-ಯುವತಿಯರಿಗೆ, ಕೃಷಿ ಕೂಲಿಗಾರರ ಸಂಘಗಳಿಗೆ ಸ್ವ ಉದ್ಯೋಗ ಕೈಗೊಳ್ಳಲು ಸಹಾಯಧನ ನೀಡಬೇಕು’ ಎಂದು ಒತ್ತಾಯಿಸಿದರು.

‘ಮಕ್ಕಳ ಮತ್ತು ಮಹಿಳೆಯರ ಅಪೌಷ್ಠಿಕತೆ ನಿವಾರಣೆಗೆ ಮತ್ತು ಸರ್ಕಾರಿ ಶಾಲೆಗಳಲ್ಲಿ ಶಿಕ್ಷಣದ ಗುಣಮಟ್ಟ ಹೆಚ್ಚಳಕ್ಕೆ ಅನುದಾನ ನೀಡಬೇಕು. ಪ್ರತಿಷ್ಠಾನದ ನಿರ್ವಹಣಾ ಸಮಿತಿಯಲ್ಲಿ ಗಣಿಭಾಧಿತ ಜನರ ಪ್ರತಿನಿಧಿಗಳನ್ನು ನಾಮ ನಿರ್ದೇಶನ ಮಾಡಬೇಕು’ ಎಂದು ಆಗ್ರಹಿಸಿದರು.

ಸಾಮಾಜಿಕ ಹೋರಾಟಗಾರರಾದ ಮಲ್ಲಿ ಸ್ವಾಮಿ ಮಾತನಾಡಿ, ‘ಗಣಿಗಾರಿಕೆಯಿಂದ ಹಾಳಾಗಿರುವ ಪರಿಸರದ ಪುನಶ್ಚೇತನಕ್ಕೆ ಗಟ್ಟಿ ಕಾರ್ಯಕ್ರಮಗಳನ್ನು ರೂಪಿಸಬೇಕು. ಜನರಿಗೆ ಮೂಲಸೌಕರ್ಯಗಳನ್ನು ನೀಡಬೇಕು’ ಎಂದು ಒತ್ತಾಯಿಸಿದರು.

ಸಂಘಟನೆಯ ಮತ್ತೊಬ್ಬ ಕಾರ್ಯಕಾರಣಿ ಸದಸ್ಯೆ ಭಾಗ್ಯ,ದಲಿತ ಸಂಘರ್ಷ ಸಮಿತಿ ಮುಖಂಡ ಜಗನ್ನಾಥ್ ಜಿಲ್ಲಾ ಗಣಿ ಕಾರ್ಮಿಕ ಸಂಘದಗೋಪಿ.ವೈ ಮುಖಂಡರಾದ ಅಮರೇಶಪ್ಪ, ಬಸವರಾಜ್ ಗಾಳೆಮ್ಮ, ದೇವಮ್ಮ, ರೂಪ, ಲಕ್ಷ್ಮಿ, ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.