ADVERTISEMENT

‘ಜನರ ಹಿತ ಕಡೆಗಣಿಸುವ ಮೈನಿಂಗ್ ಬೇಡ’

ಅದಿರು ಲಾರಿಗಳಿಂದ ಸಂಚಾರ ದಟ್ಟಣೆ ಸಮಸ್ಯೆ: ಶಾಸಕ ತುಕಾರಾಂ

​ಪ್ರಜಾವಾಣಿ ವಾರ್ತೆ
Published 4 ಸೆಪ್ಟೆಂಬರ್ 2021, 3:51 IST
Last Updated 4 ಸೆಪ್ಟೆಂಬರ್ 2021, 3:51 IST
ಸಂಡೂರಿನ ತಾಲ್ಲೂಕು ಪಂಚಾಯ್ತಿ ಸಭಾಂಗಣದಲ್ಲಿ ಶುಕ್ರವಾರ ತಾಲ್ಲೂಕಿನ ವಿವಿಧೆಡೆ ಅದಿರು ಲಾರಿಗಳಿಂದ ಉಂಟಾಗುತ್ತಿರುವ ಸಂಚಾರ ದಟ್ಟಣೆ ತಪ್ಪಿಸುವ ಸಲುವಾಗಿ ನಡೆದ ಸಭೆಯಲ್ಲಿ ಶಾಸಕರಾದ ಈ. ತುಕಾರಾಂ ಮಾತನಾಡಿದರು
ಸಂಡೂರಿನ ತಾಲ್ಲೂಕು ಪಂಚಾಯ್ತಿ ಸಭಾಂಗಣದಲ್ಲಿ ಶುಕ್ರವಾರ ತಾಲ್ಲೂಕಿನ ವಿವಿಧೆಡೆ ಅದಿರು ಲಾರಿಗಳಿಂದ ಉಂಟಾಗುತ್ತಿರುವ ಸಂಚಾರ ದಟ್ಟಣೆ ತಪ್ಪಿಸುವ ಸಲುವಾಗಿ ನಡೆದ ಸಭೆಯಲ್ಲಿ ಶಾಸಕರಾದ ಈ. ತುಕಾರಾಂ ಮಾತನಾಡಿದರು   

ಸಂಡೂರು: ತಾಲ್ಲೂಕಿನ ಶ್ರೀಕುಮಾರಸ್ವಾಮಿ ದೇವಸ್ಥಾನ, ನಂದಿಹಳ್ಳಿ ಸ್ನಾತಕೋತ್ತರ ಕೇಂದ್ರದ ಮಾರ್ಗದಲ್ಲಿ ಅದಿರು ಲಾರಿಗಳ ಅಬ್ಬರದಿಂದಾಗಿ ಉಂಟಾಗುತ್ತಿರುವ ಟ್ರಾಫಿಕ್ ಜಾಮ್, ಅದರಿಂದ ಸಾರ್ವಜನಿಕರಿಗೆ ಆಗುತ್ತಿರುವ ತೊಂದರೆಗಳನ್ನು ತಪ್ಪಿಸುವ ಸಲುವಾಗಿ ಶುಕ್ರವಾರ ಇಲ್ಲಿನ ತಾಲ್ಲೂಕು ಪಂಚಾಯ್ತಿ ಸಭಾಂಗಣದಲ್ಲಿ ಶಾಸಕರಾದ ಈ. ತುಕಾರಾಂ ಅವರ ಅಧ್ಯಕ್ಷತೆಯಲ್ಲಿ ಅಧಿಕಾರಿಗಳ ಸಭೆ ನಡೆಯಿತು.

ಶಾಸಕರು ಮಾತನಾಡಿ, ‘ತಾಲ್ಲೂಕಿನಲ್ಲಿ ಗಣಿ ಭಾಗದಲ್ಲಿನ ನಾರಾಯಣಪುರದಿಂದ ರಾಜಾಪುರ, ಸುಶೀಲಾನಗರದಿಂದ ಗೋಶಾಲೆ, ಗೋಶಾಲೆಯಿಂದ ರಾಮಘಡ ರಸ್ತೆಗಳು ಮಾತ್ರ ಬಾಕಿ ಇದ್ದು, ಉಳಿದ ಎಲ್ಲಾ ರಸ್ತೆಗಳನ್ನು ಅಭಿವೃದ್ಧಿ ಪಡಿಸಲಾಗಿದೆ. ರಸ್ತೆಗಳಲ್ಲಿಯೇ ಅದಿರು ಸಾಗಣೆ ಲಾರಿಗಳನ್ನು ನಿಲ್ಲಿಸುವುದರಿಂದ ಸಾರ್ವಜನಿಕರಿಗೆ ತುಂಬಾ ತೊಂದರೆಯಾಗುತ್ತಿದೆ. ಗಣಿಗಾರಿಕೆ ಬೇಕು. ಆದರೆ, ಜನರ ಹಿತವನ್ನು ಕಡೆಗಣಿಸುವ ಮೈನಿಂಗ್ ಬೇಡ. ಕೆಲವರ ಹಿತಕ್ಕಾಗಿ ತಾಲ್ಲೂಕಿನಲ್ಲಿಯ 3.50 ಲಕ್ಷ ಜನರ ಹಿತವನ್ನು ಕಡೆಗಣಿಸಲಾಗದು. ಕಾನೂನು ಬಿಟ್ಟು ಏನನ್ನೂ ಮಾಡಬಾರದು’ ಎಂದು ತಮ್ಮ ಅಸಮಾಧಾನವನ್ನು ಹೊರ ಹಾಕಿದರು.

‘ಶ್ರೀಕುಮಾರಸ್ವಾಮಿ ದೇವಸ್ಥಾನ ಹಾಗೂ ನಂದಿಹಳ್ಳಿ ಸ್ನಾತಕೋತ್ತರ ಕೇಂದ್ರದ ಮಾರ್ಗದಲ್ಲಿ ಅದಿರು ಲಾರಿಗಳ ಅಬ್ಬರದಿಂದಾಗಿ ಆಗಾಗ್ಗೆ ಉಂಟಾಗುತ್ತಿರುವ ಟ್ರಾಫಿಕ್ ಜಾಮ್‍ದಿಂದಾಗಿ ಸಾರ್ವಜನಿಕರಿಗೆ ತುಂಬಾ ತೊಂದರೆಯಾಗುತ್ತಿದೆ. ಹೊಸಪೇಟೆ ರಸ್ತೆ ಗಣಿ
ರಸ್ತೆಯಂತಿರುತ್ತದೆ. ಲಾರಿಗಳು ರಸ್ತೆಯ ಮೇಲೆ ನಿಂತಿರುತ್ತವೆ. ಕೆಲವೆಡೆ ಲಾರಿಗಳನ್ನು ಜಲಾಶಯ, ಕೆರೆ, ಹಳ್ಳಗಳಲ್ಲಿ ತೊಳೆದು, ನೀರನ್ನು ಕಲುಷಿತಗೊಳಿ ಸುತ್ತಿರುತ್ತಾರೆ. ಹಲವು ಲಾರಿ ಚಾಲಕರಿಗೆ ಲೈಸೆನ್ಸ್ ಇರುವುದಿಲ್ಲ. ತಾಡಪಾಲು ಹಾಕಿರುವುದಿಲ್ಲ. ಇಂತಹ ಚಟುವಟಿಕೆಗಳನ್ನು ತಡೆಯಲು ಅಧಿಕಾರಿಗಳು ಕ್ರಮಕೈಗೊಳ್ಳಬೇಕು’ ಎಂದರು.

ADVERTISEMENT

ಡಿವೈಎಸ್ಪಿ ಹರೀಶ್ ರೆಡ್ಡಿ ಮಾತನಾಡಿ, ‘ನಂದಿಹಳ್ಳಿ ಬಳಿಯಿರುವ ವಾಷಿಂಗ್ ಪ್ಲಾಂಟ್‍ಗೆ 20-22 ಗಾಲಿಗಳ ಸಿವಿಲ್ ಲಾರಿಗಳು ಬರುತ್ತವೆ. ಇವುಗಳು ತಿರುವುಗಳಲ್ಲಿ ಸರಾಗವಾಗಿ ಸಂಚರಿಸಲು ಸಾಧ್ಯವಾಗುವುದಿಲ್ಲ. ಇವುಗಳ ಬದಲಿಗೆ ಕೇವಲ 10-12 ಗಾಲಿಗಳ ಲಾರಿಗಳಿಗೆ ಅವಕಾಶ ಕಲ್ಪಿಸಿದರೆ, ಹೆಚ್ಚಿನ ಟ್ರಾಫಿಕ್ ಉಂಟಾಗದು. ಗಣಿ ಕಂಪನಿಗಳವರು ಬೆಳಿಗ್ಗೆ 6 ಗಂಟೆಗೆ ಲಾರಿಗಳನ್ನು ತಮ್ಮ ಗಣಿ ಪ್ರದೇಶಗಳ ಒಳಗೆ ಬರಲು ಅವಕಾಶ ನೀಡಿದರೆ, ಲಾರಿಗಳು ರಸ್ತೆಯ ಮೇಲೆ ನಿಲ್ಲುವುದು ಬಹುತೇಕ ಕಡಿಮೆಯಾಗುತ್ತದೆ.
ಜಿಪಿಎಸ್ ಅಳವಡಿಕೆಯಿಂದ ಅಪಘಾತಗಳ ಸಂಖೆ ಹಿಂದಿಗಿಂತ ಕಡಿಮೆಯಾಗಿವೆ ಎಂದರು.

ಗಣಿ ಮತ್ತು ಭೂವಿಜ್ಞಾನ ಇಲಾಖೆ ಉಪ ನಿರ್ದೇಶಕ ಮಹಾವೀರ್, ತಹಶೀಲ್ದಾರ್ ಎಚ್.ಜೆ. ರಶ್ಮಿ, ಉಪ ವಲಯ ಅರಣ್ಯಾಧಿಕಾರಿ ತಿಪ್ಪೇಸ್ವಾಮಿ, ಗಣಿ ಕಂಪನಿಗಳ ಮುಖಂಡರು ತಮ್ಮ ಅಭಿಪ್ರಾಯಗಳನ್ನು ವ್ಯಕ್ತಪಡಿಸಿದರು.

ಇಒ ವಿವೇಕಾನಂದ, ಆರ್.ಟಿ.ಒ, ಅರಣ್ಯ, ಲೋಕೋಪಯೋಗಿ, ಪುರಸಭೆ, ಪೊಲೀಸ್ ಅಧಿಕಾರಿಗಳು ಇದ್ದರು

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.