ADVERTISEMENT

‘ಮೋದಿ ದೊಡ್ಡ ಸುಳ್ಳುಗಾರ’

ರೈತರ ಹೆಸರಲ್ಲಿ ಅಧಿಕಾರಕ್ಕೆ ಬಂದು ರೈತರ ಕಡೆಗಣಿಸಿದ ಪ್ರಧಾನಿ, ಆರೋಪ

​ಪ್ರಜಾವಾಣಿ ವಾರ್ತೆ
Published 24 ಅಕ್ಟೋಬರ್ 2018, 9:12 IST
Last Updated 24 ಅಕ್ಟೋಬರ್ 2018, 9:12 IST
ಬಿ. ಗೋಣಿಬಸಪ್ಪ
ಬಿ. ಗೋಣಿಬಸಪ್ಪ   

ಹೊಸಪೇಟೆ: ‘ಅಧಿಕಾರಕ್ಕೆ ಬಂದ ತಕ್ಷಣ ಸ್ವಾಮಿನಾಥನ್‌ ವರದಿ ಜಾರಿಗೆ ತರುತ್ತೇನೆ ಎಂದು ಹೇಳಿ ಅಧಿಕಾರಕ್ಕೆ ಬಂದಿರುವ ಪ್ರಧಾನಿ ನರೇಂದ್ರ ಮೋದಿ ನಾಲ್ಕೂವರೆ ವರ್ಷ ಕಳೆದರೂ ಆ ಕೆಲಸ ಮಾಡಿಲ್ಲ. ಅವರೊಬ್ಬ ದೊಡ್ಡ ಸುಳ್ಳುಗಾರ’ ಎಂದು ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆ (ನಂಜುಂಡಸ್ವಾಮಿ ಬಣ) ಜಿಲ್ಲಾ ಅಧ್ಯಕ್ಷ ಬಿ. ಗೋಣಿಬಸಪ್ಪ ಆರೋಪ ಮಾಡಿದರು.

ಬುಧವಾರ ಇಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ‘2014ರ ಲೋಕಸಭೆ ಚುನಾವಣೆಗೂ ಮುನ್ನ ಮಹಾರಾಷ್ಟ್ರದ ರೈತ ಮುಖಂಡ ರಾಜು ಸೇಟ್‌ ಅವರನ್ನು ಭೇಟಿ ಮಾಡಿದ ಮೋದಿಯವರು ಸ್ವಾಮಿನಾಥನ್‌ ವರದಿ ಜಾರಿ ಸೇರಿದಂತೆ ರೈತರ ಎಲ್ಲ ಬೇಡಿಕೆಗಳನ್ನು ಈಡೇರಿಸುತ್ತೇನೆ. ಚುನಾವಣೆಯಲ್ಲಿ ಬೆಂಬಲ ಕೊಡಬೇಕೆಂದು ಕೇಳಿಕೊಂಡಿದ್ದರು. ಅವರ ಮಾತು ನಂಬಿ ರಾಜು ಅವರು ಮೋದಿಯವರನ್ನು ಬೆಂಬಲಿಸಿದ್ದರು. ಅಷ್ಟೇ ಅಲ್ಲ, ಅವರೇ ಚುನಾವಣೆಗೆ ಸ್ಪರ್ಧಿಸಿ ಸಂಸದರಾಗಿ ಆಯ್ಕೆಯಾಗಿದ್ದರು. ಮೂರು ವರ್ಷಗಳ ನಂತರ ಭೇಟಿಗೆ ಅವಕಾಶ ಕಲ್ಪಿಸಿದ ಮೋದಿ, ಭರವಸೆಗಳನ್ನು ಈಡೇರಿಸಲು ಆಗುವುದಿಲ್ಲ ಎಂದು ಕೈಚೆಲ್ಲಿದರು. ಇದರಿಂದ ಮನನೊಂದು ರಾಜು ಅವರು ಸಂಸದ ಸ್ಥಾನಕ್ಕೆ ರಾಜೀನಾಮೆ ನೀಡಬೇಕಾಯಿತು’ ಎಂದು ವಿವರಿಸಿದರು.

‘ಈಗ ರಾಜು ಅವರ ನೇತೃತ್ವದಲ್ಲೇ ನ. 30ರಂದು ನವದೆಹಲಿ ಚಲೋ ಚಳವಳಿ ರೂಪಿಸಲಾಗಿದೆ. ಅದಕ್ಕಾಗಿ ಅಖಿಲ ಭಾರತ ಕೃಷಿ ಸಂಘರ್ಷ ಸಂಘಟನೆಗಳ ಸಮನ್ವಯ ಸಮಿತಿ ರಚಿಸಲಾಗಿದೆ. ದೇಶದ ವಿವಿಧ ಭಾಗಗಳ ರೈತರು ನವದೆಹಲಿಗೆ ಹೋಗಿ, ಸಂಸತ್ತಿಗೆ ಮುತ್ತಿಗೆ ಹಾಕುವ ಹೋರಾಟದಲ್ಲಿ ಪಾಲ್ಗೊಳ್ಳುವರು. ಬಳ್ಳಾರಿ ಜಿಲ್ಲೆಯಿಂದ 500 ಜನ ರೈತರು ದೆಹಲಿಗೆ ತೆರಳಲು ಸಿದ್ಧರಾಗಿದ್ದಾರೆ’ ಎಂದು ಮಾಹಿತಿ ನೀಡಿದರು.

ADVERTISEMENT

‘ಮುಖ್ಯಮಂತ್ರಿ ಕುಮಾರಸ್ವಾಮಿ ಚುನಾವಣೆಗೂ ಮುನ್ನ ರೈತರ ಸಂಪೂರ್ಣ ಸಾಲ ಮನ್ನಾ ಮಾಡುವ ಭರವಸೆ ಕೊಟ್ಟಿದ್ದರು. ಆದರೆ, ಇದುವರೆಗೆ ಆ ಕೆಲಸ ಮಾಡಿಲ್ಲ. ರೈತಪರವಾದ ಒಂದೇ ಒಂದು ಯೋಜನೆ ಜಾರಿಗೆ ತಂದಿಲ್ಲ. ಅದನ್ನು ವಿರೋಧಿಸಿ ನ. 12ರಂದು ವಿಧಾನಸೌಧಕ್ಕೆ ಮುತ್ತಿಗೆ ಹಾಕಲು ತೀರ್ಮಾನಿಸಲಾಗಿದೆ’ ಎಂದರು.

‘ಕೇಂದ್ರ ಹಾಗೂ ರಾಜ್ಯ ಸರ್ಕಾರಗಳು ರೈತರನ್ನು ಬೀದಿಗೆ ತಳ್ಳಿವೆ. ಚುನಾವಣೆ ಸಂದರ್ಭದಲ್ಲಿ ರೈತರ ಬಗ್ಗೆ ಮೊಸಳೆ ಕಣ್ಣೀರು ಸುರಿಸುವ ರಾಜಕೀಯ ಪಕ್ಷಗಳ ಮುಖಂಡರು ಅಧಿಕಾರಕ್ಕೆ ಬರುತ್ತಿದ್ದಂತೆ ರೈತರನ್ನು ಮರೆತು ಬಿಡುವ ಚಾಳಿ ಬೆಳೆಸಿಕೊಂಡಿದ್ದಾರೆ. ಕೇಂದ್ರ ಸರ್ಕಾರ ಪ್ರತಿ ಟನ್‌ ಕಬ್ಬಿಗೆ ₹ 2,700 ಬೆಂಬಲ ಬೆಲೆ ನಿಗದಿಪಡಿಸಿದೆ. ಆದರೆ, ಒಂದೊಂದು ಸಕ್ಕರೆ ಕಾರ್ಖಾನೆಗಳು ಒಂದೊಂದು ರೀತಿ ದರ ನಿಗದಿಪಡಿಸಿವೆ. ಎಲ್ಲ ಕಾರ್ಖಾನೆಗಳು ಏಕರೂಪದ ಬೆಲೆ ಕೊಡಲು ಕ್ರಮ ಜರುಗಿಸಬೇಕು’ ಎಂದು ಹೇಳಿದರು.

ರೈತ ಸಂಘದ ಮುಖಂಡರಾದ ಕೃಷ್ಣ ಸಂಗನಕಲ್ಲು, ಎಂ.ಎಲ್‌.ಕೆ. ನಾಯ್ಡು, ಎಂ. ಬಸವರಾಜ, ಎ. ಆಂಜನೇಯಲು, ಗಂಗಾ ಧಾರವಾಡಕರ್‌, ಗೌಶಿಯಾ ಖಾನ್‌, ಗಂಟೆ ಸೋಮಶೇಖರ್‌ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.