ADVERTISEMENT

ಬಿಜೆಪಿಯಿಂದ ತನಿಖಾ ಸಂಸ್ಥೆಗಳ ದುರ್ಬಳಕೆ

ಕೆ.ಪಿ.ಸಿ.ಸಿ. ಮಾಧ್ಯಮ ವಕ್ತಾರ ವಿ.ಎಸ್.ಉಗ್ರಪ್ಪ ಆರೋಪ

​ಪ್ರಜಾವಾಣಿ ವಾರ್ತೆ
Published 1 ಸೆಪ್ಟೆಂಬರ್ 2019, 15:54 IST
Last Updated 1 ಸೆಪ್ಟೆಂಬರ್ 2019, 15:54 IST
ವಿ.ಎಸ್‌. ಉಗ್ರಪ್ಪ
ವಿ.ಎಸ್‌. ಉಗ್ರಪ್ಪ   

ಬಳ್ಳಾರಿ: ‘ಕೇಂದ್ರ ಸರ್ಕಾರವು ಜಾರಿ ನಿರ್ದೇಶನಾಲಯ ಮತ್ತು ತನಿಖಾ ಸಂಸ್ಥೆಗಳನ್ನು ದುರ್ಬಳಕೆ ಮಾಡಿಕೊಳ್ಳುತ್ತಿದೆ. ಸಚಿವ ಪ್ರಹ್ಲಾದ್ ಜೋಶಿ ಸೇರಿದಂತೆ ಬಿಜೆಪಿ ನಾಯಕರ ಮೇಲಿನ ಪ್ರಕರಣಗಳನ್ನು ಹಿಂಪಡೆದುಕೊಂಡಿದೆ’ ಎಂದು ಕೆ.ಪಿ.ಸಿ.ಸಿ. ಮಾಧ್ಯಮ ವಕ್ತಾರ ವಿ.ಎಸ್.ಉಗ್ರಪ್ಪ ಆರೋಪಿಸಿದರು.

ಭಾನುವಾರ ಇಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿ,‘ಆರ್ಥಿಕ ಅಪರಾಧ ಮಾಡದಿದ್ದರೂ ಕಾಂಗ್ರೆಸ್ ನಾಯಕರಿಗೆ ಕೇಂದ್ರ ಸರ್ಕಾರ ತನಿಖಾ ಸಂಸ್ಥೆಗಳ ಮೂಲಕ ಕಿರುಕುಳ ನೀಡುತ್ತಿದೆ. ಕಾಂಗ್ರೆಸ್ ನಾಯಕ ಡಿ.ಕೆ.ಶಿವಕುಮಾರ್ ಕಾಂಗ್ರೆಸ್ ಪಕ್ಷದ ಶಿಸ್ತಿನ ಸಿಪಾಯಿ. ಪಕ್ಷ ಅವರ ಜೊತೆಗಿದೆ. ಅವರು ಯಾವುದೇ ಯಾವುದೇ ತಪ್ಪು ಮಾಡಿಲ್ಲ. ಇದು ರಾಜಕೀಯ ಪ್ರೇರಿತವಾದ, ದುರುದ್ದೇಶದಿಂದ ಕೂಡಿದ ಪ್ರಕರಣ. ಬೇರೆ ಪಕ್ಷದವರನ್ನು ಪಕ್ಷಕ್ಕೆ ಬನ್ನಿ ಎನ್ನುತ್ತಾರೆ. ಬರದಿದ್ದರೆ ಪ್ರಕರಣ ದಾಖಲಿಸುತ್ತಾರೆ’ ಎಂದು ದೂರಿದರು.

‘ಕಾಂಗ್ರೆಸ್ ಅಧಿಕಾರದಲ್ಲಿದ್ದಾಗ ಯಾವುದೇ ತನಿಖಾ ಸಂಸ್ಥೆಗಳನ್ನ ದುರ್ಬಳಕೆ ಮಾಡಿಕೊಂಡಿಲ್ಲ. ತಲೆಕೆಟ್ಟ ಬಿಜೆಪಿಯವರು ವಿನಾಕಾರಣ ಆರೋಪ ಮಾಡುತ್ತಿದ್ದಾರೆ. ಬಿಜೆಪಿಯವರು ಸಿಬಿಐ ಮೂಲಕ ರಾಬರ್ಟ್‌ ವಾದ್ರಾ, ಪಿ. ಚಿದಂಬರಂ, ಡಿ.ಕೆ. ಶಿವಕುಮಾರ ಸೇರಿದಂತೆ ಹಲವು ಕಾಂಗ್ರೆಸ್ ನಾಯಕರಿಗೆ ಕಿರುಕುಳ ನೀಡುತ್ತಿದ್ದಾರೆ’ ಎಂದರು.

ADVERTISEMENT

‘ಬ್ಯಾಂಕ್‌ಗಳ ವಿಲೀನದಿಂದ ದೇಶದ ಆರ್ಥಿಕ ಪರಿಸ್ಥಿತಿ ಸುಧಾರಿಸುವುದಿಲ್ಲ. ದೇಶದ ಆರ್ಥಿಕ ಪರಿಸ್ಥಿತಿ ತುಂಬ ಕಳವಳಕಾರಿಯಾಗಿದೆ. ಕೈಗಾರಿಕೆಗಳು ಮುಚ್ಚುತ್ತಿವೆ. ಜಿಂದಾಲ್ ಕಂಪನಿಯಲ್ಲೂ ಶೇ.20ರಷ್ಟು ಉತ್ಪಾದನೆ ಕಡಿಮೆಯಾಗಿದೆ. ಈ ಸ್ಥಿತಿಗೆ ಕೇಂದ್ರ ಸರ್ಕಾರದ ಕೆಟ್ಟ ಆಡಳಿತ ನೀತಿಯೇ ಕಾರಣ’ ಎಂದು ಜರಿದರು.

ಮುಖಂಡರಾದ ಕಲ್ಲುಕಂಬ ಪಂಪಾಪತಿ, ಪಕ್ಷದ ಕಾರ್ಯದರ್ಶಿ ವೆಂಕಟೇಶ ಹೆಗಡೆ, ಯುವ ಕಾಂಗ್ರೆಸ್ ಘಟಕದ ಅಧ್ಯಕ್ಷ ಹನುಮ ಕಿಶೋರ್, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಅಸುಂಡಿ ನಾಗರಾಜಗೌಡ, ಹಿಂದುಳಿದ ವರ್ಗಗಳ ಜಿಲ್ಲಾ ಅಧ್ಯಕ್ಷ ಕೆ.ಮಲ್ಲಿಕಾರ್ಜುನ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.