ADVERTISEMENT

ಬಳ್ಳಾರಿ: ರೈತರ ನಿಂದಿಸಿದ ತುಕಾರಾಂಗೆ ತರಾಟೆ

ಭೂಸಂತ್ರಸ್ತ ಹೋರಾಟ ಸಮಿತಿಯಿಂದ ಟೀಕೆ | ತಿದ್ದಿಕೊಳ್ಳಿ ಎಂದು ಸಲಹೆ

​ಪ್ರಜಾವಾಣಿ ವಾರ್ತೆ
Published 21 ಸೆಪ್ಟೆಂಬರ್ 2025, 5:07 IST
Last Updated 21 ಸೆಪ್ಟೆಂಬರ್ 2025, 5:07 IST
ಇ.ತುಕಾರಾಂ ಸಂಸದ
ಇ.ತುಕಾರಾಂ ಸಂಸದ   

ಬಳ್ಳಾರಿ: ಭೂಸಂತ್ರಸ್ತ ರೈತರನ್ನು ಏಕವಚನದಲ್ಲಿ ನಿಂದಿಸಿ, ಆಕ್ರೋಶಭರಿತರಾಗಿ ಮಾತನಾಡಿದ ಬಳ್ಳಾರಿ–ವಿಜಯನಗರ ಸಂಸದ ಇ.ತುಕಾರಾಂ ನಡೆಗೆ ಕುಡುತಿನಿ ಭೂಸಂತ್ರಸ್ತರ ಹೋರಾಟ ಸಮಿತಿ ತೀವ್ರ ಆಕ್ಷೇಪ ವ್ಯಕ್ತಪಡಿಸಿದೆ. 

ಈ ಕುರಿತು ಸಮಿತಿಯು ಶನಿವಾರ ಪತ್ರಿಕಾ ಹೇಳಿಕೆ ಬಿಡುಗಡೆ ಮಾಡಿದೆ. ‘ಸರಿಯಾದ ಭೂ ಬೆಲೆ ನೀಡಬೇಕು, ಉದ್ಯೋಗ ನೀಡಬೇಕು ಎಂದು ಸುಮಾರು ಮೂರು ವರ್ಷಗಳಿಂದ ನಿರಂತರ ಧರಣಿ ಕುಳಿತಿರುವ ರೈತರು ಕೇವಲ ಭರವಸೆಗಳನ್ನು ಮಾತ್ರವೇ ಪಡೆದಿದ್ದಾರೆಯೇ ಹೊರತು ಸಮಸ್ಯೆಗಳು ಇತ್ಯರ್ಥವಾಗಿಲ್ಲ. ಹೀಗಾಗಿ ಸಹಜವಾಗಿ ಜನಪ್ರತಿನಿಧಿಗಳನ್ನು ಪ್ರಶ್ನೆ ಮಾಡುತ್ತಾರೆ. ಜವಾಬ್ದಾರಿ ಇರುವ ಸಂಸದರು ತಾಳ್ಮೆಯಿಂದ ಉತ್ತರಿಸಬೇಕಿತ್ತು. ಪರಿಹಾರದ ಪ್ರಯತ್ನಗಳನ್ನು ತಿಳಿಸಬೇಕಾಗಿತ್ತು. ಆದರೆ ಪ್ರಶ್ನಿಸಿದವರ ಮೇಲೆ ರೇಗಾಡಿ, ತಮ್ಮ ರಾಜಕೀಯ ಭಿನ್ನಾಭಿಪ್ರಾಯ, ವೈಷಮ್ಯವನ್ನು ಎಳೆದು ತಂದಿರುವುದು ಆಕ್ಷೇಪಾರ್ಹ. ಕುಡುತಿನಿ ಭೂಸಂತ್ರಸ್ತರ ಹೋರಾಟ ಪಕ್ಷಾತೀತ. ವಿಶಾಲ‌ ಉದ್ದೇಶದ ಹೋರಾಟ ಎನ್ನುವುದನ್ನು ಸಂಸದರು ತಿಳಿದುಕೊಳ್ಳಬೇಕು. ಅಸಹನೆ, ರಾಜಕೀಯ ಸಂಕುಚಿತತೆ ಅವರಿಗೆ ಶೋಭೆ ತರುವುದಿಲ್ಲ. ಅದನ್ನು ತಿದ್ದಿಕೊಳ್ಳಬೇಕು’ ಎಂದು ಸಂಘಟನೆ ಹೇಳಿದೆ. 

‘ರೈತರ ನ್ಯಾಯವಾದ ಬೇಡಿಕೆಗಳನ್ನು ಪರಿಹರಿಸದೇ, ಬೇರೆ ಕೈಗಾರಿಕೆಗಳಿಗೆ ಭೂಮಿಯನ್ನು ನೀಡಲು ಸರ್ಕಾರ ಮುಂದಾದರೆ ಹೋರಾಟವನ್ನು ತೀವ್ರ ಸ್ವರೂಪಕ್ಕೆ ಕೊಂಡೊಯ್ಯಬೇಕಾಗುತ್ತದೆ’ ಎಂದು ಸಮಿತಿ ಎಚ್ಚರಿಸಿದೆ. 

ADVERTISEMENT

ಆರ್ಸೆಲರ್‌ ಮಿತ್ತಲ್‌ ಕಂಪನಿಗೆಂದು ವಶಕ್ಕೆ ಪಡೆದ ಭೂಮಿಯನ್ನು ಮತ್ತೊಂದು ಕಂಪನಿಗೆ ನೀಡುವ ಕೆಐಎಡಿಬಿಯ ನಿರ್ಧಾರದ ವಿರುದ್ಧ ನಡೆಯುತ್ತಿದ್ದ ಪ್ರತಿಭಟನಾ ಸ್ಥಳಕ್ಕೆ ಹೋಗಿದ್ದ ಸಂಸದ ತುಕಾರಾಂ, ಅಲ್ಲಿ ರೈತರೊಬ್ಬರ ಪ್ರಶ್ನೆಗೆ ತಾಳ್ಮೆ ಕಳೆದುಕೊಂಡು ಉತ್ತರಿಸಿದ್ದರು. ಇತ್ತೀಚೆಗೆ ಈ ಘಟನೆ ನಡೆದಿತ್ತು. ವಿಡಿಯೊ ಸಾಮಾಜಿಕ ಮಾಧ್ಯಮಗಳಲ್ಲಿ ಹರಿದಾಡಿತ್ತು. 

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.