ADVERTISEMENT

ಎಂ.ಪಿ. ರವೀಂದ್ರ ಜನರ ಪಾಲಿನ ರವಿಯಣ್ಣ: ಭಾವುಕರಾದ ಸಹೋದರಿ ಸುಮಾ

ಅಭಿಮಾನಿ ಬಳಗದಿಂದ ಹಮ್ಮಿಕೊಂಡಿದ್ದ ನುಡಿನಮನ ಕಾರ್ಯಕ್ರಮ

​ಪ್ರಜಾವಾಣಿ ವಾರ್ತೆ
Published 15 ನವೆಂಬರ್ 2018, 15:19 IST
Last Updated 15 ನವೆಂಬರ್ 2018, 15:19 IST
ಹೊಸಪೇಟೆಯಲ್ಲಿ ಗುರುವಾರ ಸಂಜೆ ಹಮ್ಮಿಕೊಂಡಿದ್ದ ಎಂ.ಪಿ. ರವೀಂದ್ರ ನುಡಿನಮನ ಕಾರ್ಯಕ್ರಮದಲ್ಲಿ ಅವರ ಭಾವಚಿತ್ರಕ್ಕೆ ಶಾಸಕ ಆನಂದ್‌ ಸಿಂಗ್‌ ಅವರು ಪುಷ್ಪ ಸಮರ್ಪಿಸಿ ಗೌರವ ಸೂಚಿಸಿದರು. ರವೀಂದ್ರ ಅವರ ಸಹೋದರಿಯರಾದ ವೀಣಾ, ಸುಮಾ ಇದ್ದಾರೆ–ಪ್ರಜಾವಾಣಿ ಚಿತ್ರ
ಹೊಸಪೇಟೆಯಲ್ಲಿ ಗುರುವಾರ ಸಂಜೆ ಹಮ್ಮಿಕೊಂಡಿದ್ದ ಎಂ.ಪಿ. ರವೀಂದ್ರ ನುಡಿನಮನ ಕಾರ್ಯಕ್ರಮದಲ್ಲಿ ಅವರ ಭಾವಚಿತ್ರಕ್ಕೆ ಶಾಸಕ ಆನಂದ್‌ ಸಿಂಗ್‌ ಅವರು ಪುಷ್ಪ ಸಮರ್ಪಿಸಿ ಗೌರವ ಸೂಚಿಸಿದರು. ರವೀಂದ್ರ ಅವರ ಸಹೋದರಿಯರಾದ ವೀಣಾ, ಸುಮಾ ಇದ್ದಾರೆ–ಪ್ರಜಾವಾಣಿ ಚಿತ್ರ   

ಹೊಸಪೇಟೆ: ‘ನನ್ನ ಅಣ್ಣ ಎಂ.ಪಿ. ರವೀಂದ್ರ ಕುಟುಂಬಕ್ಕಿಂತ ಹೆಚ್ಚಿನ ಸಮಯ ಸಮಾಜ ಸೇವೆಯಲ್ಲಿ ಕಳೆಯುತ್ತಿದ್ದ. ಜನಸಾಮಾನ್ಯರ ಪಾಲಿಗೆ ರವಿಯಣ್ಣ ಆಗಿದ್ದ. ಇಷ್ಟು ಬೇಗ ಎಲ್ಲರನ್ನೂ ಬಿಟ್ಟು ಹೋಗುತ್ತಾನೆ ಎಂದು ಕನಸು, ಮನಸ್ಸಿನಲ್ಲಿಯೂ ಯೋಚಿಸಿರಲಿಲ್ಲ’ ಎಂದು ಅವರ ಸಹೋದರಿ ಸುಮಾ ಭಾವುಕರಾಗಿ ನುಡಿದರು.

ಎಂ.ಪಿ. ರವೀಂದ್ರ ಅಭಿಮಾನಿ ಬಳಗದಿಂದ ಗುರುವಾರ ಸಂಜೆ ನಗರದಲ್ಲಿ ಹಮ್ಮಿಕೊಂಡಿದ್ದ ನುಡಿನಮನ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಮಾತನಾಡಿದ ಅವರು, ‘ಅಧಿಕಾರಕ್ಕಾಗಿ ಆಸೆ ಪಡಬಾರದು. ಅದು ನಮ್ಮನ್ನು ಹುಡುಕಿಕೊಂಡು ಬರಬೇಕು. ಸಮಾಜ ಹಾಗೂ ಜನಸೇವೆಗೆ ಅಧಿಕಾರ ಬೇಕಿಲ್ಲ. ಅಧಿಕಾರ ಸಿಕ್ಕರೆ ಇನ್ನೂ ಹೆಚ್ಚಿನ ಕೆಲಸ ಮಾಡಬಹುದು ಎಂದು ನಮ್ಮ ತಂದೆ ಹೇಳುತ್ತಿದ್ದರು. ಅದರಂತೆಯೇ ಅಣ್ಣ ಕೂಡ ನಡೆದುಕೊಳ್ಳುತ್ತಿದ್ದ. ಹೆಚ್ಚಿನ ಸಮಯವನ್ನು ಜನರ ಮಧ್ಯೆಯೇ ಕಳೆಯುತ್ತಿದ್ದ. ಅನೇಕ ಸಲ ಕುಟುಂಬ ಸದಸ್ಯರು ಆತನ ಮೇಲೆ ಮುನಿಸಿಕೊಳ್ಳುತ್ತಿದ್ದರು’ ಎಂದು ನೆನಪಿಸಿಕೊಂಡರು.

ಇನ್ನೊಬ್ಬ ಸಹೋದರಿ ವೀಣಾ ಮಾತನಾಡಿ, ‘ನಮ್ಮ ತಂದೆ ಎಲ್ಲರನ್ನೂ ಸರಿದೂಗಿಸಿಕೊಂಡು ಹೋಗುತ್ತಿದ್ದರು. ಆದರೆ, ರವಿಯಣ್ಣ ವ್ಯಕ್ತಿತ್ವ ಸ್ವಲ್ಪ ಭಿನ್ನವಾಗಿತ್ತು. ಯಾವುದಾದರೂ ಕೆಲಸ ಆಗುವುದಾದರೆ ಆಗುತ್ತದೆ ಎಂದು ಹೇಳುತ್ತಿದ್ದ. ಇಲ್ಲವಾದರೆ ಇಲ್ಲ ಎಂದು ನೇರವಾಗಿ ಹೇಳುತ್ತಿದ್ದ. ನೇರ, ನಿಷ್ಠುರ ವ್ಯಕ್ತಿತ್ವದವನಾಗಿದ್ದ. ಅಷ್ಟೇ ಸ್ನೇಹ ಜೀವಿ ಕೂಡ. ಆದರೆ, ನೇರವಾಗಿ ಮಾತನಾಡುವವರನ್ನು ಸಮಾಜ ಇಷ್ಟಪಡುವುದಿಲ್ಲ. ಅದರಲ್ಲೂ ರಾಜಕಾರಣದಲ್ಲಿ ಇರುವವರಿಗೆ ಇನ್ನೂ ಕಷ್ಟದ ಕೆಲಸ’ ಎಂದು ತಿಳಿಸಿದರು.

ADVERTISEMENT

‘ನಮ್ಮ ತಂದೆ, ಕುಟುಂಬದವರ ನೋವು–ನಲಿವು ಆಲಿಸುತ್ತಿದ್ದರು. ರವಿಯಣ್ಣ ಹಾಗಿರಲಿಲ್ಲ. ಹೆಚ್ಚಿನ ಸಮಯ ಜನರೊಂದಿಗೆ ಕಳೆಯುತ್ತಿದ್ದ. ಆತನ ಬಗ್ಗೆ ಬೇರೆಯವರಿಂದ ತಿಳಿದುಕೊಳ್ಳುತ್ತಿದ್ದೆವು. ಸಂಗೀತ, ನಾಟಕ, ಹಲಗೆ ಬಾರಿಸುವುದು, ಕ್ರಿಕೆಟ್‌, ವಾಲಿಬಾಲ್‌ ಆಡುವುದು ಆತನಿಗೆ ಬಹಳ ಇಷ್ಟದ ಸಂಗತಿಗಳಾಗಿದ್ದವು. ಅನೇಕ ಜನರಿಗೆ ವಿದ್ಯಾಭ್ಯಾಸ, ನೌಕರಿ ಕೊಡಿಸಿದ್ದಾನೆ. ಎಲ್ಲಕ್ಕಿಂತ ಮುಖ್ಯವಾಗಿ ಒಬ್ಬ ಸರಳ ಮನುಷ್ಯನಾಗಿ ಎಲ್ಲರೊಂದಿಗೆ ಮುಕ್ತವಾಗಿ ಬೆರೆಯುವ ಗುಣ ಇತ್ತು. ಈ ಕಾರಣಕ್ಕಾಗಿಯೇ ಸದಾ ಜನ ಅವನನ್ನು ಮುತ್ತಿಕೊಂಡು ಇರುತ್ತಿದ್ದರು’ ಎಂದು ವಿವರಿಸಿದರು.

ಶಾಸಕ ಆನಂದ್‌ ಸಿಂಗ್‌ ಮಾತನಾಡಿ, ‘ಹುಟ್ಟಿದ ಪ್ರತಿಯೊಬ್ಬ ವ್ಯಕ್ತಿಯ ಸಾವು ಖಚಿತ. ಆದರೆ, ರವೀಂದ್ರ ಇಷ್ಟು ಬೇಗ ಇಹಲೋಕ ತ್ಯಜಿಸುತ್ತಾರೆ ಎಂದು ಅಂದುಕೊಂಡಿರಲಿಲ್ಲ. ಸ್ನೇಹಜೀವಿ, ಸದಾ ಹಾಸ್ಯ ಚಟಾಕಿ ಹಾರಿಸುತ್ತ ನಗುತ ಇರುತ್ತಿದ್ದರು. ಅವರು ನನಗೆ ಸಿಕ್ಕಾಗಲೆಲ್ಲ ಆರೋಗ್ಯದ ಬಗ್ಗೆ ಕಾಳಜಿ ವಹಿಸುವಂತೆ ಹೇಳುತ್ತಿದ್ದೆ. ಆದರೆ, ಅವರು ಉದಾಸೀನ ಮಾಡುತ್ತ ಬಂದರು’ ಎಂದು ಹೇಳಿದರು.

‘ಈ ಹಿಂದೆ ನಾನು ಬಿಜೆಪಿಯಲ್ಲಿದ್ದಾಗಲೂ ರವೀಂದ್ರ ಅವರು ನನ್ನ ಜತೆ ಒಳ್ಳೆಯ ಬಾಂಧವ್ಯ ಹೊಂದಿದ್ದರು. ಯಾವುದೇ ವಿಷಯಗಳಿರಲಿ ಮುಕ್ತವಾಗಿ ಹಂಚಿಕೊಳ್ಳುತ್ತಿದ್ದರು. ಯಾವುದೇ ರೀತಿಯ ಹಮ್ಮು, ಬಿಮ್ಮು ಇರಲಿಲ್ಲ. ಬಳ್ಳಾರಿ ಜಿಲ್ಲೆಗೆ ರವೀಂದ್ರ ಅವರ ತಂದೆ ಎಂ.ಪಿ. ಪ್ರಕಾಶ್‌ ಅವರ ಕೊಡುಗೆ ಬಹಳ ದೊಡ್ಡದಿದೆ. ರವೀಂದ್ರ ಕೂಡ ಅವರ ಕ್ಷೇತ್ರದಲ್ಲಿ ಉತ್ತಮ ಕೆಲಸ ಮಾಡಿದ್ದಾರೆ’ ಎಂದರು.

ಹಂಪಿ ಕನ್ನಡ ವಿಶ್ವವಿದ್ಯಾಲಯದ ಪ್ರಾಧ್ಯಾಪಕ ಶಿವಪ್ರಕಾಶ್‌, ನಗರಸಭೆ ಸದಸ್ಯರಾದ ನೂರ್‌ ಜಹಾನ್‌, ರಾಮಾಂಜಿನಿ, ಮುಖಂಡರಾದ ಅಯ್ಯಾಳಿ ತಿಮ್ಮಪ್ಪ, ಗುಜ್ಜಲ್‌ ನಾಗರಾಜ್‌, ನಿಂಬಗಲ್‌ ರಾಮಕೃಷ್ಣ, ಮಧುರಚೆನ್ನ ಶಾಸ್ತ್ರಿ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.