ADVERTISEMENT

ಮಲ್ಲಕಂಬಕ್ಕೂ ಸೈ, ಭೂತ ಕುಣಿತಕ್ಕೂ ಸೈ

ಹೂವಿನಹಡಗಲಿಯ ಬಹುಮುಖ ಪ್ರತಿಭೆ ಗಂಗಾಧರ ಮೆಣಸಿನಕಾಯಿ

ಕೆ.ಸೋಮಶೇಖರ
Published 10 ಫೆಬ್ರುವರಿ 2019, 4:31 IST
Last Updated 10 ಫೆಬ್ರುವರಿ 2019, 4:31 IST
‘ರೈತರ ಒಡಲಳಲು’ ನಾಟಕದ ರೈತನ ಪಾತ್ರದಲ್ಲಿ ಗಂಗಾಧರ
‘ರೈತರ ಒಡಲಳಲು’ ನಾಟಕದ ರೈತನ ಪಾತ್ರದಲ್ಲಿ ಗಂಗಾಧರ   

ಹೂವಿನಹಡಗಲಿ: ಪಟ್ಟಣದ ಯುವ ವಿದ್ಯಾರ್ಥಿ ಗಂಗಾಧರ ಮೆಣಸಿನಕಾಯಿ ಪಠ್ಯೇತರಚಟುವಟಿಕೆ ಮೂಲಕ ವಿಶೇಷ ಸಾಧನೆ ಮಾಡುತ್ತಿದ್ದಾರೆ.

ತರಗತಿಯಲ್ಲಿ ಮುಂಚೂಣಿ ವಿದ್ಯಾರ್ಥಿಯಾಗಿರುವ ಗಂಗಾಧರ ಅವರಿಗೆ ಯೋಗಾಸನ, ಮಲ್ಲಕಂಭದ ಕಸರತ್ತುಗಳು ಕರಗತ. ಜಾನಪದ ನೃತ್ಯ ಪ್ರಕಾರಗಳಾದ ಭೂತ ಕುಣಿತ, ನಂದಿಧ್ವಜ ಕುಣಿತ, ಡೊಳ್ಳು ಕುಣಿತದಲ್ಲಿ ಪರಿಣತ. ನಾಟಕಗಳಲ್ಲೂ ಮನೋಜ್ಞ ಅಭಿನಯ. ಹೀಗೆ ತನ್ನ ವಿಶಿಷ್ಟ ಕಲೆಯನ್ನು ನಾಡಿನ ಪ್ರಮುಖ ವೇದಿಕೆಗಳಲ್ಲಿ ಪ್ರದರ್ಶಿಸುವ ಮೂಲಕ ಹೂವಿನಹಡಗಲಿ ಮಲ್ಲಿಗೆಯ ಪರಿಮಳವನ್ನು ಬೇರೆಡೆಗೂ ಪಸರಿಸಿದ್ದಾರೆ.

ಪಟ್ಟಣದ ಅಕ್ಕಿಪೇಟೆಯಲ್ಲಿ ‘ಮಲ್ಲಿಕಾರ್ಜುನ ಖಾನಾವಳಿ’ ನಡೆಸುತ್ತಿರುವ ಮೆಣಸಿನಕಾಯಿ ಅಶೋಕ, ಶಕುಂತಲಾ ದಂಪತಿಯ ಪುತ್ರ ಗಂಗಾಧರ ಈಗ ಬೆಂಗಳೂರಿನ ಗಾಂಧಿ ಕೃಷಿ ವಿಜ್ಞಾನ ಕೇಂದ್ರದಲ್ಲಿ (ಜಿ.ಕೆ.ವಿ.ಕೆ.) ಬಿ.ಎಸ್ಸಿ (ಕೃಷಿ) ಅಭ್ಯಾಸ ಮಾಡುತ್ತಿದ್ದಾರೆ. ಇವರ ತಂದೆ– ತಾಯಿ ಖಾನಾವಳಿ ವೃತ್ತಿಯಿಂದಲೇ ಮಕ್ಕಳಿಗೆ ಉನ್ನತ ಶಿಕ್ಷಣ ಕೊಡಿಸುವ ಸಂಕಲ್ಪ ತೊಟ್ಟಿದ್ದರೆ, ಪೋಷಕರ ಕನಸುಗಳನ್ನು ಈಡೇರಿಸುವ ನಿಟ್ಟಿನಲ್ಲಿ ಗಂಗಾಧರ ಸಾಗಿದ್ದಾರೆ.

ADVERTISEMENT

ಇವರು ಪ್ರಾಥಮಿಕ ಶಿಕ್ಷಣವನ್ನು ಪಟ್ಟಣದ ಎಸ್‌.ವಿ.ಜಿ. ಶಾಲೆ ಮತ್ತು ಕೆ.ಎನ್‌. ಶಾಲೆಯಲ್ಲಿ ಕಲಿತಿದ್ದಾರೆ. ಪ್ರೌಢ ಶಿಕ್ಷಣಕ್ಕೆ ಸುತ್ತೂರಿನ ಜೆ.ಎಸ್‌.ಎಸ್‌. ವಿದ್ಯಾಸಂಸ್ಥೆಗೆ ಸೇರಿ ಅಲ್ಲಿಯೇ ಮಲ್ಲಕಂಭ ಹಾಗೂ ಯೋಗಾಸನ ಕಲಿತಿದ್ದಾರೆ. ಅನೇಕ ಕಡೆಗಳಲ್ಲಿ ಆಕರ್ಷಕ ಮಲ್ಲಕಂಭ ಪ್ರದರ್ಶನ ನಡೆಸಿ ಸೈ ಎನಿಸಿಕೊಂಡಿದ್ದಾರೆ. ಪಟ್ಟಣದ ಮ.ಮ.ಪಾಟೀಲ ಪದವಿಪೂರ್ವ ಕಾಲೇಜಿನಲ್ಲಿ ಪಿ.ಯು.ಸಿ. ಓದಿದ್ದಾರೆ.

ಬೆಂಗಳೂರಿನ ಜಿ.ಕೆ.ವಿ.ಕೆ.ಯಲ್ಲಿ ಕೃಷಿ ಪದವಿ ಅಭ್ಯಾಸ ಮಾಡುತ್ತಲೇ ಅಲ್ಲಿನ ‘ಭೂಮಿಕಾ’ ಸಾಂಸ್ಕೃತಿಕ ತಂಡಕ್ಕೆ ಸೇರ್ಪಡೆಯಾಗಿ ಕಲಾ ಲೋಕ ಪ್ರವೇಶಿಸಿದ್ದಾರೆ. ಅಲ್ಲಿನ ಸಾಂಸ್ಕೃತಿಕ ಪರಿಸರದಲ್ಲಿ ಬಯಲು ಸೀಮೆಯ ಕಲೆಗಳ ಜತೆಗೆ ವಿವಿಧ ಜಾನಪದ ಕಲಾ ಪ್ರಕಾರಗಳನ್ನು ಕಲಿತಿದ್ದಾರೆ. ಮಂಡ್ಯ, ಹಾಸನದಲ್ಲಿ ನಡೆದ ಅಂತರ ಕಾಲೇಜು ಯುವ ಜನೋತ್ಸವದಲ್ಲಿ ಭೂತ ಕುಣಿತ, ನಂದಿಧ್ವಜ ಕುಣಿತ, ಡೊಳ್ಳು ಕುಣಿತ ಪ್ರದರ್ಶನ ನಡೆಸಿ ತೀರ್ಪುಗಾರರ ಮೆಚ್ಚುಗೆಗೆ ಪಾತ್ರರಾಗಿದ್ದಾರೆ.

ಜಿ.ಕೆ.ವಿ.ಕೆ. ಅಂಗಳದಲ್ಲಿ ನಡೆದ ಕೃಷಿ ಮೇಳದಲ್ಲಿ ಆಯೋಜಿಸಿದ್ದ ‘ರೈತರ ಒಡಲಳಲು’ ಮತ್ತು ‘ಕಂಬಾಲಪಲ್ಲಿ’ ನಾಟಕಗಳ ಮುಖ್ಯ ಪಾತ್ರಗಳಲ್ಲಿ ಮನೋಜ್ಞವಾಗಿ ಅಭಿನಯಿಸಿ ಗಮನ ಸೆಳೆದಿದ್ದಾರೆ. ಕಲರ್ಸ್‌ ಕನ್ನಡ ವಾಹಿನಿಯ ‘ಬಿಗ್‌ ಬಾಸ್‌’ ಉದ್ಘಾಟನಾ ಕಾರ್ಯಕ್ರಮದಲ್ಲಿ ಜಿ.ಕೆ.ವಿ.ಕೆ. ‘ಭೂಮಿಕಾ’ ತಂಡ ನಡೆಸಿದ ಅಮೋಘ ನೃತ್ಯ ಪ್ರದರ್ಶನದಲ್ಲಿ ಇವರೂ ಭಾಗವಹಿಸಿದ್ದರು.

‘ವಿವಿಧ ಕಲೆ, ಕಸರತ್ತುಗಳನ್ನು ಬೇರೆ ಕಡೆಗಳಲ್ಲೇ ಕಲಿತು, ಬೇರೆ ಬೇರೆ ವೇದಿಕೆಗಳಲ್ಲಿ ಪ್ರದರ್ಶನ ನೀಡಿದ್ದೇನೆ. ನನ್ನ ಕಲೆ ಪ್ರದರ್ಶನಕ್ಕೆ ಇನ್ನೂ ನಮ್ಮೂರಲ್ಲಿ ಅವಕಾಶ ಸಿಕ್ಕಿಲ್ಲ’ ಎಂದು ಬೇಸರ ವ್ಯಕ್ತಪಡಿಸುವ ಗಂಗಾಧರ, ‘ವಿದ್ಯಾಭ್ಯಾಸ ಪೂರ್ಣಗೊಂಡ ಬಳಿಕ ನಾನು ಕಲಿತಿರುವ ಕಲೆಯನ್ನು ಇತರರಿಗೂ ಕಲಿಸಿ ಯುವಕರನ್ನು ಸಾಂಸ್ಕೃತಿಕವಾಗಿ ಅಣಿಗೊಳಿಸುತ್ತೇನೆ’ ಎಂದು ಹೇಳುತ್ತಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.