ತೋರಣಗಲ್ಲು: ಸಮೀಪದ ತಾರಾನಗರ ಗ್ರಾಮದ ನಾರಿಹಳ್ಳ ಜಲಾಶಯದ ಬಳಿ ರಾಜ್ಯ ಸರ್ಕಾರದ ಮಹತ್ವಾಕಾಂಕ್ಷೆ ಯೋಜನೆಯಾದ ಬಹುಗ್ರಾಮ ಕುಡಿಯುವ ನೀರಿನ ಯೋಜನೆಯ ಕಾಮಗಾರಿಯು ಭರದಿಂದ ಸಾಗಿದೆ.
ಹೋಬಳಿಯ ಕೊಡಾಲು ಗ್ರಾಮ ಮತ್ತು ಇತರೆ 28 ವಸತಿ ಗ್ರಾಮಗಳು, ಹೆಚ್ಚುವರಿ 4 ವಸತಿ ಗ್ರಾಮಗಳು ಸೇರಿದಂತೆ ಒಟ್ಟು 33 ವಸತಿ ಗ್ರಾಮಗಳಿಗೆ ಶಾಶ್ವತ ಶುದ್ಧ ಕುಡಿಯುವ ನೀರಿನ ವ್ಯವಸ್ಥೆ ಒದಗಿಸಲಾಗುತ್ತಿದ್ದು, ನೀರಿನ ಕೊರತೆ ಎದುರಿಸುತ್ತಿರವ ಗ್ರಾಮಗಳಿಗೆ ಈ ಯೋಜನೆಯು ವರದಾನವಾಗಿದೆ.
ನಾರಿಹಳ್ಳ ಜಲಾಶಯದ 8.82 ಎಂಎಲ್‍ಡಿ (0.11 ಟಿಎಂಸಿ) ನೀರನ್ನು ಬೃಹತ್ ನೀರಿನ ಸಂಸ್ಕರಣಾ ಘಟಕದಲ್ಲಿ ಸಂಸ್ಕರಿಸಿ 4 ಲಕ್ಷ ಲೀಟರ್ ನೀರಿನ ಸಾಮಾರ್ಥ್ಯದ ಎರಡು ದೊಡ್ಡ ಟ್ಯಾಂಕರ್‌ಗಳಲ್ಲಿ ಶುದ್ಧ ನೀರನ್ನು ಸಂಗ್ರಹಿಸಿ, ಎಲ್ಲ ಹಳ್ಳಿಗಳಲ್ಲಿನ ಮೇಲ್ಮಟ್ಟದ ಟ್ಯಾಂಕರ್‍ಗಳಿಗೆ ನೀರನ್ನು ಸರಬರಾಜು ಮಾಡಿ ಜನರಿಗೆ ಶುದ್ಧ ನೀರನ್ನು ಒದಗಿಸಲಾಗುತ್ತದೆ.
ರಾಜ್ಯ ಸರ್ಕಾರದ ಗ್ರಾಮೀಣ ಕುಡಿಯುವ ನೀರು ಮತ್ತು ನೈರ್ಮಲ್ಯ ಇಲಾಖೆ ವತಿಯಿಂದ ಕೇಂದ್ರ, ರಾಜ್ಯ ಸರ್ಕಾರ ಹಾಗೂ ಬಳ್ಳಾರಿ ಜಿಲ್ಲಾ ಖನಿಜ ನಿಧಿಯ ಯೋಜನೆಯ ಅನುದಾನದ ₹89 ಕೋಟಿ ವೆಚ್ಚದಲ್ಲಿ ಬಹುಗ್ರಾಮ ಕುಡಿಯುವ ನೀರಿನ ಯೋಜನೆಯ ಕಾಮಗಾರಿ ಹಮ್ಮಿಕೊಳ್ಳಲಾಗಿದೆ.
ರಾಷ್ಟ್ರೀಯ ಗ್ರಾಮೀಣ ಕುಡಿಯುವ ನೀರು ಕಾರ್ಯಕ್ರಮದಡಿ ಬಹುಗ್ರಾಮ ಕುಡಿಯುವ ನೀರು ಸರಬರಾಜು ಯೋಜನೆಯಡಿಯಲ್ಲಿ ನೀರನ್ನು ವಿವಿಧ ಜಲಮೂಲಗಳಿಂದ ಪಡೆದು ಅಧಿಕ ಪ್ಲೋರೈಡ್, ಸವಳು ಅಂಶ, ನೈಟ್ರೇಟ್ ಹಾಗೂ ಕಬ್ಬಿಣ ಅಂಶಗಳ ಬಾಧೆಗೊಳಗಾಗಿರುವ ಜನವಸತಿಗಳಿಗೆ ಸುರಕ್ಷಿತ ನೀರು ಪೂರೈಕೆ ಮಾಡುವುದೇ ಈ ಯೋಜನೆಯ ಉದ್ದೇಶವಾಗಿದೆ.
ಯಾರು ಏನಂದರು?
ಸಂಡೂರು ತಾಲ್ಲೂಕಿನಲ್ಲಿ ನೀರಿನ ಕೊರತೆ ಇರುವ ಗ್ರಾಮಗಳಿಗೆ ಬಹುಗ್ರಾಮ ಕುಡಿಯುವ ನೀರಿನ ಯೋಜನೆಯು ವರದಾನವಾಗಲಿದೆ. ದೊಡ್ಡ ಪ್ರಮಾಣದ 2 ನೀರಿನ ಟ್ಯಾಂಕರ್‌ಗಳ ಕಾಮಗಾರಿ ಮುಗಿದ ತಕ್ಷಣ ಎಲ್ಲ ಗ್ರಾಮಗಳಿಗೆ ಶುದ್ಧ ನೀರು ಪೂರೈಕೆ ಮಾಡಲಾಗುವುದು – ಎಂ.ಎನ್.ವಿನಾಯಕ ಗ್ರಾಮೀಣ ಕುಡಿಯುವ ನೀರು ಮತ್ತು ನೈರ್ಮಲ್ಯ ಇಲಾಖೆಯ ಎಂಜಿನಿಯರ್ ಸಂಡೂರು
ತೋರಣಗಲ್ಲು ಹೋಬಳಿಯ ಎಲ್ಲ ಹಳ್ಳಿಗಳು ಬೇಸಿಗೆಯಲ್ಲಿ ಕುಡಿಯುವ ನೀರಿನ ಸಮಸ್ಯೆ ಎದುರಿಸುತ್ತಿವೆ. ನೀರಿನ ಬವಣೆ ನೀಗಿಸಲು ಶುದ್ಧ ನೀರನ್ನು ಒದಗಿಸುವುದು ಸಂತಸದ ವಿಚಾರ – ಎ.ಪವನ್‍ಕಲ್ಯಾಣ್ ಮೆಟ್ರಿಕಿ ಗ್ರಾಮದ ನಿವಾಸಿ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.