ADVERTISEMENT

ಇಲ್ಲಗಳ ಪಟ್ಟಣ ಕಾನಹೊಸಹಳ್ಳಿ

​ಪ್ರಜಾವಾಣಿ ವಾರ್ತೆ
Published 13 ಜುಲೈ 2021, 12:51 IST
Last Updated 13 ಜುಲೈ 2021, 12:51 IST
ಸ್ವಲ್ಪ ಮಳೆ ಬಂದರೂ ಕೊಚ್ಚೆಯಾಗುವ ಕಾನಹೊಸಹಳ್ಳಿ ಮುಖ್ಯರಸ್ತೆ
ಸ್ವಲ್ಪ ಮಳೆ ಬಂದರೂ ಕೊಚ್ಚೆಯಾಗುವ ಕಾನಹೊಸಹಳ್ಳಿ ಮುಖ್ಯರಸ್ತೆ   

ಕಾನಹೊಸಹಳ್ಳಿ (ಕೂಡ್ಲಿಗಿ ತಾಲ್ಲೂಕು): ಹೊಸಪೇಟೆ–ಚಿತ್ರದುರ್ಗ ರಾಷ್ಟ್ರೀಯ ಹೆದ್ದಾರಿ 50ಕ್ಕೆ ಹೊಂದಿಕೊಂಡಿರುವ ಕಾನಹೊಸಹಳ್ಳಿ ಅತಿ ವೇಗದಲ್ಲಿ ಬೆಳೆಯುತ್ತಿರುವ ಊರುಗಳಲ್ಲೊಂದು. ಆದರೆ, ಇಲ್ಲಿ ಕನಿಷ್ಠ ಮೂಲಸೌಕರ್ಯಗಳಿಲ್ಲ. ಇದು ಇಲ್ಲಗಳ ಊರು ಎಂಬ ಅಪಖ್ಯಾತಿ ತಂದುಕೊಟ್ಟಿದೆ.

ಪಟ್ಟಣದಲ್ಲಿ ಸಮರ್ಪಕವಾಗಿ ತ್ಯಾಜ್ಯ ವಿಲೇವಾರಿ ಆಗುವುದಿಲ್ಲ. ಸಾರ್ವಜನಿಕರಿಗೆ ಕಸ ಹಾಕಲು ಡಸ್ಟ್‌ ಬೀನ್‌ಗಳಿಲ್ಲ. ಎಲ್ಲೆಂದರಲ್ಲಿ ಕಸ ಚೆಲ್ಲುವುದರಿಂದ ಎಲ್ಲೆಡೆ ತ್ಯಾಜ್ಯ ಹರಡಿಕೊಂಡು ದುರ್ನಾತ ಬೀರುತ್ತದೆ.

ಪಟ್ಟಣದ ಪ್ರಮುಖ ರಸ್ತೆಯ ವಿಸ್ತರಣೆ ಕಾರ್ಯ ಪೂರ್ಣಗೊಂಡಿಲ್ಲ. ಗ್ರಾಮ ಪಂಚಾಯಿತಿ ಹಾಗೂ ಬಸ್‌ ನಿಲ್ದಾಣದ ಮುಂದಿನ ರಸ್ತೆಯೇ ಸರಿ ಇಲ್ಲ. ಸ್ವಲ್ಪ ಮಳೆ ಬಂದರೂ ಇಡೀ ರಸ್ತೆ ಕೊಚ್ಚೆಯಾಗುತ್ತದೆ. ಜನ ಹರಸಾಹಸ ಪಟ್ಟು ಓಡಾಡಬೇಕು. ಸ್ವಲ್ಪ ಎಚ್ಚರ ತಪ್ಪಿದರೂ ಬಿದ್ದು ಗಾಯಗೊಳ್ಳುವುದು ಖಚಿತ.
ಕುಡಿಯುವ ನೀರಿನ ಘಟಕ ಕೆಟ್ಟು ಹೋಗಿ ಮೂರು ವರ್ಷಗಳು ಕಳೆದಿವೆ. ಆದರೆ, ಇದುವರೆಗೆ ಅದನ್ನು ದುರಸ್ತಿಗೊಳಿಸುವ ಗೋಜಿಗೆ ಹೋಗಿಲ್ಲ. ಜನ ಖಾಸಗಿಯವರ ಬಳಿ ಹೆಚ್ಚಿಗೆ ಹಣ ಕೊಟ್ಟು ನೀರು ಕೊಂಡೊಯ್ಯುತ್ತಾರೆ.

ADVERTISEMENT

‘ಪಂಚಾಯಿತಿಯಿಂದ ಕಾಲಕಾಲಕ್ಕೆ ಎಲ್ಲ ರೀತಿಯ ತೆರಿಗೆ ಸಂಗ್ರಹಿಸಲಾಗುತ್ತದೆ. ಆದರೆ, ಮೂಲಸೌಕರ್ಯ ಕಲ್ಪಿಸಲು ಹಿಂದೇಟು ಹಾಕುತ್ತಾರೆ. ಅನೇಕ ಸಲ ಮನವಿ ಕೊಟ್ಟರೂ ಪ್ರಯೋಜನವಾಗಿಲ್ಲ’ ಎಂದು ಸ್ಥಳೀಯ ಯುವಕರಾದ ಖಲೀಮ್, ಗಿರೀಶ್ ಗೋಳು ತೋಡಿಕೊಂಡಿದ್ದಾರೆ.

‘ಹೆದ್ದಾರಿ ನಿರ್ಮಿಸುವಾಗ ಅವೈಜ್ಞಾನಿಕವಾಗಿ ಚರಂಡಿ ನಿರ್ಮಿಸಿದ್ದಾರೆ. ಮಳೆ ಬಂದಾಗ ಮೇಲ್ಸೇತುವೆಯ ಮೇಲಿನಿಂದ ನೀರು ಚರಂಡಿಯೊಳಗೆ ಬಂದು ರಸ್ತೆಗೆ ಬಂದು ನಿಲ್ಲುತ್ತದೆ. ಪ್ರತಿ ವರ್ಷ ಮಳೆಗಾಲದಲ್ಲಿ ಇದರಿಂದ ಸಮಸ್ಯೆ ಸೃಷ್ಟಿಯಾಗುತ್ತದೆ. ಹೀಗಿದ್ದರೂ ಯಾರೊಬ್ಬರೂ ಅದನ್ನು ಬಗೆಹರಿಸುವ ಗೋಜಿಗೆ ಹೋಗಿಲ್ಲ’ ಎಂದು ಚಿತ್ರಣ ಬಿಚ್ಚಿಟ್ಟಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.