ADVERTISEMENT

‘ಜೆಡಿಎಸ್‌ನಲ್ಲಿ ಭಿನ್ನಾಭಿಪ್ರಾಯವಿಲ್ಲ’

29ರಂದು ದೇವೇಗೌಡ, ಸಿದ್ದರಾಮಯ್ಯ ಪ್ರಚಾರ

​ಪ್ರಜಾವಾಣಿ ವಾರ್ತೆ
Published 26 ಅಕ್ಟೋಬರ್ 2018, 14:26 IST
Last Updated 26 ಅಕ್ಟೋಬರ್ 2018, 14:26 IST
ಎನ್‌.ಪ್ರತಾಪ ರೆಡ್ಡಿ
ಎನ್‌.ಪ್ರತಾಪ ರೆಡ್ಡಿ   

ಬಳ್ಳಾರಿ: ‘ಲೋಕಸಭೆ ಉಪಚುನಾವಣೆಯಲ್ಲಿ ಕಾಂಗ್ರೆಸ್‌ ಅಭ್ಯರ್ಥಿ ವಿ.ಎಸ್‌.ಉಗ್ರಪ್ಪ ಪರ ಪ್ರಚಾರ ನಡೆಸುವ ವಿಷಯದಲ್ಲಿ ಜೆಡಿಎಸ್‌ನಲ್ಲಿ ಯಾವುದೇ ಭಿನ್ನಾಭಿಪ್ರಾಯವಿಲ್ಲ’ ಎಂದು ಪಕ್ಷದ ಮುಖಂಡ ಎನ್‌.ಪ್ರತಾಪರೆಡ್ಡಿ ಹೇಳಿದರು.

‘ಜಿಲ್ಲೆಯಲ್ಲಿ ಬಿಜೆಪಿ ಮತ್ತು ಕಾಂಗ್ರೆಸ್ ಪಕ್ಷದ ನಾಯಕರು ಪರಸ್ಪರ ಆರೋಪ, ಪ್ರತ್ಯಾರೋಪದಲ್ಲಿ ತೊಡಗಿದ್ದು, ಜಿಲ್ಲೆಯಲ್ಲಿ ನೆನೆಗುದಿಗೆ ಬಿದ್ದಿರುವ ಯೋಜನೆಗಳ ಬಗ್ಗೆ ಮಾತನಾಡುತ್ತಿಲ್ಲ. ಹಳೇ ವಿಷಯಗಳನ್ನು ಪ್ರಸ್ತಾಪಿಸುವ ಮೂಲಕ ಪರಸ್ಪರ ಕಾಲು ಎಳೆದುಕೊಳ್ಳುವುದು ಸರಿಯಲ್ಲ’ ಎಂದು ನಗರದಲ್ಲಿ ಶುಕ್ರವಾರ ಸುದ್ದಿಗೋಷ್ಠಿಯಲ್ಲಿ ಪ್ರತಿಪಾದಿಸಿದರು.

‘ಕಲ್ಲಿದ್ದಲು ಕೊರತೆಯಿಂದ ಬಿಟಿಪಿಎಸ್ ಬಂದ್ ಆಗುವ ಸಾಧ್ಯತೆಗಳಿವೆ. ಪಕ್ಕದ ತೆಲಂಗಾಣ ರಾಜ್ಯಕ್ಕೆ ಪೂರೈಸುತ್ತಿರುವ ಕಲ್ಲಿದ್ದಲ್ಲನ್ನು ರಾಜ್ಯಕ್ಕೆ ಪೂರೈಸಲು ಏಕೆ ಆಗುತ್ತಿಲ್ಲ. ಸ್ಥಳೀಯ ಮುಖಂಡರು ರಾಜ್ಯ ಮತ್ತು ಕೇಂದ್ರ ಸರ್ಕಾರದ ಮೇಲೆ ಒತ್ತಡ ಹೇರಿ ಕೆಲಸ ಮಾಡಿಸಿಕೊಳ್ಳಬೇಕು’ ಎಂದು ಆಗ್ರಹಿಸಿದರು.

ADVERTISEMENT

‘ಅ.28ರಂದು ಸಚಿವ ಎಚ್.ಡಿ.ರೇವಣ್ಣ ಗ್ರಾಮೀಣ ಭಾಗದ ಕೊರ್ಲಗುಂದಿ, ಚಾನಾಳ್, ಮಹಾನಂದಿ ಕೊಟ್ಟಂನಲ್ಲಿ ಕಾಂಗ್ರೆಸ್ ಅಭ್ಯರ್ಥಿ ಪರ ಪ್ರಚಾರ ನಡೆಸಲಿದ್ದಾರೆ. 29ರಂದು ಜೆಡಿಎಸ್‌ ವರಿಷ್ಠ ಎಚ್‌.ಡಿ.ದೇವೆಗೌಡ, ಸಮನ್ವಯ ಸಮಿತಿ ಅಧ್ಯಕ್ಷ ಸಿದ್ದರಾಮಯ್ಯ, ಲೋಕಸಭೆ ವಿರೋಧ ಪಕ್ಷದ ನಾಯಕ ಮಲ್ಲಿಕಾರ್ಜುನ ಖರ್ಗೆ, ಸಂಸದ ಸಿ.ಎಂ.ಇಬ್ರಾಹಿಂ ಕೂಡ್ಲಿಗಿಯಲ್ಲಿ ಸಾರ್ವಜನಿಕ ಸಭೆ ನಡೆಸಲಿದ್ದಾರೆ. ಅಂದು ಸಂಜೆ ದೇವೆಗೌಡರು ಇಲ್ಲಿನ ಕೌಲ್ ಬಜಾರ್‌ನಲ್ಲಿ ಬಹಿರಂಗ ಸಭೆಯಲ್ಲಿ ಮತ ಯಾಚಿಸಲಿದ್ದಾರೆ. 30ರಂದು ನಗರದಲ್ಲಿ ಪ್ರಚಾರ ನಡೆಸಿ ಶಿವಮೊಗ್ಗಕ್ಕೆ ತೆರಳಲಿದ್ದಾರೆ’ ಎಂದು ಮಾಹಿತಿ ನೀಡಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.