ADVERTISEMENT

ಹೊಸ ಜಿಲ್ಲೆಗಿಲ್ಲ ಹೊಸ ಪಿಯು ಕಾಲೇಜು!

ಮುಖ್ಯಮಂತ್ರಿ ಬೊಮ್ಮಾಯಿ ತವರು ಜಿಲ್ಲೆ ಹಾವೇರಿಗೆ 12 ಕಾಲೇಜು ಮಂಜೂರು

ಶಶಿಕಾಂತ್ ಎಸ್. ಶೆಂಬೆಳ್ಳಿ
Published 27 ಸೆಪ್ಟೆಂಬರ್ 2022, 4:34 IST
Last Updated 27 ಸೆಪ್ಟೆಂಬರ್ 2022, 4:34 IST

ಹೊಸಪೇಟೆ (ವಿಜಯನಗರ): ನೂತನ ಜಿಲ್ಲೆ ವಿಜಯನಗರಕ್ಕೆ ರಾಜ್ಯ ಸರ್ಕಾರ ಈ ವರ್ಷ ಒಂದೇ ಒಂದು ಪಿ.ಯು ಕಾಲೇಜು ಮಂಜೂರು ಮಾಡಿಲ್ಲ.

ಆದರೆ, ಇದೇ ವೇಳೆ ವಿಜಯನಗರಕ್ಕೆ ಹೊಂದಿಕೊಂಡಿರುವ ಹಾವೇರಿ, ಕೊಪ್ಪಳ ಜಿಲ್ಲೆಗೆ ಹೆಚ್ಚಿನ ಕಾಲೇಜುಗಳನ್ನು ಮಂಜೂರು ಮಾಡಲಾಗಿದೆ. ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರ ತವರು ಜಿಲ್ಲೆಗೆ 12 ಕಾಲೇಜುಗಳನ್ನು ಮಂಜೂರು ಮಾಡಲಾಗಿದೆ. ಆದರೆ, ಶೈಕ್ಷಣಿಕವಾಗಿ ಇನ್ನಷ್ಟೇ ಬೆಳವಣಿಗೆ ಹೊಂದಬೇಕಿರುವ ವಿಜಯನಗರಕ್ಕೆ ಒಂದೂ ಕಾಲೇಜು ಕೊಟ್ಟಿಲ್ಲ. ಹೊಸ ಜಿಲ್ಲೆಯ ಬಗ್ಗೆ ಸರ್ಕಾರಕ್ಕಿರುವ ತಾತ್ಸಾರ ಮನೋಭಾವ ಇದು ತೋರಿಸುತ್ತದೆ ಎಂದು ಶಿಕ್ಷಣ ಪ್ರೇಮಿಗಳು ಟೀಕಿಸಿದ್ದಾರೆ.

ವಿಜಯನಗರಕ್ಕೆ ಹೊಂದಿಕೊಂಡಿರುವ ಕೊಪ್ಪಳ ಜಿಲ್ಲೆಗೆ 9, ಬೆಳಗಾವಿಗೆ 7, ದಾವಣಗೆರೆಗೆ 4, ರಾಯಚೂರು, ವಿಜಯಪುರಕ್ಕೆ ತಲಾ ಮೂರು, ಉತ್ತರ ಕನ್ನಡ, ಮೈಸೂರು, ಯಾದಗಿರಿ, ಬಾಗಲಕೋಟೆ, ಕಲಬುರಗಿ ಜಿಲ್ಲೆಗೆ ತಲಾ ಎರಡು ಹಾಗೂ ಚಿತ್ರದುರ್ಗ, ಬೆಂಗಳೂರು ನಗರಕ್ಕೆ ತಲಾ ಒಂದು ಕಾಲೇಜು ಮಂಜೂರು ಮಾಡಲಾಗಿದೆ. ರಾಜ್ಯದ ಒಟ್ಟು 31 ಜಿಲ್ಲೆಗಳಲ್ಲಿ 13 ಜಿಲ್ಲೆಗಳಿಗಷ್ಟೇ ಮಣೆ ಹಾಕಲಾಗಿದೆ.

ADVERTISEMENT

‘ಹಾವೇರಿ ಜಿಲ್ಲೆಯಲ್ಲಿ ಪಿ.ಯು ಕಾಲೇಜುಗಳಿಗೆ ಹೆಚ್ಚಿನ ಬೇಡಿಕೆ ಇದ್ದದ್ದರಿಂದ ಆ ಜಿಲ್ಲೆಗೆ 12 ಕಾಲೇಜು ಮಂಜೂರು ಮಾಡಲಾಗಿದೆ. ಬಹುತೇಕ ಕಾಲೇಜುಗಳನ್ನು ಎಸ್ಸೆಸ್ಸೆಲ್ಸಿ ವರೆಗೆ ಇರುವ ಶಾಲೆಗಳಲ್ಲಿ ಆರಂಭಿಸಲಾಗುವುದು. ಪ್ರಸಕ್ತ ಸಾಲಿನಲ್ಲಿ ಕಾಲೇಜು ಆರಂಭಕ್ಕೆ ಅನುಮತಿ ಕೊಡಲಾಗಿದೆ. ಈ ವರ್ಷ ಕಲಾ ಮತ್ತು ವಾಣಿಜ್ಯ ವಿಭಾಗ ಆರಂಭಿಸಲಾಗುವುದು. ಸಿಬ್ಬಂದಿ ಭರ್ತಿಯಾದ ನಂತರ ವಿಜ್ಞಾನ ವಿಭಾಗ ಕೂಡ ಆರಂಭಿಸಲಾಗುವುದು’ ಎಂದು ಪಿ.ಯು ಶಿಕ್ಷಣ ಇಲಾಖೆಯ ಮೂಲಗಳು ತಿಳಿಸಿವೆ.

‘ಪ್ರಸಕ್ತ ಸಾಲಿಗೆ ಸರ್ಕಾರವೇನೋ ಪಿಯು ಕಾಲೇಜುಗಳನ್ನು ಮಂಜೂರು ಮಾಡಿದೆ. ಆದರೆ, ಈಗಾಗಲೇ ವರ್ಷ ಮುಗಿಯಲು ಬಂದಿದೆ. ಈಗ ತಕ್ಷಣವೇ ಕಾಲೇಜು ಆರಂಭಿಸಲು ಆಗುವುದಿಲ್ಲ. ಮೂಲಸೌಕರ್ಯ, ಸಿಬ್ಬಂದಿ ಭರ್ತಿ ನಂತರವೇ ಕಾಲೇಜು ಆರಂಭಿಸಲು ಸಾಧ್ಯ. ಮುಂದಿನ ಶೈಕ್ಷಣಿಕ ವರ್ಷದಿಂದಲೇ ಕಾಲೇಜು ಆರಂಭಗೊಳ್ಳಬಹುದು’ ಎಂದು ಶಿಕ್ಷಣ ಕ್ಷೇತ್ರದ ತಜ್ಞರು ಅಭಿಪ್ರಾಯ ಪಟ್ಟಿದ್ದಾರೆ.

‘ಎಲ್ಲೆಲ್ಲಿ ಅಗತ್ಯವಿದೆಯೋ ಅಂಥ ಕಡೆಗಳಲ್ಲಿ ಕಾಲೇಜು ಮಂಜೂರು ಮಾಡಬೇಕಿತ್ತು. ವಿಜಯನಗರ ಹೊಸ ಜಿಲ್ಲೆಯಲ್ಲಿ ಮೂಲಸೌಕರ್ಯ ಕಲ್ಪಿಸುವುದರ ಜೊತೆಗೆ ಪಿ.ಯು ಕಾಲೇಜು ಕೂಡ ಸರ್ಕಾರ ಕೊಡಬೇಕಿತ್ತು. ಹೊಸಪೇಟೆಯ ಮುನ್ಸಿಪಲ್‌ ಕಾಲೇಜಿನಲ್ಲಿ ವಿದ್ಯಾರ್ಥಿಗಳ ಸಂಖ್ಯೆ ಸಾಕಷ್ಟು ಹೆಚ್ಚಿದೆ. ಖಾಸಗಿಯಲ್ಲಿ ಬಡವರು ಹೆಚ್ಚಿನ ಡೊನೇಶನ್‌ ಕೊಟ್ಟು ಓದಲು ಸಾಧ್ಯವಾಗುವುದಿಲ್ಲ. ಇದನ್ನೆಲ್ಲ ಗಮನದಲ್ಲಿಟ್ಟುಕೊಂಡು ವಿಜಯನಗರಕ್ಕೂ ಹೊಸ ಕಾಲೇಜು ಕೊಡಬೇಕಿತ್ತು’ ಎಂದು ‘ಆಲ್‌ ಇಂಡಿಯಾ ಡೆಮೊಕ್ರಟಿಕ್‌ ಸ್ಟುಡೆಂಟ್‌ ಆರ್ಗನೈಜೇಶನ್‌ (ಎಐಡಿಎಸ್‌ಒ) ಉಪಾಧ್ಯಕ್ಷ ಡಾ. ಪ್ರಮೋದ್ ನಿಟ್ಟೂರು ಅಭಿಪ್ರಾಯ ಪಟ್ಟರು.

ಈ ಸಂಬಂಧ ಡಿಡಿಪಿಯು ಅವರನ್ನು ಸಂಪರ್ಕಿಸಿದಾಗ ಅವರು ಮಾಹಿತಿಗೆ ಲಭ್ಯರಾಗಲಿಲ್ಲ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.