ADVERTISEMENT

ಕತ್ತಲಲ್ಲಿ ನೂರು ಹಾಸಿಗೆ ಸರ್ಕಾರಿ ಆಸ್ಪತ್ರೆ

ಪದೇ ಪದೇ ವಿದ್ಯುತ್‌ ಕಡಿತ; ಹಾಳಾಗಿರುವ ಜನರೇಟರ್‌; ರೋಗಿಗಳ ಪರದಾಟ

ಶಶಿಕಾಂತ್ ಎಸ್. ಶೆಂಬೆಳ್ಳಿ
Published 11 ಫೆಬ್ರುವರಿ 2019, 20:00 IST
Last Updated 11 ಫೆಬ್ರುವರಿ 2019, 20:00 IST
ಹೊಸಪೇಟೆಯ ನೂರು ಹಾಸಿಗೆ ಸರ್ಕಾರಿ ಆಸ್ಪತ್ರೆಯ ರೋಗಿಗಳ ಕೊಠಡಿಯಲ್ಲಿ ಕತ್ತಲು ಆವರಿಸಿಕೊಂಡಿರುವುದು–ಪ್ರಜಾವಾಣಿ ಚಿತ್ರ
ಹೊಸಪೇಟೆಯ ನೂರು ಹಾಸಿಗೆ ಸರ್ಕಾರಿ ಆಸ್ಪತ್ರೆಯ ರೋಗಿಗಳ ಕೊಠಡಿಯಲ್ಲಿ ಕತ್ತಲು ಆವರಿಸಿಕೊಂಡಿರುವುದು–ಪ್ರಜಾವಾಣಿ ಚಿತ್ರ   

ಹೊಸಪೇಟೆ: ನಗರದ ನೂರು ಹಾಸಿಗೆ ಸರ್ಕಾರಿ ಆಸ್ಪತ್ರೆ ನಾಲ್ಕು ದಿನಗಳಿಂದ ಸಂಪೂರ್ಣವಾಗಿ ಅಂಧಕಾರದಲ್ಲಿ ಮುಳುಗಿದ್ದು, ರೋಗಿಗಳು ಪರದಾಟ ನಡೆಸುವಂತಾಗಿದೆ.

ಬೇಸಿಗೆ ಆರಂಭವಾದ ದಿನದಿಂದಲೂ ಬೇಕಾಬಿಟ್ಟಿ ವಿದ್ಯುತ್‌ ಕಡಿತಗೊಳಿಸಲಾಗುತ್ತಿದೆ. ಇಂತಹ ಸಂದರ್ಭಗಳಲ್ಲಿ ಜನರೇಟರ್‌ ಮೂಲಕ ಇಡೀ ಆಸ್ಪತ್ರೆಗೆ ವಿದ್ಯುತ್‌ ಪೂರೈಸಲಾಗುತ್ತದೆ. ಆದರೆ, ಜನರೇಟರ್‌ ಕೆಟ್ಟು ಹೋಗಿ ಹಲವು ದಿನಗಳು ಕಳೆದರೂ ಅದನ್ನು ದುರಸ್ತಿಗೊಳಿಸಿಲ್ಲ. ಹೀಗಾಗಿ ಆಸ್ಪತ್ರೆ ಅಕ್ಷರಶಃ ಕತ್ತಲಲ್ಲಿ ಮುಳುಗಿದೆ.

ರಾತ್ರಿ ವೇಳೆ ವಿದ್ಯುತ್‌ ಕೈಕೊಟ್ಟಾಗ ಟಾರ್ಚ್‌ ಹಾಗೂ ಮೇಣದ ದೀಪದ ಬೆಳಕಿನ ಸಹಾಯದಿಂದ ರೋಗಿಗಳಿಗೆ ವೈದ್ಯರು, ನರ್ಸ್‌ಗಳು ಚಿಕಿತ್ಸೆ ನೀಡಬೇಕಾದ ಪರಿಸ್ಥಿತಿ ಸೃಷ್ಟಿಯಾಗಿದೆ. ಡಯಾಲಿಸಿಸ್‌ ಕೇಂದ್ರ, ಗರ್ಭಿಣಿಯರ ವಿಭಾಗ, ತುರ್ತು ಚಿಕಿತ್ಸಾ ವಿಭಾಗ, ಸಾಮಾನ್ಯ ವಾರ್ಡ್‌ಗಳಲ್ಲಿ ವಿದ್ಯುತ್‌ ಕೈಕೊಟ್ಟಾಗ ಅಲ್ಲಿರುವವರು ನರಕ ಯಾತನೆ ಅನುಭವಿಸುವಂತಾಗಿದೆ.

ADVERTISEMENT

ಗರ್ಭಿಣಿಯರು, ಆಗತಾನೆ ಜನಿಸಿರುವ ಕಂದಮ್ಮಗಳು, ಗಾಯಗೊಂಡು ಚಿಕಿತ್ಸೆ ಪಡೆದುಕೊಳ್ಳುತ್ತಿರುವವರು ಶಕೆಯಿಂದ ವಿಲವಿಲ ಒದ್ದಾಡುವ ಪರಿಸ್ಥಿತಿ ಸೃಷ್ಟಿಯಾಗಿದೆ. ಅಧಿಕಾರಿಗಳ ಬೇಜವಾಬ್ದಾರಿತನಕ್ಕೆ ರೋಗಿಗಳು, ಅವರ ಸಂಬಂಧಿಕರು ತೀವ್ರ ಆಕ್ರೋಷ ವ್ಯಕ್ತಪಡಿಸಿದ್ದಾರೆ.

‘ಐದಾರೂ ದಿನಗಳಿಂದ ಆಸ್ಪತ್ರೆಯಲ್ಲಿ ಚಿಕಿತ್ಸೆಗೆ ದಾಖಲಾಗಿದ್ದೇನೆ. ಆದರೆ, ನಾಲ್ಕು ದಿನಗಳಿಂದ ಪದೇ ಪದೇ ವಿದ್ಯುತ್‌ ಕೈಕೊಡುತ್ತಿದೆ. ಜನರೇಟರ್‌ ಹಾಳಾಗಿರುವ ಕಾರಣ ವಿದ್ಯುತ್‌ ಪೂರೈಕೆ ಇಲ್ಲ. ಬೆಳಕು ಇರುವುದಿಲ್ಲ. ಫ್ಯಾನ್‌ಗಳು ತಿರುಗುವುದಿಲ್ಲ. ಇದರಿಂದಾಗಿ ಆಸ್ಪತ್ರೆಯಲ್ಲಿ ಇರಲು ಆಗುತ್ತಿಲ್ಲ. ಮನೆಗೂ ಹೋಗಲು ಆಗುತ್ತಿಲ್ಲ. ಈ ಕುರಿತು ಆಸ್ಪತ್ರೆ ಸಿಬ್ಬಂದಿಗೆ ತಿಳಿಸಿದರೆ ಯಾವುದೇ ಪ್ರಯೋಜನವಾಗಿಲ್ಲ’ ಎಂದು ಹೆಸರು ಹೇಳಲಿಚ್ಛಿಸದ ರೋಗಿಯೊಬ್ಬರು ‘ಪ್ರಜಾವಾಣಿ’ಗೆ ತಿಳಿಸಿದರು.

‘ಡಯಾಲಿಸಿಸ್, ಸ್ಕ್ಯಾನಿಂಗ್‌ ಸೆಂಟರ್‌ನಲ್ಲಿ 24 ಗಂಟೆ ವಿದ್ಯುತ್‌ ಪೂರೈಕೆ ಇರಬೇಕು. ಆದರೆ, ವಿದ್ಯುತ್‌ ಪೂರೈಕೆ ಇರದ ಕಾರಣ ಸ್ಕ್ಯಾನಿಂಗ್‌, ಡಯಾಲಿಸಿಸ್‌ಗೆ ರೋಗಿಗಳು ತಡಹೊತ್ತು ಕಾಯಬೇಕಾಗಿದೆ. ಶಸ್ತ್ರ ಚಿಕಿತ್ಸೆ ಸಂದರ್ಭದಲ್ಲಿ ವಿದ್ಯುತ್‌ ಕೈಕೊಟ್ಟರೆ ರೋಗಿ ಸಾಯಬಹುದು. ಇದು ಬಹಳ ಗಂಭೀರವಾದ ವಿಚಾರ. ಆದರೆ, ಆಸ್ಪತ್ರೆ ಅಧಿಕಾರಿಗಳಿಗೆ ಇದೇಕೇ ಗೊತ್ತಾಗುತ್ತಿಲ್ಲ’ ಎಂದು ಇನ್ನೊಬ್ಬರು ಪ್ರಶ್ನಿಸಿದರು.

‘ಇದು ಉಪವಿಭಾಗ ಮಟ್ಟದ ಆಸ್ಪತ್ರೆ. ಸುತ್ತಲಿನ ನಾಲ್ಕು ತಾಲ್ಲೂಕುಗಳ ಜನ ಇಲ್ಲಿಗೆ ಚಿಕಿತ್ಸೆಗೆ ಬರುತ್ತಾರೆ. ನಿತ್ಯ ಜನಜಾತ್ರೆ ಇರುತ್ತದೆ. ಹೀಗಿರುವಾಗ ವಿದ್ಯುತ್‌ ಪೂರೈಕೆ ಇಲ್ಲದಿದ್ದರೆ ಹೇಗೆ? ತಡರಾತ್ರಿ ಎಲ್ಲಾದರೂ ಅಪಘಾತ ಸಂಭವಿಸಿ ಅನೇಕ ಜನ ಒಮ್ಮೆಗೆ ಬಂದರೆ, ಜನರೇಟರ್‌ ಸುಟ್ಟು ಹೋಗಿ ವಿದ್ಯುತ್‌ ಪೂರೈಕೆ ಇಲ್ಲ ಎಂದು ಹೇಳಿ ಕಳುಹಿಸಲು ಆಗುತ್ತದೆಯೇ? ಅಧಿಕಾರಿಗಳು ಕೂಡಲೇ ಎಚ್ಚೆತ್ತುಕೊಂಡು ಕ್ರಮ ಜರುಗಿಸಬೇಕು’ ಎಂದು ಸಾಮಾಜಿಕ ಕಾರ್ಯಕರ್ತ ಹುಲುಗಪ್ಪ ಆಗ್ರಹಿಸಿದರು.

ಈ ಕುರಿತು ಆಸ್ಪತ್ರೆಯ ಆಡಳಿತಾಧಿಕಾರಿ ಡಾ. ಭಾಗೀರಥಿ ಅವರನ್ನು ಸಂಪರ್ಕಿಸಿದಾಗ, ‘ಬೇಸಿಗೆ ಆರಂಭವಾದ ದಿನದಿಂದ ಬೇಕಾಬಿಟ್ಟಿ ವಿದ್ಯುತ್‌ ಕಡಿತಗೊಳಿಸಲಾಗುತ್ತಿದೆ. ಇದರಿಂದಾಗಿ ಜನರೇಟರ್‌ ಮೇಲೆ ಹೆಚ್ಚಿನ ಒತ್ತಡ ಉಂಟಾಗಿ, ಸುಟ್ಟು ಹೋಗಿತ್ತು. ದುರಸ್ತಿಗೆ ತಡವಾಗಿದ್ದರಿಂದ ಸಮಸ್ಯೆಯಾಗಿತ್ತು. ಸರಿಪಡಿಸಲು ಕ್ರಮ ಕೈಗೊಳ್ಳಲಾಗಿದೆ’ ಎಂದು ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.