ADVERTISEMENT

ದಾರಿ ಯಾವುದಯ್ಯ ಹುಗಲೂರಿಗೆ?

ದುರಸ್ತಿ ಕಾಣದ ಗ್ರಾಮೀಣ ರಸ್ತೆ; ವಾಹನ ಸವಾರರ ಪೀಕಲಾಟ

ಕೆ.ಸೋಮಶೇಖರ
Published 24 ಸೆಪ್ಟೆಂಬರ್ 2021, 14:23 IST
Last Updated 24 ಸೆಪ್ಟೆಂಬರ್ 2021, 14:23 IST
ಹೂವಿನಹಡಗಲಿ ತಾಲ್ಲೂಕು ಹುಗಲೂರು ರಸ್ತೆ ಕೆಸರಿನ ಗದ್ದೆಯಾಗಿದೆ
ಹೂವಿನಹಡಗಲಿ ತಾಲ್ಲೂಕು ಹುಗಲೂರು ರಸ್ತೆ ಕೆಸರಿನ ಗದ್ದೆಯಾಗಿದೆ   

ಹೂವಿನಹಡಗಲಿ: ತಾಲ್ಲೂಕಿನ ಹುಗಲೂರು ಗ್ರಾಮದ ಸಂಪರ್ಕ ರಸ್ತೆ ತೀರಾ ಹದಗೆಟ್ಟಿದೆ.

ಮಳೆಗಾಲದಲ್ಲಿ ರಸ್ತೆ ರಾಡಿಮಯವಾಗುವುದರಿಂದ ಈ ಮಾರ್ಗದಲ್ಲಿ ಸಂಚರಿಸುವ ವಾಹನ ಸವಾರರು ಜೀವ ಕೈಯಲ್ಲಿ ಹಿಡಿದು ಪ್ರಯಾಣಿಸಬೇಕಿದೆ.

ಹೂವಿನಹಡಗಲಿ-ಸೋಗಿ ಮುಖ್ಯ ರಸ್ತೆಯ ಕ್ರಾಸ್ ನಿಂದ ಹುಗಲೂರು ಸಂಪರ್ಕಿಸುವ 3 ಕಿ.ಮೀ. ಉದ್ದದ ಗ್ರಾಮೀಣ ರಸ್ತೆ ಪಂಚಾಯತ್ ರಾಜ್ ಎಂಜಿನಿಯರಿಂಗ್ ಇಲಾಖೆಗೆ ಸೇರಿದೆ. ಬಹು ವರ್ಷಗಳಿಂದ ಈ ರಸ್ತೆ ದುರಸ್ತಿಯನ್ನೇ ಕಂಡಿಲ್ಲ. ರಸ್ತೆಯಲ್ಲಿ ಸಾಕಷ್ಟು ತಗ್ಗು, ಗುಂಡಿಗಳಿದ್ದು ಮಳೆಯ ನೀರು ರಸ್ತೆಯಲ್ಲೇ ನಿಂತು ಅವಾಂತರ ಸೃಷ್ಟಿಯಾಗಿದೆ.

ADVERTISEMENT

ಮಳೆಗಾಲದಲ್ಲಿ ರಸ್ತೆ ಕೆಸರಿನ ಗದ್ದೆಯಾಗಿ ಮಾರ್ಪಡುತ್ತದೆ. ಕೆಸರಿನಲ್ಲಿ ದ್ವಿಚಕ್ರ ವಾಹನಗಳು ನಿಯಂತ್ರಣ ಸಿಗದೇ ಸಾಕಷ್ಟು ಜನರು ಬಿದ್ದು ಗಾಯ ಮಾಡಿಕೊಂಡಿದ್ದಾರೆ. ಈ ಹಿಂದೆ ಬಸ್ಸುಗಳು ಸಹ ನಿಯಂತ್ರಣ ತಪ್ಪಿ ಪಕ್ಕದ ಕಂದಕಕ್ಕೆ ಇಳಿದ ಉದಾಹರಣೆ ಇವೆ. ಹೀಗಾಗಿ ಗ್ರಾಮದ ಜನರು ಮಳೆಗಾಲದಲ್ಲಿ ಬಸ್ ಹತ್ತಲು ಹಿಂದೇಟು ಹಾಕುತ್ತಾರೆ ಎನ್ನುತ್ತಾರೆ ಗ್ರಾಮಸ್ಥರು.

ರಸ್ತೆ ತೀರಾ ಹದಗೆಟ್ಟಿದ್ದರಿಂದ ಸಾರಿಗೆ ಡಿಪೋದವರು ಕೆಲವು ತಿಂಗಳು ಬಸ್ ಮಾರ್ಗಗಳನ್ನೇ ಸ್ಥಗಿತಗೊಳಿಸಿದ್ದರು. ಶಾಲಾ, ಕಾಲೇಜು ವಿದ್ಯಾರ್ಥಿಗಳ ಹಿತದೃಷ್ಟಿಯಿಂದ ಗ್ರಾಮಸ್ಥರ ಮನವಿ ಮೇರೆಗೆ ಈಗ ಮತ್ತೆ ಬಸ್ ಗಳು ಓಡಾಡುತ್ತಿವೆ.

ಈ ಮಾರ್ಗದಲ್ಲಿ ಮೂರ್ನಾಲ್ಕು ಕಿರು ಸೇತುವೆಗಳಿದ್ದು, ಮಳೆ ಹೆಚ್ಚಾದರೆ ರಸ್ತೆ ಸಂಪರ್ಕ ಕಡಿದುಕೊಳ್ಳುತ್ತದೆ. ಪಟ್ಟಣಕ್ಕೆ ಬಂದು ಹೋಗುವವರು ಸೋಗಿ ಇಲ್ಲವೇ ದೇವಗೊಂಡನಹಳ್ಳಿ ಮಾರ್ಗವಾಗಿ ಸುತ್ತುವರಿದು ಊರು ತಲುಪುವ ಅನಿವಾರ್ಯತೆ ಎದುರಾಗುತ್ತದೆ.

ರಸ್ತೆ ಅಭಿವೃದ್ಧಿಪಡಿಸುವಂತೆ ಸಂಬಂಧಿಸಿದ ಇಲಾಖೆ ಅಧಿಕಾರಿಗಳು ಹಾಗೂ ಜನಪ್ರತಿನಿಧಿಗಳಿಗೆ ಹಲವು ಬಾರಿ ಮನವಿ ಮಾಡಿದರೂ ಪ್ರಯೋಜನವಾಗಿಲ್ಲ ಎಂದು ಗ್ರಾಮಸ್ಥರು ದೂರಿದ್ದಾರೆ.

ತಾಲ್ಲೂಕಿನ ಬಹುತೇಕ ರಸ್ತೆಗಳು ಇತ್ತೀಚಿನ ವರ್ಷಗಳಲ್ಲಿ ಅಭಿವೃದ್ಧಿಯಾಗಿವೆ. ಬಹುಕಾಲ ದುರಸ್ತಿ ಕಾಣದ ರಾಜ್ಯ ಹೆದ್ದಾರಿ, ಜಿಲ್ಲಾ ಮುಖ್ಯ ರಸ್ತೆಗಳು ರಿಪೇರಿಯಾಗಿ ಸಂಚಾರ ವ್ಯವಸ್ಥೆ ಸುಧಾರಣೆ ಕಂಡಿದೆ.

ಇದರಿಂದಾಗಿಯೇ ಕ್ಷೇತ್ರದ ಶಾಸಕ ಪಿ.ಟಿ.ಪರಮೇಶ್ವರನಾಯ್ಕ ಅವರಿಗೆ ಅಭಿಮಾನಿಗಳು ‘ರಸ್ತೆ ರಾಜ’ ಬಿರುದು ನೀಡಿದ್ದಾರೆ. ಆದರೆ ಹುಗಲೂರು ರಸ್ತೆಯ ದುಸ್ಥಿತಿ ಅಭಿಮಾನಿಗಳ ಬಿರುದನ್ನೇ ಅಣಕಿಸುವಂತಿದೆ ಎಂದು ಗ್ರಾಮಸ್ಥರು ಬೇಸರ ವ್ಯಕ್ತಪಡಿಸುತ್ತಾರೆ.

ಮೂಲೆಕಟ್ಟಿನ ಊರುಗಳ ರಸ್ತೆಗಳನ್ನು ನಿರ್ಲಕ್ಷ್ಯ ಮಾಡದೇ ಕೂಡಲೇ ದುರಸ್ತಿಗೆ ಕ್ರಮ ಕೈಗೊಳ್ಳಬೇಕು. ಜನಪ್ರತಿನಿಧಿಗಳು, ಅಧಿಕಾರಿಗಳು ಹುಗಲೂರು ರಸ್ತೆ ಸಮಸ್ಯೆಗೆ ಸ್ಪಂದಿಸದಿದ್ದಲ್ಲಿ ಪ್ರತಿಭಟನೆ ನಡೆಸಬೇಕಾಗುತ್ತದೆ ಎಂದು ಗ್ರಾಮಸ್ಥರು ಎಚ್ಚರಿಸಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.