ADVERTISEMENT

ಹಂಪಿಯಲ್ಲಿ ಮಾಂಸದೂಟದ ಘಮಲು!

ಬ್ರಹ್ಮರಥೋತ್ಸವದ ಬಳಿಕ ಕೇರಿ ಜನರಿಂದ ಹೋಳಿಗೆ ಜತೆ ಮಾಂಸಾಹಾರ

ಶಶಿಕಾಂತ್ ಎಸ್. ಶೆಂಬೆಳ್ಳಿ
Published 20 ಏಪ್ರಿಲ್ 2019, 20:00 IST
Last Updated 20 ಏಪ್ರಿಲ್ 2019, 20:00 IST
ಹಂಪಿಯ ಸಾಲುಮಂಟಪಗಳಲ್ಲಿ ಹೋಳಿಗೆ ಜತೆಗೆ ಮಾಂಸಾಹಾರ ಸಿದ್ಧಪಡಿಸುತ್ತಿರುವ ಮಹಿಳೆಯರು
ಹಂಪಿಯ ಸಾಲುಮಂಟಪಗಳಲ್ಲಿ ಹೋಳಿಗೆ ಜತೆಗೆ ಮಾಂಸಾಹಾರ ಸಿದ್ಧಪಡಿಸುತ್ತಿರುವ ಮಹಿಳೆಯರು   

ಹೊಸಪೇಟೆ: ಒಂದು ಒಲೆಯಲ್ಲಿ ಬಿಸಿ ಬಿಸಿ ಹೋಳಿಗೆ ಸಿದ್ಧವಾಗುತ್ತಿದ್ದರೆ, ಅದಕ್ಕೆ ಹೊಂದಿಕೊಂಡಿದ್ದ ಮತ್ತೊಂದು ಒಲೆಯಲ್ಲಿ ಮಾಂಸದೂಟ ಸಿದ್ಧವಾಗುತ್ತಿತ್ತು. ಎಲ್ಲೆಡೆ ಅದರ ಘಮಲು ಹರಡಿತ್ತು. ಪ್ರಸಾದ ಸೇವನೆಗೆ ಮನೆ ಮಂದಿಯೆಲ್ಲ ಕಾತುರರಾಗಿ ಕುಳಿತಿದ್ದರು.

ತಾಲ್ಲೂಕಿನ ಹಂಪಿ ರಥಬೀದಿಯ ಸಾಲು ಮಂಟಪ ಹಾಗೂ ಅದರ ಪರಿಸರದಲ್ಲಿ ಶನಿವಾರ ಕಂಡು ಬಂದ ದೃಶ್ಯಗಳಿವು. ಎಲ್ಲ ಮಂಟಪಗಳು ನಗರ ಹಾಗೂ ಕಮಲಾಪುರದ ಏಳು ಕೇರಿಯ ಜನರಿಂದ ಭರ್ತಿಯಾಗಿದ್ದವು. ಒಂದೊಂದು ಮಂಟಪದಲ್ಲಿ ಒಂದೊಂದು ಕುಟುಂಬದವರು ಆಕ್ರಮಿಸಿಕೊಂಡಿದ್ದರು. ಎರಡು ದಿನಗಳಿಂದ ಅಲ್ಲಿಯೇ ವಾಸ್ತವ್ಯ ಹೂಡಿರುವ ಅವರು ಸ್ವತಃ ಅವರೇ ಆಹಾರ ತಯಾರಿಸಿ ಸೇವಿಸುವುದು ವಿಶೇಷ.

ವಿರೂಪಾಕ್ಷೇಶ್ವರ ಸ್ವಾಮಿ ಹಾಗೂ ಚಂದ್ರಮೌಳೇಶ್ವರ ಸ್ವಾಮಿ ರಥೋತ್ಸವ ಮುಗಿದ ನಂತರವಷ್ಟೇ ಮಾಂಸಾಹಾರ ಸಿದ್ಧಪಡಿಸುವುದು ವಿಶೇಷ. ನಂತರ ದೇವರಿಗೆ ನೈವೇದ್ಯ ಸಮರ್ಪಿಸಿ, ಮನೆ ಮಂದಿಯೆಲ್ಲ ಸೇರಿಕೊಂಡು ಪ್ರಸಾದ ಸ್ವೀಕರಿಸುತ್ತಾರೆ.

ADVERTISEMENT

ಹಂಪಿಯಲ್ಲಿ ಮಾಂಸಾಹಾರ ತಯಾರಿಕೆ, ಊಟ ಮಾಡುವುದರ ಮೇಲೆ ನಿಷೇಧವಿದೆ. ಆದರೆ, ಪ್ರತಿ ವರ್ಷ ನಡೆಯುವ ರಥೋತ್ಸವದ ನಂತರ ಮಾಂಸಾಹಾರ ತಯಾರಿಸಿ, ಅದನ್ನು ಸೇವಿಸುವುದರ ಮೇಲೆ ಯಾವುದೇ ನಿರ್ಬಂಧವಿಲ್ಲ. ಅಂದಹಾಗೆ, ಇದುನಿನ್ನೆ, ಮೊನ್ನೆ ಆರಂಭವಾದ ಆಚರಣೆಯಲ್ಲ. ಅದರ ಇತಿಹಾಸ ಕೆದಕುತ್ತ ಹೋದರೆ ವಿಜಯನಗರ ಕಾಲಕ್ಕೆ ಕೊಂಡೊಯ್ಯುತ್ತದೆ.

‘ವಿಜಯನಗರ ಅರಸರ ಕಾಲದಲ್ಲಿ ಮ್ಯಾಸಕೇರಿ ಬೇಡ ನಾಯಕರು ತೇರು ಎಳೆಯುತ್ತಿದ್ದರು. ನಂತರ ಮಾಂಸಾಹಾರ ತಯಾರಿಸಿ, ಊಟ ಮಾಡುತ್ತಿದ್ದರು. ಆ ಪರಂಪರೆ ಇತ್ತೀಚಿನ ಕೆಲ ವರ್ಷಗಳ ಹಿಂದಿನ ವರೆಗೆ ಮುಂದುವರೆದುಕೊಂಡು ಬಂದಿತ್ತು. ಜನ ಹಂಪಿಯಲ್ಲಿಯೇ ಕುರಿ, ಕೋಳಿ ಕಡಿಯುತ್ತಿದ್ದರು.ಆದರೆ, ಅಲ್ಲಿ ಯಾವಾಗ ಮಾಂಸಾಹಾರದ ಮೇಲೆ ನಿಷೇಧ ಹೇರಲಾಯಿತೋ ಅಂದಿನಿಂದ ಕುರಿ, ಕೋಳಿ ಕಡಿಯುವುದಿಲ್ಲ. ಬದಲಾಗಿ ನಗರದಿಂದ ಮಾಂಸ ತರಿಸಿಕೊಂಡು, ಹಂಪಿಯಲ್ಲಿ ಸಿದ್ಧಪಡಿಸಿ ಬಳಿಕ ಸೇವಿಸುತ್ತಾರೆ’ ಎಂದು ನಾಯಕ ಸಮುದಾಯದ ಕಣಿಮೆಪ್ಪ ಎಂಬುವರು ತಿಳಿಸಿದರು.

ಕಣಿಮೆಪ್ಪ ಅವರಿಗೆ ಈಗ 70 ವರ್ಷ. ಅವರು ಐದು ವರ್ಷದ ಬಾಲಕನಿದ್ದಾಗ ಇಲ್ಲಿಗೆ ಬರಲು ಆರಂಭಿಸಿದರು. ಅಂದಿನಿಂದ ಇಂದಿನವರೆಗೆ ಪ್ರತಿ ವರ್ಷ ತಪ್ಪದೇ ಕುಟುಂಬ ಸದಸ್ಯರೊಂದಿಗೆ ಬರುತ್ತಾರೆ.

‘ಬೇಡರ ಕಣ್ಣಪ್ಪ ದೊಡ್ಡ ಶಿವಭಕ್ತ. ಮೊಲ, ಜಿಂಕೆಯ ಮಾಂಸವನ್ನು ದೇವರಿಗೆ ನೈವೇದ್ಯವಾಗಿ ಸಮರ್ಪಿಸುತ್ತಿದ್ದ ಎನ್ನುವುದಕ್ಕೆ ಅನೇಕ ನಿದರ್ಶನಗಳು ಸಿಗುತ್ತವೆ. ಆ ಪರಂಪರೆ ಬೇಡ ನಾಯಕ ಸಮುದಾಯದಲ್ಲಿ ಇದೆ. ಪ್ರಾಣಿಗಳನ್ನು ಬೇಟೆಯಾಡುವುದರ ಮೇಲೆ ನಿರ್ಬಂಧ ಹೇರಿರುವುದರಿಂದ ಈಗ ಕುರಿ, ಕೋಳಿ ಮಾಂಸವನ್ನು ನೈವೇದ್ಯವನ್ನು ಸಮರ್ಪಿಸಲಾಗುತ್ತದೆ’ ಎಂದು ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.