ಬಳ್ಳಾರಿ: ‘ಹೊಸಪೇಟೆಯಲ್ಲಿ ಮಂಗಳವಾರ ರಾಜ್ಯ ಸರ್ಕಾರ ಹಮ್ಮಿಕೊಂಡಿರುವುದು ಸಾಧನಾ ಸಮಾವೇಶವಲ್ಲ ಶಾಪದ, ಶೂನ್ಯದ, ಭ್ರಷ್ಟಾಚಾರದ ಸಮಾವೇಶ’ ಎಂದು ಬಿಜೆಪಿ ಕಿಡಿಕಾರಿದೆ.
ಸೋಮವಾರ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಬಿಜೆಪಿ ಜಿಲ್ಲಾ ನಾಯಕರು, ಸಮಾವೇಶದ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು.
ಮಾಜಿ ಶಾಸಕ ಸೋಮಶೇಖರ ರೆಡ್ಡಿ ಮಾತನಾಡಿ, ‘ಅಭಿವೃದ್ಧಿ ಶೂನ್ಯದ ಸಮಾವೇಶವಿದು. ಸರ್ಕಾರದ ಹಣವೆಲ್ಲ ಉಚಿತ ಯೋಜನೆಗಳಿಗೆ ಹೋಗುತ್ತಿವೆ. ಎಸ್‌ಸಿ–ಎಸ್‌ಟಿ ಹಣ ದುರ್ಬಳಕೆಯಾಗುತ್ತಿದೆ. ಬಿಜೆಪಿ ವಿರುದ್ಧ 40 ಪರ್ಸೆಂಟ್ ಆರೋಪ ಮಾಡಿದ ಕಾಂಗ್ರೆಸ್ ನಾಯಕರು ಇಂದು 60 ಪರ್ಸೆಂಟ್ ಪಡೆಯುತ್ತಿರುವ ಆರೋಪಿವಿದೆ. ಕೇಂದ್ರ ಅನುದಾನವನ್ನು ಉಚಿತ ಯೋಜನೆಗಳಿಗೆ ಬಳಸಲಾಗುತ್ತಿದೆ’ ಎಂದರು.
‘ನಿತ್ಯದ ವಸ್ತುಗಳ ಬೆಲೆ ಏರಿದೆ. ಹೀಗಾಗಿ ಇದು ದುಬಾರಿ ಸಮಾವೇಶ. ತುಂಗಭದ್ರಾ ಜಲಾಶಯಕ್ಕೆ ಒಂದು ಗೇಟ್ ಅಳವಡಿಸಲು ಈ ಸರ್ಕಾರಕ್ಕೆ ಸಾಧ್ಯವಾಗಿಲ್ಲ. ಅಭಿವೃದ್ಧಿ ಮರೆತ ಸರ್ಕಾರ ಶೂನ್ಯ ಸಮಾವೇಶ ಮಾಡುತ್ತಿದೆ’ ಎಂದು ಮೂದಲಿಸಿದರು.
‘ಉಸ್ತುವಾರಿ ಸಚಿವ ಜಮೀರ್ ಅಹಮದ್ ಖಾನ್ ಬಳ್ಳಾರಿಗೆ ಬಂದೇ ಇಲ್ಲ. ಅವರನ್ನು ಹುಡುಕಿ ಕೊಡಿ ಎಂದು ಹೋರಾಡಲಿದ್ದೇವೆ. ಎಫ್‌ಐಆರ್ ಮಾಡಿಸುತ್ತೇವೆ. ಬಳ್ಳಾರಿ ನಗರ ಶಾಸಕರು ಭ್ರಷ್ಟಾಚಾರ ಮುಕ್ತ ಆಡಳಿತ ಮಾಡುವುದಾಗಿ ಹೇಳಿದ್ದರು. ಆದರೆ, ಕ್ಷೇತ್ರದಲ್ಲಿ ಭ್ರಷ್ಟಾಚಾರ ತಾಂಡವವಾಡುತ್ತಿದೆ. ಮರಳು ದಂಧೆ ನಡೆಯುತ್ತಿದೆ. ಪೊಲೀಸ್, ಆರ್‌ಟಿಒಗಳಲ್ಲಿ ಹಣವಿಲ್ಲದೇ ಏನೂ ನಡೆಯುತ್ತಿಲ್ಲ’ ಎಂದರು.
‘ಸಿಂಧೂರ ಕಾರ್ಯಚಾರಣೆ ಯಶಸ್ವಿಯಾಗಿದ್ದರೂ, ಅದಕ್ಕೆ ಸಾಕ್ಷಿ ಕೇಳುವ ಮನಸ್ಥಿತಿ ಕಾಂಗ್ರೆಸ್ಸಿಗರದ್ದು. ಭಾರತದಿಂದಲೇ ಕಾಂಗ್ರೆಸ್ ತೊಲಗಬೇಕು. ರಾಜ್ಯದಲ್ಲಿರುವ ಸರ್ಕಾರ ಎಷ್ಟು ಬೇಗ ಹೋದರೆ ಅಷ್ಟು ಒಳ್ಳೆಯದ್ದು. ಅವರ ನಡುವೆಯೇ ಭಿನ್ನಾಭಿಪ್ರಾಯಗಳು ಮನೆ ಮಾಡಿವೆ’ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಜಿಲ್ಲಾ ಬಿಜೆಪಿ ಘಟಕದ ಅಧ್ಯಕ್ಷ ಅನಿಲ್ ಕುಮಾರ್ ಮಾತನಾಡಿ, ‘ಯಾವ ಪುರುಷಾರ್ಥಕ್ಕಾಗಿ ಸರ್ಕಾರ ಸಮಾವೇಶ ಮಾಡುತ್ತಿದೆ. ಕಾಂಗ್ರೆಸ್ ಶಾಸಕರಿಗೇ ಅನುದಾನವಿಲ್ಲ. ವಾಲ್ಮೀಕಿ ನಿಗಮದಲ್ಲಿ ಹಗರಣ ನಡೆಸಿದ ಶಾಸಕರನ್ನೇ ಪಕ್ಕದಲ್ಲಿ ಇಟ್ಟುಕೊಂಡು ಇವರು ಭ್ರಷ್ಟಾಚಾರದ ಸಮಾವೇಶ ಮಾಡಲು ಹೊರಟಿದ್ದಾರೆ’ ಕಿಡಿಕಾರಿದರು.
‘ಜಿಲ್ಲೆಯ ಕಾಂಗ್ರೆಸ್ ಶಾಸಕರು, ಸಂಸದರು ಅಧಿಕಾರಕ್ಕಾಗಿ ಹೊಡೆದಾಡಿದ್ದಾರೆಯೇ ವಿನಾ, ಬಳ್ಲಾರಿಯ ಹಿತಕ್ಕೆ ಏನೂ ಮಾಡಿಲ್ಲ. ಬಳ್ಳಾರಿ ವಿಶ್ವವಿದ್ಯಾಲಯದಲ್ಲಿ ಭ್ರಷ್ಟಾಚಾರ ನಡೆಯುತ್ತಿದೆ. ಕುಲಪತಿ , ಕುಲಸಚಿವರ ನಡುವೆ ಹೊಂದಾಣಿಕೆ ಇಲ್ಲ’ ಎಂದೂ ಅವರು ಇದೇ ವೇಳೆ ಆರೋಪಿಸಿದರು.
‘ಬುಡಾದಲ್ಲಿ ಶೀಥಲ ಸಮರ’
‘ಬುಡಾದಲ್ಲಿ ಶೀಥಲ ಸಮರ ನಡೆಯುತ್ತಿದೆ. ರಿಯಲ್ ಎಸ್ಟೇಟ್ ಉದ್ಯಮಿಗಳ ಬಳಿ ಹಣ ಕೀಳಲು ಸಂಚು ನಡೆಯುತ್ತಿದೆ. ಹೀಗಾಗಿ ಉದ್ಯಮಿಗಳು ಆತ್ಮಹತ್ಯೆ ಮಾಡಿಕೊಳ್ಳುವ ಹಂತಕ್ಕೆ ಹೋಗಿದ್ದಾರೆ’ ಎಂದು ಮಾಜಿ ಶಾಸಕ ಸೋಮಶೇಖರ ರೆಡ್ಡಿ ಆರೋಪಿಸಿದರು. ‘ಬುಡಾ ಸಭೆಗಳ ನಿರ್ಣಯ ರದ್ಧತಿ ಪ್ರಶ್ನಿಸಿ ಹಲವರು ಕೋರ್ಟ್‌ಗೆ ಹೋಗಿದ್ದಾರೆ. ಆ ಹಂತಕ್ಕೆ ಬುಡಾದಲ್ಲಿ ಸಮಸ್ಯೆ ತಾಂಡವವಾಡುತ್ತಿದೆ’ ಎಂದು ಬಿಜೆಪಿ ಜಿಲ್ಲಾ ಘಟಕದ ಅಧ್ಯಕ್ಷ ಅನಿಲ್ ಕುಮಾರ್ ಹೇಳಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.