ಹೊಸಪೇಟೆ: ವ್ಯಾಪಾರಿಗಳು, ಹಮಾಲರು ಮತ್ತು ಲಾರಿ ಮಾಲೀಕರ ನಡುವೆ ಸಮನ್ವಯದ ಕೊರತೆಯಿಂದ ಲೋಡ್, ಅನ್‌ಲೋಡಿಂಗ್ ಸಮಸ್ಯೆಗೆ ಇನ್ನೂ ಮುಕ್ತಿ ಸಿಕ್ಕಿಲ್ಲ.
ಅದರಲ್ಲೂ ಅನ್ಯ ರಾಜ್ಯದ ಲಾರಿ ಮಾಲೀಕರು ಹೆಚ್ಚು ಸಮಸ್ಯೆ ಎದುರಿಸುತ್ತಿದ್ದಾರೆ. ಇದರಲ್ಲಿ ಲಾರಿ ಚಾಲಕರು ಹೈರಾಣ ಆಗುತ್ತಿದ್ದಾರೆ.
ಒಂದೆಡೆ ಸತತವಾಗಿ ಏರಿಕೆಯಾಗುತ್ತಿರುವ ಡೀಸೆಲ್ ದರದಿಂದ ಲಾರಿ ಮಾಲೀಕರು ಕಂಗಾಲಾಗಿದ್ದಾರೆ. ಎಲ್ಲ ವಸ್ತುಗಳ ಮೇಲೆ ಹೆಚ್ಚಿನ ತೆರಿಗೆ ಹೇರಿರುವುದರಿಂದ ವ್ಯಾಪಾರಿಗಳು ಸಂಕಷ್ಟದಲ್ಲಿದ್ದಾರೆ. ಇನ್ನೊಂದೆಡೆ ಅಗತ್ಯ ವಸ್ತುಗಳ ಬೆಲೆ ಗಗನಕ್ಕೆ ಏರಿರುವುದರಿಂದ ಹಮಾಲರು ಬಹಳ ತೊಂದರೆಗೆ ಸಿಲುಕಿದ್ದಾರೆ. ಹೀಗೆ ಮೂರು ವಲಯದವರ ಸಮಸ್ಯೆಗಳು ಪರಸ್ಪರರ ನಡುವೆ ತಿಕ್ಕಾಟಕ್ಕೆ ಕಾರಣವಾಗಿದೆ ಎಂಬ ಆರೋಪ ಕೇಳಿ ಬಂದಿದೆ.
ಯಾವುದೇ ವ್ಯಾಪಾರಿಗಳ ಸರಕನ್ನು ಒಂದು ಪ್ರದೇಶದಿಂದ ಮತ್ತೊಂದು ಪ್ರದೇಶಕ್ಕೆ ಕೊಂಡೊಯ್ಯುವುದು ಲಾರಿ ಮಾಲೀಕರ ಜವಾಬ್ದಾರಿ. ಲಾರಿಯಲ್ಲಿ ಸರಕು ತುಂಬಿಸುವುದು ಮತ್ತು ಇಳಿಸುವ ವ್ಯವಸ್ಥೆಯನ್ನು ವ್ಯಾಪಾರಿಗಳು ಮಾಡಿಕೊಳ್ಳಬೇಕು. ಸರಕು ಸಾಗಣೆಯ ಒಟ್ಟು ಮೊತ್ತದೊಂದಿಗೆ ಲೋಡ್, ಅನ್‌ಲೋಡಿಂಗ್‌ಗೆ ಕೂಡ ವ್ಯಾಪಾರಿಗಳು ಹಣಪಾವತಿಸಿರುತ್ತಾರೆ. ಆದರೆ, ಲಾರಿ ಮಾಲೀಕರು, ಹಮಾಲರಿಗೆ ಕಡಿಮೆ ಪಾವತಿಸಿ, ವಂಚಿಸುತ್ತಾರೆ ಎಂಬ ಆರೋಪಗಳಿವೆ. ಕೆಲವೆಡೆ ನೇರವಾಗಿ ವ್ಯಾಪಾರಿಗಳೇ ಹಮಾಲರಿಗೆ ಹಣ ನೀಡುತ್ತಾರೆ. ಇಂತಲ್ಲಿ ಹೆಚ್ಚು ತಿಕ್ಕಾಟ ಉಂಟಾಗುವುದಿಲ್ಲ.
ಲಾರಿ ಮಾಲೀಕರು ಹಾಗೂ ಹಮಾಲರ ನಡುವೆಯೇ ಹೆಚ್ಚು ತಿಕ್ಕಾಟ ಉಂಟಾಗುತ್ತಿವೆ. ಹೀಗಾಗಿಯೇ ಹಮಾಲರು ಅವರ ಸಂಘ ಮಾಡಿಕೊಂಡು, ಲೋಡ್, ಅನ್‌ಲೋಡಿಂಗ್‌ಗೆ ದರ ನಿಗದಿ ಮಾಡಿದ್ದಾರೆ. ಇದರ ನಡುವೆಯೂ ಕೆಲವು ಹಮಾಲರು ಅದಕ್ಕಿಂತ ಹೆಚ್ಚಿನ ಹಣಕ್ಕೆ ಬೇಡಿಕೆ ಇಡುತ್ತಾರೆ. ಒಂದುವೇಳೆ ಅವರು ಬೇಡಿಕೆಯಿಟ್ಟಷ್ಟು ಹಣ ಪಾವತಿಸದಿದ್ದಲ್ಲಿ ಲೋಡ್, ಅನ್‌ಲೋಡ್ ಮಾಡುವುದಿಲ್ಲ. ಹಣಕ್ಕಾಗಿ ಹಮಾಲರು ಒಗ್ಗಟ್ಟಿನಿಂದ ಇರುವುದರಿಂದ ಅನ್ಯ ರಾಜ್ಯಗಳಿಂದ ಬರುವ ಲಾರಿ ಮಾಲೀಕರು ಹಲವು ದಿನಗಳವರೆಗೆ ಸರಕು ಇಳಿಸಲಾಗದೆ ಪೇಚಿಗೆ ಸಿಲುಕುತ್ತಾರೆ. ವ್ಯಾಪಾರಿಗಳಿಗೂ ಸಮಯಕ್ಕೆ ಸರಿಯಾಗಿ ಸರಕು ತಲುಪುವುದಿಲ್ಲ.
‘ಯಾರು ಸರಕು ತರಿಸಿಕೊಳ್ಳುತ್ತಾರೋ ಅವರೇ ಹಮಾಲರ ವ್ಯವಸ್ಥೆ ಮಾಡಿಕೊಳ್ಳಬೇಕು. ಇಲ್ಲವಾದಲ್ಲಿ ಅಂತಹ ಸರಕು ಸಾಗಣೆ ಮಾಡದಿರಲು ತೀರ್ಮಾನಿಸಲಾಗಿದೆ. ಈಗಾಗಲೇ ಉತ್ತರ ಭಾರತದ ಕೆಲವು ರಾಜ್ಯಗಳಲ್ಲಿ ಈ ವ್ಯವಸ್ಥೆ ಯಶಸ್ವಿಯಾಗಿ ಜಾರಿಗೆ ಬಂದಿದೆ. ನಮ್ಮಲ್ಲೂ ಇದೇ ರೀತಿ ಮಾಡಲು ನಿರ್ಧರಿಸಲಾಗಿದೆ’ ಎಂದು ಜಿಲ್ಲಾ ಲಾರಿ ಮಾಲೀಕರ ಸಂಘದ ಕಾರ್ಯದರ್ಶಿ ಮುಕ್ತಾರ್ ಮಾಬು ತಿಳಿಸಿದ್ದಾರೆ.
‘ಕಾರ್ಮಿಕ ಇಲಾಖೆ, ವಾಣಿಜ್ಯ ಮತ್ತು ಕೈಗಾರಿಕೆ ಸಂಸ್ಥೆ ಮತ್ತು ಹಮಾಲರು ಸೇರಿಕೊಂಡು ಮೂರು ವರ್ಷಗಳಿಗೊಮ್ಮೆ ಲೋಡ್, ಅನ್‌ಲೋಡಿಂಗ್‌ಗೆ ದರ ನಿಗದಿಪಡಿಸಲಾಗುತ್ತದೆ. ನಿಗದಿತ ಬೆಲೆಗಿಂತ ಯಾರೂ ಹೆಚ್ಚಿಗೆ ಬೇಡಿಕೆ ಇಡುವಂತಿಲ್ಲ. ಆದರೆ, ಕೆಲವೊಮ್ಮೆ ಹಮಾಲಿಗಳು ಹೆಚ್ಚಿಗೆ ಹಣ ಕೇಳುತ್ತಾರೆ. ಇದರಿಂದ ಜಟಾಪಟಿ ಉಂಟಾಗುತ್ತಿದೆ’ ಎಂದು ಒಪ್ಪಿಕೊಳ್ಳುತ್ತಾರೆ ಜಿಲ್ಲಾ ಹಮಾಲರ ಸಂಘದ ಅಧ್ಯಕ್ಷ ಆರ್. ಭಾಸ್ಕರ್ ರೆಡ್ಡಿ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.