ADVERTISEMENT

ಬರಿಗೈಯಲ್ಲಿ ಕೆಂಡ ತೂರಿ ಬೆಂಕಿಯಲ್ಲಿ ಮಿಂದೆದ್ದ ಭಕ್ತರು

ಹೊಸಹಟ್ಟಿ ಗ್ರಾಮದಲ್ಲಿ ಆಬಗ್ಗಲು ಓಬಳದೇವರ ಹಬ್ಬ

​ಪ್ರಜಾವಾಣಿ ವಾರ್ತೆ
Published 9 ಮಾರ್ಚ್ 2021, 3:12 IST
Last Updated 9 ಮಾರ್ಚ್ 2021, 3:12 IST
 ಕೂಡ್ಲಿಗಿ ತಾಲ್ಲೂಕಿನ ಹೊಸಹಟ್ಟಿ ಗ್ರಾಮದಲ್ಲಿ ಭಾನುವಾರ ರಾತ್ರಿ ನಡೆದ ಬಗ್ಗಲು ಓಬಳದೇವರ ಜಾತ್ರೆಯಲ್ಲಿ ಬರಿಗೈಯಲ್ಲಿ ಬೆಂಕಿ ಭಕ್ತರು ಬೆಂಕಿ ತೂರಿದರುಚಿತ್ರ: ಎ.ಎಂ.ಸೋಮಶೇಖರಯ್ಯ
 ಕೂಡ್ಲಿಗಿ ತಾಲ್ಲೂಕಿನ ಹೊಸಹಟ್ಟಿ ಗ್ರಾಮದಲ್ಲಿ ಭಾನುವಾರ ರಾತ್ರಿ ನಡೆದ ಬಗ್ಗಲು ಓಬಳದೇವರ ಜಾತ್ರೆಯಲ್ಲಿ ಬರಿಗೈಯಲ್ಲಿ ಬೆಂಕಿ ಭಕ್ತರು ಬೆಂಕಿ ತೂರಿದರುಚಿತ್ರ: ಎ.ಎಂ.ಸೋಮಶೇಖರಯ್ಯ   

ಕೂಡ್ಲಿಗಿ : ತಾಲ್ಲೂಕಿನ ಹೊಸಹಟ್ಟಿ ಗ್ರಾಮದ ಬಗ್ಗಲು ಓಬಳೇಶ್ವರ ಜಾತ್ರೆಯಲ್ಲಿ ಬೆಂಕಿ ಕೆಂಡಗಳನ್ನು ಬರಿಗೈಯಲ್ಲಿ ತೂರುವ ಮೂಲಕ ಭಕ್ತರು ಕೆಂಡದಮಳೆಯಲ್ಲಿ ಮಿಂದೆದ್ದರು.

ಪ್ರತಿ ಮೂರು ವರ್ಷಕ್ಕೊಮ್ಮೆ ನಡೆಯುವ ಈ ಜಾತ್ರೆ ಸಹಸ್ರಾರು ಭಕ್ತರ ಸಮ್ಮುಖದಲ್ಲಿ ಭಾನುವಾರ ರಾತ್ರಿ ಸಂಪನ್ನವಾಯಿತು. ಕಳೆದ ಎಂಟು ದಿನಗಳಿಂದ ನಡೆಯುತ್ತಿದ್ದ ಸಾಂಪ್ರದಾಯಿಕ ಆಚರಣೆಗಳು ಮುಕ್ತಾಯಗೊಂಡವು.

ಶನಿವಾರ ಗ್ರಾಮಸ್ಥರೆಲ್ಲ ಸೇರಿ ದೇವರನ್ನು ಹೊತ್ತು ಸಮೀಪದ ರಂಗಯ್ಯನದುರ್ಗಕ್ಕೆ ಹೋಗಿ ಗಂಗಾ ಪೂಜೆ ಮಾಡಿ ಬಂದು ಗ್ರಾಮದ ಹೊರ ವಲಯದಲ್ಲಿ ದೇವರನ್ನು ಪ್ರತಿಷ್ಠಾಪಿಸಿದ್ದರು. ನಂತರ ದೇವರನ್ನು ಗುಡಿ ತುಂಬಿಸಿ ಹರಕೆ ಹೊತ್ತವರು ಕಾಡಿಗೆ ಹೋಗಿ ಕಟ್ಟಿಗೆ ತಂದು ದೇವಸ್ಥಾನದ ಮುಂದೆ ರಾಶಿ ಹಾಕಿದರು. ಸಂಜೆ ಕಟ್ಟಿಗೆ ರಾಶಿಗೆ ಬೆಂಕಿ ಹಾಕಿ ಸುಟ್ಟು ಕೆಂಡದ ರಾಶಿ ಮಾಡಿದರು.

ADVERTISEMENT

ಕೆಂಡ ತೂರಲು ಸಿದ್ಧವಾಗಿದ್ದ ಭಕ್ತರು ಗಂಗೆ ಪೂಜೆಗೆಂದು ಗ್ರಾಮದ ಹೊರ ವಲಯಕ್ಕೆ ಹೋಗುತ್ತಿದ್ದಂತೆ ಗ್ರಾಮದಲ್ಲಿನ ಎಲ್ಲಾ ದೀಪಗಳನ್ನು ನಂದಿಸಲಾಯಿತು.ಇತ್ತ ದೇವಸ್ಥಾನದ ಪೂಜಾರಿ ಬೆಂಕಿಯ ರಾಶಿಯನ್ನು ಪೂಜಿಸಿ ಅದರಲ್ಲಿ ಸ್ವಲ್ಪ ಕೆಂಡವನ್ನು ತೆಗೆದುಕೊಂಡ ದೇವಸ್ಥಾನದಲ್ಲಿಟ್ಟು ಬಾಗಿಲು ಹಾಕಿದರು. ಹುರಿಮೆಗಳ ಝೇಂಕಾರದಲ್ಲಿ ಗಂಗೆಗೆ ಹೋಗಿದ್ದ ಭಕ್ತರು ಮರಳಿ ಬರುತ್ತಿದ್ದಂತೆ ಕೆಂಡದ ರಾಶಿಗೆ ಲಗ್ಗೆ ಹಾಕಿದರು. ಕೆಂಡವನ್ನು ತೂರುತ್ತಿದ್ದಂತೆ ಭಕ್ತರ ಜಯಘೋಷ ಮೊಳಗಿತು. ಸುಮಾರು 15 ನಿಮಿಷಗಳ ಕಾಲ ಬೊಗಸೆಯಲ್ಲಿ ಕೆಂಡ ಹಿಡಿದು ನೆರೆದಿದ್ದ ಜನರತ್ತ ತೂರಿದರು. ಕತ್ತಲಲ್ಲಿ ಕೆಂಡವನ್ನು ತೂರುವ ದೃಶ್ಯ ಕೆಂಡದ ಮಳೆಯೇನೋ ಎಂಬಂತೆ ತೋರಿತು.

ಈ ಜಾತ್ರೆಯ ವೇಳೆ ಗ್ರಾಮದಲ್ಲಿ ಯಾರೂ ಕೂಡ ಚಪ್ಪಲಿ ತೊಡುವುದಿಲ್ಲ. ಮದ್ಯ, ಮಾಂಸ ಸೇವಿಸುವುದಿಲ್ಲ.

ಹಿನ್ನೆಲೆ: ಇಲ್ಲಿನ ಪೂಜಾರಿ ಮನೆತನದವರು ಕಾಡಿನಲ್ಲಿ ಕಟ್ಟಿಗೆ ಕಡಿದು, ರಾತ್ರಿ ಸುಟ್ಟು ಬರುತ್ತಿದ್ದರು. ಬೆಳಗಿನಲ್ಲಿ ಇದ್ದಿಲುಗಳನ್ನು ಒಯ್ದು ಮಾರುತ್ತಿದ್ದರು. ಒಮ್ಮೆ ಇದ್ದಿಲು ತರಲು ಬೆಳಿಗ್ಗೆ ಕಾಡಿಗೆ ಹೋದಾಗ ಇದ್ದಿಲ ರಾಶಿಗೆ ಬೆಂಕಿ ಹೊತ್ತಿಕೊಂಡು ಉರಿಯುತ್ತಿದ್ದರಿಂದ ತಮ್ಮ ದೇವರು ಇಲ್ಲಿಯೇ ಪ್ರತ್ಯಕ್ಷನಾಗಿದ್ದಾನೆಂಬ ನಂಬಿಕೆಯಿಂದ ಬಗ್ಗಲು ಓಬಳೇಶ್ವರ ಜಾತ್ರೆ ಆಚರಣೆ ಮಾಡಲಾಗುತ್ತದೆ ಎಂದು ಗ್ರಾಮದ ಹಿರಿಯ ಮುಖಂಡ, ಪೂಜಾರಿ ಚಿನ್ನಪಲ್ಲಿ ಓಬಯ್ಯ ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.