ADVERTISEMENT

ಅಕ್ರಮ ಗಣಿಗಾರಿಕೆ: ದಾಖಲೆ ಸಲ್ಲಿಸಲು ಟಪಾಲ್‌ ಗಣೇಶ್‌ಗೆ ಎಸ್ಐಟಿ ಸೂಚನೆ

ಒಎಂಸಿಯಿಂದ ₹884 ಕೋಟಿ ನಷ್ಟ ವಸೂಲಿ ಮಾಡಬೇಕೆಂದು ಪತ್ರ ಬರೆದಿದ್ದ ಗಣೇಶ್‌

​ಪ್ರಜಾವಾಣಿ ವಾರ್ತೆ
Published 8 ಸೆಪ್ಟೆಂಬರ್ 2025, 3:12 IST
Last Updated 8 ಸೆಪ್ಟೆಂಬರ್ 2025, 3:12 IST
   

ಬಳ್ಳಾರಿ: ಓಬುಳಾಪುರಂ ಮೈನಿಂಗ್‌ ಕಂಪನಿ ಮತ್ತು ಸಹಚರ ಕಂಪನಿಗಳ ಅಕ್ರಮ ಗಣಿಗಾರಿಕೆಯಿಂದ ರಾಜ್ಯಕ್ಕೆ ಆಗಿರುವ ₹884 ಕೋಟಿ ನಷ್ಟವನ್ನು ವಸೂಲಿ ಮಾಡಬೇಕೆಂಬ ದೂರಿಗೆ ಸಂಬಂಧಿಸಿದಂತೆ ವಿಚಾರಣೆಗೆ ಹಾಜರಾಗುವಂತೆ ಲೋಕಾಯುಕ್ತ ವಿಶೇಷ ತನಿಖಾ ತಂಡವು ಗಣಿ ಉದ್ಯಮಿ ಟಪಾಲ್‌ ಗಣೇಶ್‌ಗೆ ನೋಟಿಸ್‌ ಜಾರಿ ಮಾಡಿದೆ. 

ಸೋಮವಾರ ವಿಚಾರಣೆಗೆ ಹಾಜರಾಗಬೇಕು ಎಂದು ಎಸ್ಐಟಿಯ ಪೊಲೀಸ್‌ ಅಧೀಕ್ಷಕರು ಸೆ. 6ರಂದು ಟಪಾಲ್‌ ಗಣೇಶ್‌ ಅವರಿಗೆ ನೋಟಿಸ್‌ನಲ್ಲಿ ತಿಳಿಸಲಾಗಿದೆ.  

ಓಬುಳಾಪುರಂ ಮೈನಿಂಗ್ ಕಂಪನಿ ಮತ್ತು ಅದರ ಸಹಚರ ಕಂಪನಿಗಳು ಸಂಡೂರು ಕ್ಲಸ್ಟರ್‌ನಲ್ಲಿ ಸುಮಾರು 29 ಲಕ್ಷ ಮೆ.ಟನ್ ಕಬ್ಬಿಣದ ಅದಿರನ್ನು ಅಕ್ರಮವಾಗಿ ಉತ್ಪಾದನೆ ಮಾಡಿವೆ. ಸಿದ್ದಾಪುರ ಮತ್ತು ಮಲ್ಲಪ್ಪನಗುಡಿ ಗಣಿ ಪ್ರದೇಶಗಳ ಪರ್ಮಿಟ್‌ಗಳನ್ನು ದುರುಪಯೋಗಪಡಿಸಿಕೊಂಡು ಅದಿರನ್ನು ಸಾಗಿಸಿ ರಾಜ್ಯಕ್ಕೆ ₹884 ಕೋಟಿ ನಷ್ಟ ಉಂಟು ಮಾಡಿವೆ. ಇದನ್ನು ವಸೂಲು ಮಾಡಬೇಕು ಎಂದು ಟಪಾಲ್‌ ಗಣೇಶ್‌ ಆ.18ರಂದು ಸರ್ಕಾರಕ್ಕೆ ಪತ್ರ ಬರೆದಿದ್ದರು.

ADVERTISEMENT

ಈ ವಿಷಯಕ್ಕೆ ಸಂಬಂಧಿಸಿದ ಸೂಕ್ತ ಮಾಹಿತಿ ಮತ್ತು ದಾಖಲೆಗಳೊಂದಿಗೆ ಹಾಜರಾಗುವಂತೆ ಎಸ್‌ಐಟಿ ಅಧೀಕ್ಷಕರು ತಮ್ಮ ನೋಟಿಸ್‌ನಲ್ಲಿ ತಿಳಿಸಿದ್ದಾರೆ. 

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.