ADVERTISEMENT

ನಾಲ್ಕು ತಾಲ್ಲೂಕಿಗೆ ಒಬ್ಬರೇ ಮಕ್ಕಳ ವೈದ್ಯ!

ಖಾಸಗಿ ಆಸ್ಪತ್ರೆಗಳಿಂದ ಬೇಕಾಬಿಟ್ಟಿ ಹಣ ವಸೂಲಿ ಆರೋಪ

ಶಶಿಕಾಂತ್ ಎಸ್. ಶೆಂಬೆಳ್ಳಿ
Published 8 ಅಕ್ಟೋಬರ್ 2019, 19:30 IST
Last Updated 8 ಅಕ್ಟೋಬರ್ 2019, 19:30 IST

ಹೊಸಪೇಟೆ: ಇಲ್ಲಿನ ಉಪವಿಭಾಗ ಮಟ್ಟದ ಸರ್ಕಾರಿ ಆಸ್ಪತ್ರೆಗೆ ಒಬ್ಬರೇ ಮಕ್ಕಳ ವೈದ್ಯರಿದ್ದಾರೆ!

ಈ ಆಸ್ಪತ್ರೆಗೆ ತಾಲ್ಲೂಕು ಸೇರಿದಂತೆ ಜಿಲ್ಲೆಯ ಕಂಪ್ಲಿ, ಕೂಡ್ಲಿಗಿ ಹಾಗೂ ಹಗರಿಬೊಮ್ಮನಹಳ್ಳಿ ತಾಲ್ಲೂಕುಗಳಿಂದ ಜನ ಚಿಕಿತ್ಸೆಗೆಂದು ಮಕ್ಕಳನ್ನು ಕರೆ ತರುತ್ತಾರೆ. ಆದರೆ, ಒಬ್ಬರೇ ವೈದ್ಯರು ಇರುವುದರಿಂದ ಅವರ ಮೇಲೆ ಹೆಚ್ಚಿನ ಕಾರ್ಯದೊತ್ತಡ ಇದೆ.

ಆಸ್ಪತ್ರೆಯ ಮಕ್ಕಳ ತಜ್ಞ ವೈದ್ಯ ಶ್ರೀನಿವಾಸ ಅವರು ಕೆಲವೊಮ್ಮೆ ಎರಡೆರಡು ಪಾಳಿಗಳಲ್ಲಿ ಕೆಲಸ ನಿರ್ವಹಿಸುವ ಅನಿವಾರ್ಯತೆ ಸೃಷ್ಟಿಯಾಗುತ್ತದೆ. ತುರ್ತು ಸಂದರ್ಭಗಳಲ್ಲಿಯೂ ಅವರೇ ಬರಬೇಕು.ಒಬ್ಬರೇ ವೈದ್ಯರಿರುವ ಕಾರಣ ಜನ ಕೂಡ ಅನಿವಾರ್ಯವಾಗಿ ತಡಹೊತ್ತು ಸರತಿ ಸಾಲಿನಲ್ಲಿ ನಿಂತು ಮಕ್ಕಳನ್ನು ತೋರಿಸಿಕೊಂಡು ಹಿಂತಿರುಗುತ್ತಾರೆ.

ADVERTISEMENT

ಅನೇಕ ವರ್ಷಗಳಿಂದ ಇದು ಹೀಗೆಯೇ ನಡೆದುಕೊಂಡು ಬರುತ್ತಿದೆ. ಸಾಧಾರಣ ದಿನಗಳಲ್ಲಿ ಹೆಚ್ಚಿನ ಸಮಸ್ಯೆಯೇನೂ ಆಗಿಲ್ಲ. ವೈರಾಣು ಜ್ವರ ಸೇರಿದಂತೆ ಇತರೆ ಸಂದರ್ಭಗಳಲ್ಲಿ ಹೆಚ್ಚಿನ ರೋಗಿಗಳು ಬಂದರೆ ಅವರು ದಿನವಿಡೀ ಕೆಲಸ ನಿರ್ವಹಿಸಲೇಬೇಕಾಗುತ್ತದೆ.

ಖಾಸಗಿಯಲ್ಲಿ ಸುಲಿಗೆ ಆರೋಪ:‘ಸರ್ಕಾರಿ ಆಸ್ಪತ್ರೆಯಲ್ಲಿ ಒಬ್ಬರೇ ಮಕ್ಕಳ ವೈದ್ಯರಿರುವ ಕಾರಣ ಖಾಸಗಿಯವರು ಇದನ್ನೇ ಬಂಡವಾಳ ಮಾಡಿಕೊಂಡು, ಮನಬಂದಂತೆ ಜನರಿಂದ ಹಣ ವಸೂಲಿಗಿಳಿದಿವೆ‘ ಎಂದು ಆರೋಪಿಸುತ್ತಾರೆ ಸಾರ್ವಜನಿಕರು.

ನಗರದಲ್ಲಿ ಎಂಟರಿಂದ ಹತ್ತು ಜನ ತಜ್ಞ ಮಕ್ಕಳ ವೈದ್ಯರಿದ್ದಾರೆ. ಒಬ್ಬೊಬ್ಬರಲ್ಲಿ ಒಂದೊಂದು ರೀತಿಯ ಶುಲ್ಕ ಇದೆ. ಅವರ ಬಳಿ ಚಿಕಿತ್ಸೆ ಕೂಪನ್‌ ಪಡೆಯಲು ಗಂಟೆಗಟ್ಟಲೇ ಕಾದು ಕೂರಬೇಕು. ಎಷ್ಟೇ ತುರ್ತು ಇದ್ದರೂ ಅವರು ಕ್ಯಾರೆ ಎನ್ನುವುದಿಲ್ಲ ಎನ್ನುವುದು ಅವರ ಮೇಲಿರುವ ಮತ್ತೊಂದು ಗಂಭೀರ ಆರೋಪ.

‘ನಗರದಲ್ಲಿನ ಮಕ್ಕಳ ಆಸ್ಪತ್ರೆಗಳನ್ನು ನೋಡಿದರೆ ದನದ ಕೊಟ್ಟಿಗೆಗಳಂತೆ ಭಾಸವಾಗುತ್ತವೆ. ಅಷ್ಟರಮಟ್ಟಿಗೆ ಸದಾ ಜನಜಂಗುಳಿ ಇರುತ್ತದೆ. ಇದಕ್ಕೆ ಜನರನ್ನು ದೂಷಿಸುವುದರಲ್ಲಿ ಅರ್ಥವಿಲ್ಲ. ಸರ್ಕಾರಿ ಆಸ್ಪತ್ರೆಯಲ್ಲಿ ಒಬ್ಬರೇ ವೈದ್ಯರಿರುವ ಕಾರಣ ಅವರು ಅನಿವಾರ್ಯವಾಗಿ ಖಾಸಗಿ ಆಸ್ಪತ್ರೆಗಳ ಮೊರೆ ಹೋಗುತ್ತಿದ್ದಾರೆ. ಅವರು ಕೇಳಿದಷ್ಟು ಹಣ ಪಾವತಿಸಿ ವಂಚನೆಗೆ ಒಳಗಾಗುತ್ತಿದ್ದಾರೆ’ ಎನ್ನುತ್ತಾರೆ ಸಾಮಾಜಿಕ ಹೋರಾಟಗಾರ ಯೂಸುಫ್‌ ಪಟೇಲ್‌.

‘ಕೆಲವು ಆಸ್ಪತ್ರೆಯವರು ನಸುಕಿನ ಜಾವದಿಂದಲೇ ಟೋಕನ್‌ ಕೊಡಲು ಆರಂಭಿಸುತ್ತಾರೆ. ಹಳ್ಳಿಯಿಂದ ಜನ ತಡರಾತ್ರಿಯೇ ಬಂದು ಆಸ್ಪತ್ರೆ ಎದುರು ಕಾದು ಕುಳಿತಿರುತ್ತಾರೆ. ಅಷ್ಟರಮಟ್ಟಿಗೆ ಆಸ್ಪತ್ರೆಯವರು ಅಮಾನವೀಯವಾಗಿ ವರ್ತಿಸುತ್ತಿವೆ. ಎಷ್ಟೇ ತುರ್ತು ಇದ್ದರೂ ಸಹ ಟೋಕನ್‌ ಇಲ್ಲವೆಂಬ ನೆಪವೊಡ್ಡಿ ಚಿಕಿತ್ಸೆಗೆ ನಿರಾಕರಿಸುತ್ತಾರೆ. ಒಬ್ಬೊಬ್ಬರು ಒಂದೊಂದು ರೀತಿಯ ಶುಲ್ಕ ನಿಗದಿಪಡಿಸಿದ್ದಾರೆ. ಅದನ್ನು ಸರ್ಕಾರ ನಿಗದಿಪಡಿಸಬೇಕು’ ಎಂದು ಆಗ್ರಹಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.