ADVERTISEMENT

ಸಿರುಗುಪ್ಪ: ವಿದ್ಯಾರ್ಥಿಗಳಿಗೆ ಬಯಲೇ ಪಾಠಶಾಲೆ

ಭೈರಗಾಮದಿನ್ನೆ: ಶಿಥಿಲಗೊಂಡ ಶಾಲಾ ಕೊಠಡಿ

ಪ್ರಜಾವಾಣಿ ವಿಶೇಷ
Published 30 ಆಗಸ್ಟ್ 2024, 4:45 IST
Last Updated 30 ಆಗಸ್ಟ್ 2024, 4:45 IST
ಸಿರುಗುಪ್ಪ ತಾಲ್ಲೂಕಿನ ಭೈರಗಾಮದಿನ್ನೆ ಗ್ರಾಮದ ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆಯ ಚಾವಣಿ ಕಿತ್ತು ಹೋಗಿದೆ
ಸಿರುಗುಪ್ಪ ತಾಲ್ಲೂಕಿನ ಭೈರಗಾಮದಿನ್ನೆ ಗ್ರಾಮದ ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆಯ ಚಾವಣಿ ಕಿತ್ತು ಹೋಗಿದೆ   

ಸಿರುಗುಪ್ಪ: ತಾಲ್ಲೂಕಿನ ಬೀರಹಳ್ಳಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಭೈರಗಾಮದಿನ್ನೆ ಗ್ರಾಮದಲ್ಲಿ ಮಳೆ ಬಂದರೆ ಶಾಲೆಯ ವಿದ್ಯಾರ್ಥಿಗಳಿಗೆ ದೇವಸ್ಥಾನದ ಆವರಣವೇ ಬಯಲು ಪಾಠಶಾಲೆ. ಹೆಚ್ಚಿನ ಮಳೆ ಬಂದರಂತೂ ವಿದ್ಯಾರ್ಥಿಗಳು ಬಯಲಲ್ಲಿ ಕುಳಿತುಕೊಳ್ಳಲು ಆಗದೇ ಶಾಲೆಯಲ್ಲಿ ನಿಂತುಕೊಳ್ಳಲು ಸಾಧ್ಯವಾಗದೆ ಮನೆ ದಾರಿ ಹಿಡಿಯುವುದು ಅನಿವಾರ್ಯವಾಗಿದೆ.

ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆಯಲ್ಲಿ ಒಟ್ಟು 130 ವಿದ್ಯಾರ್ಥಿಗಳು 1ರಿಂದ 5ನೇ ತರಗತಿವರೆಗೆ ವಿದ್ಯಾಭ್ಯಾಸ ಮಾಡುತ್ತಿದ್ದಾರೆ. ಐದು ತರಗತಿಗಳ ವಿದ್ಯಾರ್ಥಿಗಳಿಗಾಗಿ ಈ ಹಿಂದೆ ಕಟ್ಟಲಾಗಿರುವ ಮೂರು ಕೊಠಡಿಗಳ ಕಟ್ಟಡಗಳು ತೊಟ್ಟಿಕ್ಕುತ್ತಿದ್ದು, ಮಳೆಯಾದರೆ ಸಾಕು ತರಗತಿಗಳು ಸೋರುತ್ತಿವೆ. ವಿದ್ಯಾರ್ಥಿಗಳು ಈ ಕೊಠಡಿಗಳಲ್ಲಿ ಕುಳಿತು ಪಾಠ ಪ್ರವಚನ ಕೇಳಲು ಸಾಧ್ಯವಿಲ್ಲ.

ವಿದ್ಯಾರ್ಥಿಗಳು ಕುಳಿತುಕೊಂಡು ಪಾಠ ಪ್ರವಚನ ಕೇಳಲು ಈ ಗ್ರಾಮದಲ್ಲಿ ಉತ್ತಮವಾದ ಸಮುದಾಯ ಭವನ ಇಲ್ಲದ ಕಾರಣ ಶಿಕ್ಷಕರು ಅನಿವಾರ್ಯವಾಗಿ ಬಯಲು ಜಾಗದಲ್ಲಿಯೇ ವಿದ್ಯಾರ್ಥಿಗಳನ್ನು ಕೂಡಿಸುತ್ತಿದ್ದಾರೆ.

ADVERTISEMENT

ಕಲ್ಯಾಣ ಕರ್ನಾಟಕ ಅಭಿವೃದ್ಧಿ ಮಂಡಳಿ ಯೋಜನೆಯಡಿ 5 ಹೊಸ ಶಾಲಾ ಕೊಠಡಿ ನಿರ್ಮಿಸಲು ಅನುದಾನ ಬಿಡುಗಡೆಯಾಗಿದೆ. ಆದರೆ ಸದ್ಯ ಇರುವ ಶಾಲೆಯ ಹಿಂದಿನ ಬಯಲು ಜಾಗ ತಮ್ಮದೆಂದು ಗ್ರಾಮಸ್ಥರೊಬ್ಬರು ನ್ಯಾಯಾಲಯದ ಮೊರೆ ಹೋಗಿರುವುದರಿಂದ ಹೊಸ ಕೊಠಡಿ ನಿರ್ಮಿಸಲು ಸಾಧ್ಯವಾಗಿಲ್ಲವೆಂದು ಶಿಕ್ಷಣ ಇಲಾಖೆ ಅಧಿಕಾರಿಗಳು ಹೇಳುತ್ತಾರೆ.

‘ಸದ್ಯ ಇರುವ ಮೂರು ಕೊಠಡಿಗಳು ಶಿಥಿಲಾವಸ್ಥೆ ತಲುಪಿದ್ದು, ಕೆ.ಕೆ.ಆರ್.ಡಿ.ಬಿ. ಯೋಜನೆಯಡಿ ಈ 5 ಹೊಸ ಶಾಲಾ ಕಟ್ಟಡ ನಿರ್ಮಿಸಲು ಅನುದಾನವಿದೆ. ಆದರೆ 5 ಕೊಠಡಿಗಳ ನಿರ್ಮಾಣಕ್ಕೆ ಬೇಕಾದ ಖಾಲಿ ಜಾಗ ವಿವಾದದಲ್ಲಿದೆ. ವಿದ್ಯಾರ್ಥಿಗಳ ಹಿತದೃಷ್ಟಿಯಿಂದ ಉತ್ತಮವಾದ ಸ್ಥಳದಲ್ಲಿ ಪಾಠ ಪ್ರವಚನ ಮಾಡಿಸಲು ಕ್ರಮ ತೆಗೆದುಕೊಳ್ಳುವುದಾಗಿ’ ಬಿ.ಇ.ಒ. ಎಚ್.ಗುರಪ್ಪ ತಿಳಿಸಿದ್ದಾರೆ.

ಸಿರುಗುಪ್ಪ ತಾಲ್ಲೂಕಿನ ಭೈರಗಾಮದಿನ್ನೆ ಗ್ರಾಮದ ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆ ಮಕ್ಕಳು ಬಯಲಿನಲ್ಲಿ ಕುಳಿತಿ ಪಾಠ ಕೇಳುತ್ತಿರುವುದು

5ನೇ ತರಗತಿ ವಿದ್ಯಾರ್ಥಿಗಳನ್ನು ಸೋರುತ್ತಿರುವ ಕೊಠಡಿಯಲ್ಲಿಯೇ ನೀರು ಬೀಳದ ಜಾಗದಲ್ಲಿ ಕೂಡಿಸಿ ಪಾಠ ಮಾಡುತ್ತಿದ್ದೇವೆ

-ದೊಡ್ಡಪ್ಪ ಕೋರ ಮುಖ್ಯಶಿಕ್ಷಕ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.