ADVERTISEMENT

ಶಿಕ್ಷಣದ ಕೇಸರೀಕರಣ, ಅಪಾಯಕಾರಿ ಬೆಳವಣಿಗೆ: ವಿ.ಪಿ.ಸಾನು

​ಪ್ರಜಾವಾಣಿ ವಾರ್ತೆ
Published 11 ಸೆಪ್ಟೆಂಬರ್ 2018, 11:49 IST
Last Updated 11 ಸೆಪ್ಟೆಂಬರ್ 2018, 11:49 IST
ಹೊಸಪೇಟೆಯಲ್ಲಿ ಮಂಗಳವಾರ ಹಮ್ಮಿಕೊಂಡಿದ್ದ ಜಾಥಾದಲ್ಲಿ ಎಸ್‌.ಎಫ್‌.ಐ. ರಾಷ್ಟ್ರೀಯ ಅಧ್ಯಕ್ಷ ವಿ.ಪಿ. ಸಾನು ಮಾತನಾಡಿದರು.
ಹೊಸಪೇಟೆಯಲ್ಲಿ ಮಂಗಳವಾರ ಹಮ್ಮಿಕೊಂಡಿದ್ದ ಜಾಥಾದಲ್ಲಿ ಎಸ್‌.ಎಫ್‌.ಐ. ರಾಷ್ಟ್ರೀಯ ಅಧ್ಯಕ್ಷ ವಿ.ಪಿ. ಸಾನು ಮಾತನಾಡಿದರು.   

ಹೊಸಪೇಟೆ: ಕೇಂದ್ರ ಸರ್ಕಾರವು ಶಿಕ್ಷಣವನ್ನು ಖಾಸಗೀಕರಣಗೊಳಿಸುತ್ತಿರುವುದು ಹಾಗೂ ಕೋಮುವಾದದ ವಿರುದ್ಧ ಭಾರತ ಯುವಜನ ಫೆಡರೇಶನ್‌ನಿಂದ (ಎಸ್‌.ಎಫ್‌.ಐ.) ಮಂಗಳವಾರ ನಗರದಲ್ಲಿ ಜಾಥಾ ನಡೆಸಲಾಯಿತು.

ರೋಟರಿ ವೃತ್ತದಿಂದ ಆರಂಭಗೊಂಡ ಜಾಥಾ ಪ್ರಮುಖ ಮಾರ್ಗಗಳ ಮೂಲಕ ಹಾದು ಮುನ್ಸಿಪಲ್‌ ಕಾಲೇಜು ಮೈದಾನದಲ್ಲಿ ಕೊನೆಗೊಂಡಿತು.

ಬಳಿಕ ಬಹಿರಂಗ ಸಭೆ ಉದ್ದೇಶಿಸಿ ಮಾತನಾಡಿದ ಸಂಘಟನೆಯ ರಾಷ್ಟ್ರೀಯ ಅಧ್ಯಕ್ಷ ವಿ.ಪಿ. ಸಾನು, ‘ಕೇಂದ್ರ ಸರ್ಕಾರ ಶಿಕ್ಷಣದ ಗುಣಮಟ್ಟ ಸುಧಾರಿಸುವ ಬದಲು ಅದನ್ನು ಖಾಸಗೀಯವರ ಕೈಗಳಿಗೆ ಕೊಟ್ಟು ಹಾಳು ಮಾಡುತ್ತಿದೆ. ಅಷ್ಟೇ ಅಲ್ಲ, ಅದನ್ನು ಕೇಸರೀಕರಣಗೊಳಿಸುತ್ತಿದೆ. ಇದು ಅಪಾಯಕಾರಿ ಬೆಳವಣಿಗೆ’ ಎಂದು ಆತಂಕ ವ್ಯಕ್ತಪಡಿಸಿದರು.

ADVERTISEMENT

‘ಶಿಕ್ಷಣ ವ್ಯವಸ್ಥೆ ಮುಕ್ತವಾಗಿ ಇರಬೇಕು. ಯಾವುದೋ ಒಂದು ಅಜೆಂಡಾ ಅದರಲ್ಲಿ ಇರಬಾರದು. ಸಮಗ್ರ ಜ್ಞಾನ ಸಿಗುವುದೇ ಅದರ ಮುಖ್ಯ ಉದ್ದೇಶವಾಗಿರಬೇಕು. ಆದರೆ, ಅನೇಕ ಜನ ವಿದ್ವಾಂಸರನ್ನು ಸೃಷ್ಟಿಸಿರುವ ಜೆ.ಎನ್‌.ಯು.ನಂತಹ ವಿಶ್ವವಿದ್ಯಾಲಯಗಳನ್ನು ಮುಚ್ಚಲು ಹುನ್ನಾರ ನಡೆಸಲಾಗುತ್ತಿದೆ’ ಎಂದು ಹೇಳಿದರು.

‘ದೇಶದ 22 ರಾಜ್ಯಗಳಲ್ಲಿ ನಾಲ್ಕು ವಿಭಾಗಗಳಲ್ಲಿ ಸೆ. 4ರಿಂದ ಆರಂಭಿಸಿರುವ ಜಾಥಾ ಇದೇ 17ರ ವರೆಗೆ ನಡೆಯಲಿದೆ. ಪ್ರತಿಯೊಬ್ಬರೂ ಜಾಗೃತಿ ಮೂಡಿಸುವುದು ಮುಖ್ಯ ಉದ್ದೇಶ’ ಎಂದರು.

ರಾಜ್ಯ ಅಧ್ಯಕ್ಷ ವಿ. ಅಂಬರೇಶ್‌, ಕಾರ್ಯದರ್ಶಿ ಗುರುರಾಜ್‌ ದೇಸಾಯಿ, ಜಿಲ್ಲಾ ಅಧ್ಯಕ್ಷ ದೊಡ್ಡ ಬಸವರಾಜ, ವಿ.ವಿ.ಗಳ ರಾಜ್ಯ ಸಂಚಾಲಕ ಮುನಿರಾಜು, ತಾಲ್ಲೂಕು ಅಧ್ಯಕ್ಷ ಶರಣು ಕುಮಾರ, ಕಾರ್ಯದರ್ಶಿ ಕೆ. ಶಿವಕುಮಾರ, ಸದಸ್ಯರಾದ ಶರಬಯ್ಯ, ರಮೇಶ, ಮಾರುತಿ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.