ADVERTISEMENT

ಗಂಗಮ್ಮನ ಮಡಗು ಜಾಕ್‌ವೆಲ್‌ಗೆ ವಿರೋಧ

ಕಾಮಗಾರಿ ಸ್ಥಳದಲ್ಲಿ ಪರಿಸರ ಪ್ರೇಮಿಗಳಿಂದ ಮೌನ ಪ್ರತಿಭಟನೆ

​ಪ್ರಜಾವಾಣಿ ವಾರ್ತೆ
Published 19 ನವೆಂಬರ್ 2019, 12:28 IST
Last Updated 19 ನವೆಂಬರ್ 2019, 12:28 IST
ಜಾಕ್‌ವೆಲ್‌ ನಿರ್ಮಾಣ ಕಾಮಗಾರಿ ನಡೆಯುತ್ತಿರುವ ಗಂಗಮ್ಮನ ಮಡಗುದಲ್ಲಿ ಪರಿಸರಪ್ರೇಮಿಗಳು ಪ್ರತಿಭಟನೆ ನಡೆಸಿದರು
ಜಾಕ್‌ವೆಲ್‌ ನಿರ್ಮಾಣ ಕಾಮಗಾರಿ ನಡೆಯುತ್ತಿರುವ ಗಂಗಮ್ಮನ ಮಡಗುದಲ್ಲಿ ಪರಿಸರಪ್ರೇಮಿಗಳು ಪ್ರತಿಭಟನೆ ನಡೆಸಿದರು   

ಹೊಸಪೇಟೆ: ತುಂಗಭದ್ರಾ ನದಿ ಪಾತ್ರದ ಗಂಗಮ್ಮನ ಮಡಗು ಬಳಿ ಜಾಕ್‌ವೆಲ್‌ ನಿರ್ಮಿಸುತ್ತಿರುವುದನ್ನು ವಿರೋಧಿಸಿ ಪರಿಸರ ಪ್ರೇಮಿಗಳು ಮಂಗಳವಾರ ಕಾಮಗಾರಿ ನಡೆಯುತ್ತಿರುವ ಸ್ಥಳದಲ್ಲಿ ಪ್ರತಿಭಟನೆ ನಡೆಸಿದರು.

‘ಗಂಗಮ್ಮನ ಮಡಗು ಉಳಿಸಿ’, ‘ಅಪರೂಪದ ಜೀವಿಗಳನ್ನು ಉಳಿಸಿ’ ಘೋಷಣೆ ಹೊಂದಿದ್ದ ಫಲಕಗಳನ್ನು ಹಿಡಿದುಕೊಂಡು ಮೌನ ಪ್ರತಿಭಟನೆ ಮಾಡಿದರು. ನಂತರ ಬಳ್ಳಾರಿ ಜಿಲ್ಲಾ ಉಪ ಅರಣ್ಯ ಸಂರಕ್ಷಣಾಧಿಕಾರಿ ರಮೇಶ್ ಕುಮಾರ್ ಅವರಿಗೆ ಮನವಿ ಪತ್ರ ಸಲ್ಲಿಸಿದರು.

‘ತಾಲ್ಲೂಕಿನ ಕಾಳಘಟ್ಟ, ಕೊಪ್ಪಳ ಜಿಲ್ಲೆ ಗಂಗಾವತಿ ತಾಲ್ಲೂಕಿನ ನಾರಾಯಣಪೇಟೆ ನಡುವೆ ತುಂಗಭದ್ರಾ ನದಿಯಿದ್ದು, ಅಲ್ಲಿರುವ ಗಂಗಮ್ಮ ಮಡುಗುವಿನಲ್ಲಿ ಸದಾ ನೀರು ಇರುತ್ತದೆ. ಈ ಪ್ರದೇಶದಲ್ಲಿ ನೀರುನಾಯಿ, ಮೊಸಳೆ, ಆಮೆ, ಅನೇಕ ಪ್ರಭೇದದ ಮೀನುಗಳ ವಾಸವಾಗಿವೆ. ಈ ಸ್ಥಳವನ್ನು ನೀರು ನಾಯಿ ಸಂರಕ್ಷಿತ ಪ್ರದೇಶವೆಂದು ಘೋಷಿಸಲಾಗಿದೆ. ಅಲ್ಲಿ ಜಾಕ್‌ವೆಲ್‌ ನಿರ್ಮಿಸಿದರೆ ಜಲಚರಗಳ ಸಂತತಿ ನಾಶವಾಗುತ್ತದೆ’ ಎಂದು ಆತಂಕ ವ್ಯಕ್ತಪಡಿಸಿದ್ದಾರೆ.

ADVERTISEMENT

‘ಕೊಪ್ಪಳ ಜಿಲ್ಲೆಯ 11 ಕೆರೆಗಳಿಗೆ ನೀರು ತುಂಬಿಸಲು ಜಾಕ್‌ವೆಲ್‌ ನಿರ್ಮಿಸಲಾಗುತ್ತಿದೆ. ಅದಕ್ಕಾಗಿ ನೂರಾರು ಹಾರ್ಸ್‌ ಪವರ್‌ ಸಾಮರ್ಥ್ಯದ ಮೋಟಾರ್‌ಗಳನ್ನು ಕೂಡಿಸಬೇಕಾಗುತ್ತದೆ. ಇದರಿಂದ ಅಲ್ಲಿ ವಾಸಿಸುವ ಜೀವಿಗಳಿಗೆ ತೊಂದರೆಯಾಗುತ್ತದೆ. ಅದರ ಬದಲು ಕೊಪ್ಪಳದ ಶಿವಪುರ ಬಳಿ ಜಾಕ್‌ವೆಲ್‌ ನಿರ್ಮಿಸಿ, ಕೆರೆಗಳಿಗೆ ನೀರು ತುಂಬಿಸಬಹುದು’ ಎಂದು ತಿಳಿಸಿದ್ದಾರೆ.

ಪರಿಸರ ಪ್ರೇಮಿಗಳಾದ ಸಮದ್‌ ಕೊಟ್ಟೂರು, ಪಾಂಡುರಂಗ ಆಶ್ರಿತ್, ಸುಜಿತ್ ಶೆಟ್ಟರ್, ವಿನಯ್ ಕಂಕೂರು, ಜಗದೀಶ್ ಮಾಲಿ ಪಾಟೀಲ, ವಿಕ್ರಂ ನೂಲ್ವಿ ಸೇರಿದಂತೆ ಇತರರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.