ADVERTISEMENT

ಬಳ್ಳಾರಿ ಜಿಲ್ಲೆ ವಿಭಜನೆ ಸಲ್ಲದು: 'ಆಕ್ಷೇಪಣೆಗಳ ಪಾರದರ್ಶಕ ಪರಿಶೀಲನೆ ಅಗತ್ಯ'

​ಪ್ರಜಾವಾಣಿ ವಾರ್ತೆ
Published 17 ಜನವರಿ 2021, 5:34 IST
Last Updated 17 ಜನವರಿ 2021, 5:34 IST
ಬಳ್ಳಾರಿ ಹೋರಾಟ ಸಮಿತಿ
ಬಳ್ಳಾರಿ ಹೋರಾಟ ಸಮಿತಿ    

ಬಳ್ಳಾರಿ: 'ಜಿಲ್ಲೆಯನ್ನು ವಿಭಜಿಸಿ ವಿಜಯನಗರ ಜಿಲ್ಲೆಯನ್ನು‌ ಘೋಷಿಸಲು ಸರ್ಕಾರ‌ ಅವಸರ ಮಾಡಬಾರದು. ವಿಭಜನೆ ಕುರಿತ ಆಕ್ಷೇಪಣೆಗಳ ಪಾರದರ್ಶಕ‌ ಪರಿಶೀಲನೆ ನಡೆಸಬೇಕು' ಎಂದು ಅಖಂಡ ಬಳ್ಳಾರಿ ಹೋರಾಟ ಸಮಿತಿ ಮುಖಂಡರಾದ ಕುಡುತಿನಿ ಶ್ರೀನಿವಾಸ್, ದರೂರು ಪುರುಷೋತ್ತಮ ಗೌಡ ಆಗ್ರಹಿಸಿದರು.

'2019 ರಲ್ಲಿ ಜಿಲ್ಲೆ ವಿಭಜನೆಯ ವಿಷಯ ಪ್ರಸ್ತಾಪಿಸಿದ್ದ ಸರ್ಕಾರವು ವಿರೋಧ ವ್ಯಕ್ತವಾದ ಕಾರಣಕ್ಕೆ‌ ಸುಮ್ಮನಾಗಿ 2020 ರಲ್ಲಿ ದಿಢೀರನೆ ಮತ್ತೆ ವಿಭಜನೆಗೆ ಸಚಿವ ಸಂಪುಟದ ಅನುಮೋದನೆ ಪಡೆಯಿತು.‌ ಈಗ ಸಾರ್ವಜನಿಕರ ಆಕ್ಷೇಪಣೆಗಳನ್ನು ಕೂಲಂಕಷವಾಗಿ ಪರಿಶೀಲಿಸಲೇಬೇಕು' ಎಂದು‌ ನಗರದಲ್ಲಿ ಭಾನುವಾರ ಸುದ್ದಿಗೋಷ್ಠಿಯಲ್ಲಿ ಆಗ್ರಹಿಸಿದರು.

'ಸರ್ಕಾರ ಗಣರಾಜ್ಯೋತ್ಸವದೊಳಗೆ‌‌ ವಿಭಜನೆ ಪ್ರಕ್ರಿಯೆಯನ್ನು ಅವಸರದಲ್ಲಿ ಪೂರ್ಣಗೊಳಿಸಲಿದೆ ಎಂಬ ವದಂತಿಗಳು ಕೇಳಿಬರುತ್ತಿವೆ. ಸಾರ್ವಜನಿಕರ ಅಹವಾಲು ಆಲಿಸದೇ ಘೋಷಿಸಿದರೆ ಸರ್ಕಾರ ಕಾನೂನು ಉಲ್ಲಂಘಿಸಿದಂತಾಗುತ್ತದೆ' ಎಂದು ಪ್ರತಿಪಾದಿಸಿದರು.

ADVERTISEMENT

'ಆಕ್ಷೇಪಣೆಗಳನ್ನು ನಿರ್ಲಕ್ಷ್ಯಿಸಿ ಜಿಲ್ಲೆ ವಿಭಜಿಸಿದರೆ ಕಾನೂನು ಹೋರಾಟ ಮಾಡಲು ಸಮಿತಿ ಸಿದ್ಧವಾಗಿದೆ. ಹೈಕೋರ್ಟ್ ನಲ್ಲಿ ಸಾರ್ವಜನಿಕ ಹಿತಾಸಕ್ತಿ ಮೊಕದ್ದಮೆ ಹೂಡಲಾಗುವುದು. ಅಲ್ಲಿ‌ ಹಿನ್ನಡೆಯಾದರೆ ಸುಪ್ರೀಂ ಕೋರ್ಟ್ ಮೆಟ್ಟಿಲು ಹತ್ತಲೂ ಹಿಂಜರಿಯುವುದಿಲ್ಲ' ಎಂದು ಹೇಳಿದರು.

ಆಕ್ರೋಶ: 'ಬಳ್ಳಾರಿಯಲ್ಲೇ ಹುಟ್ಟಿ‌ ಬೆಳೆದ ಬಿ.ಶ್ರೀರಾಮುಲು ಅವರು‌ ವಿಭಜನೆ ವಿರುದ್ಧ‌ ದನಿ ಎತ್ತದೆ ಮೌನವಾಗಿದ್ದಾರೆ. 2019ರಲ್ಲಿ ವಿರೋಧ ವ್ಯಕ್ತಪಡಿಸಿದ್ದ ಹಲವು ಶಾಸಕರು ವಿಭಜನೆ ಪರವಾಗಿರುವುದು ವಿಪರ್ಯಾಸ' ಎಂದು ವಿಷಾದಿಸಿದರು.

'ಶಾಸಕರಾದ ಕೆ.ಸಿ.ಕೊಂಡಯ್ಯ, ಅಲ್ಲಂ ವೀರಭದ್ರಪ್ಪ‌ ವಿಭಜನೆ ಪರವಾಗಿ ಪತ್ರ ಕೊಟ್ಟು ಬಂದು‌ ಜನರ ಮುಂದೆ ಮೊಸಳೆ ಕಣ್ಣೀರು‌ ಸುರಿಸುತ್ತಾರೆ' ಎಂದು ಟೀಕಿಸಿದರು.

'ವಿಭಜನೆಯ ವಿರುದ್ಧದ ಹೋರಾಟಕ್ಕೆ ಬೆಂಬಲ‌ ನೀಡಬೇಕು ಎಂದು ಕೋರಿ ಕಾಂಗ್ರೆಸ್ ನ ಡಿ.ಕೆ.ಶಿವಕುಮಾರ್ ಮತ್ತು ಜೆಡಿಎಸ್ ಮುಖಂಡ ಎಚ್.ಡಿ.ಕುಮಾರಸ್ವಾಮಿ ಅವರಿಗೂ ಮನವಿ ಸಲ್ಲಿಸಲಾಗಿದೆ. ಸರ್ಕಾರದ ಗಮನ ಸೆಳೆಯುವುದಾಗಿ ಅವರು ಭರವಸೆ ನೀಡಿದ್ದಾರೆ' ಎಂದರು.

ಮುಖಂಡರಾದ ಚಾನಾಳ್ ಶೇಖರ್, ವೀರೇಶ್, ಸಿದ್ಮಲ್ ಮಂಜುನಾಥ್ ಉಪಸ್ಥಿತರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.