ADVERTISEMENT

ಸಂಡೂರು: ಹಳೇ ಅನ್ವೇಷಣೆ ವರದಿ ಆಧರಿಸಿ ಅದಿರು ಬ್ಲಾಕ್‌ ಹರಾಜು

ಖನಿಜಾನ್ವೇಷಣೆಗೆ ಬೇರೆಡೆಯಿಂದ ವರದಿ ಪಡೆದ ಗಣಿ ಇಲಾಖೆ

​ಪ್ರಜಾವಾಣಿ ವಾರ್ತೆ
Published 1 ಮೇ 2025, 23:56 IST
Last Updated 1 ಮೇ 2025, 23:56 IST
   

ಬಳ್ಳಾರಿ: 55 ವರ್ಷಗಳ ಹಿಂದೆ ನಡೆಸಿದ ಖನಿಜ ಅನ್ವೇಷಣೆಯ ಆಧಾರದ ಮೇಲೆ ಬೇರೆ ಸಂಸ್ಥೆಯೊಂದರಿಂದ ವರದಿ ಪಡೆದು ಗಣಿ ಮತ್ತು ಭೂ ವಿಜ್ಞಾನ ಇಲಾಖೆಯು ಬಳ್ಳಾರಿ ತಾಲ್ಲೂಕಿನ ಸಂಡೂರಿನಲ್ಲಿ ದಟ್ಟಾರಣ್ಯದ (ವರ್ಜಿನ್‌ ಅರಣ್ಯ) ಅದಿರು ಬ್ಲಾಕ್‌ ಅನ್ನು ಹರಾಜು ಹಾಕಿರುವುದು ಗೊತ್ತಾಗಿದೆ. 

ಹೋರಾಟಗಾರರೊಬ್ಬರು ಮಾಹಿತಿ ಹಕ್ಕು (ಆರ್‌ಟಿಐ) ಕಾಯ್ದೆಯಡಿ ಕೇಳಿದ ಮಾಹಿತಿಗೆ ಗಣಿ ಮತ್ತು ಭೂ ವಿಜ್ಞಾನ ಇಲಾಖೆ ನೀಡಿದ ವಿವರಣೆಯಿಂದ ಈ ವಿಷಯ ಗೊತ್ತಾಗಿದೆ.

ಸಂಡೂರು ತಾಲೂಕಿನಲ್ಲಿ ಒಟ್ಟು 7 ಅದಿರು ಬ್ಲಾಕ್‌ಗಳನ್ನು ಗಣಿ ಮತ್ತು ಭೂ ವಿಜ್ಞಾನ ಇಲಾಖೆಯು ಈಚೆಗೆ ಹರಾಜು ಹಾಕಿತ್ತು. ಈ ಪೈಕಿ 217.453 (88 ಹೆಕ್ಟೇರ್‌) ಎಕರೆ ವ್ಯಾಪ್ತಿಯ ‘ಕುಮಾರಸ್ವಾಮಿ ಐರನ್‌ ಓರ್‌’ ಹೆಸರಿನ ಅದಿರು ಬ್ಲಾಕ್‌ ದಟ್ಟಾರಣ್ಯವಾಗಿತ್ತು. ಆರ್‌ಬಿಎಸ್‌ಎಸ್‌ಎನ್‌ ಎಂಬ ಸಂಸ್ಥೆ ಅತ್ಯಧಿಕ ಪ್ರೀಮಿಯಮ್‌ (ಶೇ. 200) ನೀಡಿ ಈ ಬ್ಲಾಕ್‌ ಅನ್ನು ತನ್ನದಾಗಿಸಿಕೊಂಡಿತ್ತು. 

ADVERTISEMENT

ಈ ಬ್ಲಾಕ್‌ನಲ್ಲಿ ‘ಮಿನರಲ್ ಎಕ್ಸ್‌ಪ್ಲೋರೇಷನ್‌ ಅಂಡ್ ಕನ್ಸಲ್ಟೆನ್ಸಿ ಲಿಮಿಟೆಡ್ (ಎಂಇಸಿಎಲ್‌)’ ಎಂಬ ಸಂಸ್ಥೆ ಖನಿಜಾನ್ವೇಷಣೆ ಮಾಡಿದೆ ಎಂದು ಟೆಂಡರ್‌ ದಾಖಲೆಗಳಲ್ಲಿ ಹೇಳಲಾಗಿತ್ತು. ಈ ಸಂಸ್ಥೆ ಖನಿಜಾನ್ವೇಷಣೆ ನಡೆಸಿದ್ದು ಯಾವಾಗ ಎಂದು ಆರ್‌ಟಿಐ ಅಡಿ ಹೋರಾಟಗಾರರು ಪ್ರಶ್ನೆ ಮಾಡಿದ್ದರು.  

ಇದಕ್ಕೆ ಉತ್ತರಿಸಿರುವ ಗಣಿ ಮತ್ತು ಭೂ ವಿಜ್ಞಾನ ಇಲಾಖೆ ‘ಕುಮಾರಸ್ವಾಮಿ ಐರನ್ ಓರ್ ಬ್ಲಾಕ್‌ನಲ್ಲಿ ಹೊಸದಾಗಿ ಯಾವುದೇ ಅನ್ವೇಷಣೆ ಕೈಗೊಂಡಿಲ್ಲ. ಈ ಪ್ರದೇಶದಲ್ಲಿ ಭಾರತೀಯ ಭೂವೈಜ್ಞಾನಿಕ ಸಂಸ್ಥೆ 1968-72ನೇ ಸಾಲಿನಲ್ಲಿ ಹಾಗೂ ರಾಷ್ಟ್ರೀಯ ಖನಿಜ ಅಭಿವೃದ್ಧಿ ನಿಗಮ (ಎನ್‌ಎಂಡಿಸಿ) 1973-81ನೇ ಸಾಲಿನಲ್ಲಿ ಖನಿಜಾನ್ವೇಷಣೆ ನಡೆಸಿದ್ದು, ಅದರ ವಿವರಗಳನ್ನು ಪರಿಗಣಿಸಿ ಎಂಇಸಿಎಲ್‌ ಸಂಸ್ಥೆಯು ಖನಿಜಾನ್ವೇಷಣೆ ವರದಿಯನ್ನು ಸಿದ್ಧಪಡಿಸಿದೆ. ಈ ವರದಿ ಅನ್ವಯ ಬ್ಲಾಕ್‌ಗಳನ್ನು ಹರಾಜಿಗೆ ಹಾಕಲಾಗಿದೆ. ಹರಾಜು ಪ್ರಕ್ರಿಯೆಯ ಅನುಮೋದನೆಯು ಸರ್ಕಾರದ ಹಂತದಲ್ಲಿ ಬಾಕಿ ಇರುತ್ತದೆ’ ಎಂದು ಉತ್ತರ ನೀಡಿದೆ. 

ಖನಿಜಾನ್ವೇಷಣೆ ಏಕೆ ಮುಖ್ಯ? 

ನಿಯಮಗಳ ಪ್ರಕಾರ, ಗಣಿ ಬ್ಲಾಕ್‌ವೊಂದನ್ನು ಹರಾಜಿಗಿಡಬೇಕಿದ್ದರೆ ನಿರ್ದಿಷ್ಟ ಪ್ರದೇಶದಲ್ಲಿ ಖನಿಜಾನ್ವೇಷಣೆ ಆಗಿರಲೇ ಬೇಕು. ಇದರ ಆಧಾರದಲ್ಲೇ ಗಣಿ ಮತ್ತು ಭೂ ವಿಜ್ಞಾನ ಇಲಾಖೆ ಪ್ರೀಮಿಯಂ ನಿಗದಿ ಮಾಡುತ್ತದೆ. ಬಳಿಕ ಗಣಿಗಾರಿಕೆಗೆ ಯೋಜನೆ ಸಿದ್ಧವಾಗುತ್ತದೆ. ಸದ್ಯ ‘ಕುಮಾರಸ್ವಾಮಿ ಐರನ್‌ ಓರ್‌ ಬ್ಲಾಕ್‌‘ ದಟ್ಟಾರಣ್ಯವಾದ ಕಾರಣ, ಖನಿಜ ಅನ್ವೇಷಣೆ ಮಾಡಬೇಕಿದ್ದರೆ ಮೊದಲಿಗೆ ಅರಣ್ಯ ಇಲಾಖೆಯ ಅನುಮತಿ ಬೇಕು. ಈ ಪ್ರಕ್ರಿಯೆಗೆ ಸಾಕಷ್ಟು ಸಮಯ ಹಿಡಿಯುತ್ತದೆ. ಖನಿಜಾನ್ವೇಷಣೆಯ ಪ್ರಸ್ತಾವವನ್ನು ಅರಣ್ಯ ಇಲಾಖೆ ತಳ್ಳಿ ಹಾಕುವ ಸಾಧ್ಯತೆಗಳೂ ಇರುತ್ತವೆ. ಹದ್ದಿನಪಡೆ ಎಂಬಲ್ಲಿ ಕೆಐಒಸಿಎಲ್‌ ನಡೆಸಲು ಉದ್ದೇಶಿಸಿದ್ದ ಖನಿಜ ಅನ್ವೇಷಣೆ ಪ್ರಸ್ತಾವನೆಯನ್ನು ಅರಣ್ಯ ಇಲಾಖೆ ಕಳೆದ ವರ್ಷ ತಳ್ಳಿಹಾಕಿತ್ತು.  ಇದೆಲ್ಲವನ್ನೂ ತಪ್ಪಿಸಿಕೊಳ್ಳಲು ಗಣಿ ಮತ್ತು ಭೂ ವಿಜ್ಞಾನ ಇಲಾಖೆ ಹಳೇ ಅನ್ವೇಷಣೆ ಮೇಲೆ ಹೊಸ ವರದಿ ಪಡೆದು ಹರಾಜು ಹಾಕಿದೆ’ ಎಂಬ ಆರೋಪ ಕೇಳಿ ಬಂದಿದೆ.  

‘ಕನಿಷ್ಠ 55 ವರ್ಷಗಳ ಹಿಂದಿನ ಅನ್ವೇಷಣೆಯೂ ಸಮಕಾಲಿನ ನೀತಿ, ಮಾನದಂಡ, ತಂತ್ರಜ್ಞಾನ, ಪದ್ಧತಿಗಳ ಆಧಾರದಲ್ಲಿ ನಡೆದಿರುತ್ತದೆ. ಇಂದಿಗೆ ಅದು ಪ್ರಸ್ತುತವಾಗಲಾರದು. ಸಂಡೂರಿನಲ್ಲಿ ಗಣಿ ಬ್ಲಾಕ್‌ಗಳನ್ನು ತೆಗೆದುಕೊಂಡ ಹಲವು ಕಂಪನಿಗಳು ಅದಿರು ಸಿಗದೇ ಕಂಗಾಲಾಗಿ, ಗಣಿ ಬ್ಲಾಕ್‌ ಅನ್ನೇ ಹಿಂದಕ್ಕೆ ಮರಳಿಸಿದ ಉದಾಹರಣೆಗಳಿವೆ. ಒಂದು ವೇಳೆ ಹಳೇ ಖನಿಜಾನ್ವೇಷಣೆ ಆಧಾರದಲ್ಲಿ ಇಲ್ಲಿಯೂ ಗಣಿಗಾರಿಕೆ ನಡೆದು ಅದಿರು ಸಿಗದಿದ್ದರೆ ‌ಅರಣ್ಯ, ಬಂಡವಾಳ ನಾಶಕ್ಕೆ ಕಾರಣವಾಗುತ್ತದೆ. ಮತ್ತೊಂದು ಕಡೆ ಖಾಸಗಿ ಕಂಪನಿ ನಷ್ಟಕ್ಕೆ ಸಿಲುಕುವುದು ಖಚಿತ’ ಎಂದು ಕೆಲ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ. 

ಇನ್ನು ಈ ಬಗ್ಗೆ ಸ್ಪಷ್ಟನೆ ಪಡೆಯಲು ಗಣಿ ಮತ್ತು ಭೂ ವಿಜ್ಞಾನ ಇಲಾಖೆಯ ನಿರ್ದೇಶಕರನ್ನು ಸಂಪರ್ಕಿಸಲಾಯಿತು. ಅವರು ಪ್ರತಿಕ್ರಿಯೆಗೆ ಲಭ್ಯವಾಗಲಿಲ್ಲ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.