ADVERTISEMENT

‘ಅದಿರು ಉತ್ಪಾದನೆ 20 ದಶಲಕ್ಷ ಟನ್ ಇರಲಿ’: ಸಿಇಸಿ ವರದಿಗೆ ಆಕ್ಷೇಪ

ಮಿತಿ ಹೆಚ್ಚಿಸುವ ಸಿಇಸಿ ವರದಿಗೆ ಮೇಲುಸ್ತುವಾರಿ ಪ್ರಾಧಿಕಾರ ಆಕ್ಷೇಪ

ಆರ್. ಹರಿಶಂಕರ್
Published 4 ಮೇ 2025, 20:45 IST
Last Updated 4 ಮೇ 2025, 20:45 IST
<div class="paragraphs"><p>ಸಿಇಸಿ ವರದಿಗೆ ಆಕ್ಷೇಪ: ‘ಅದಿರು ಉತ್ಪಾದನೆ 20 ದಶಲಕ್ಷ ಟನ್ ಇರಲಿ’</p></div>

ಸಿಇಸಿ ವರದಿಗೆ ಆಕ್ಷೇಪ: ‘ಅದಿರು ಉತ್ಪಾದನೆ 20 ದಶಲಕ್ಷ ಟನ್ ಇರಲಿ’

   

ಬಳ್ಳಾರಿ: ರಾಜ್ಯದ ಎಲ್ಲಾ ಕಬ್ಬಿಣದ ಅದಿರು ಗಣಿ ಗುತ್ತಿಗೆಗಳಿಗೆ  57 ದಶಲಕ್ಷ ಟನ್(ಎಂಟಿ)ನ ಏಕೀಕೃತ ವಾರ್ಷಿಕ ಉತ್ಪಾದನಾ ಮಿತಿಯನ್ನು ನಿಗದಿಪಡಿಸುವ ಕೇಂದ್ರದ ಉನ್ನತಾಧಿಕಾರ ಸಮಿತಿ (ಸಿಇಸಿ)ಯ ಶಿಫಾರಸಿಗೆ ಮೇಲುಸ್ತುವಾರಿ ಪ್ರಾಧಿಕಾರ ಆಕ್ಷೇಪ ವ್ಯಕ್ತಪಡಿಸಿದೆ. ಮಿತಿಯನ್ನು 20 ಎಂಟಿಗೆ ಇಳಿಸಬೇಕು ಎಂದು ಪ್ರತಿಪಾದಿಸಿದೆ.  

ರಾಜ್ಯದಲ್ಲಿ ಕಬ್ಬಿಣದ ಅದಿರಿನ ‘ಒಪ್ಪಿತ ವಾರ್ಷಿಕ ಗರಿಷ್ಠ ಉತ್ಪಾದನೆ (ಎಂಪಿಎಪಿ)’ ಮಿತಿ ಆರಂಭದಲ್ಲಿ 30 ಎಂಟಿ ಇತ್ತು. ಅದು 50 ಎಂಟಿಗೆ ಏರಿದೆ. ಸದ್ಯ 57 ಎಂಟಿಗೆ ಹೆಚ್ಚಿಸಲು ಸಿಇಸಿ ಸುಪ್ರೀಂ ಕೋರ್ಟ್‌ಗೆ ವರದಿ ಸಲ್ಲಿಸಿದೆ.  ಇದನ್ನು ಆಕ್ಷೇಪಿಸಿರುವ ಮೇಲುಸ್ತುವಾರಿ ಪ್ರಾಧಿಕಾರ ಹಲವು ಪ್ರಮುಖ ಅಂಶಗಳನ್ನು ಕಾರಣವಾಗಿ ನೀಡಿದೆ.  

ADVERTISEMENT

ಗಣಿ ಅಕ್ರಮ ಉತ್ತುಂಗದಲ್ಲಿದ್ದ 2007–08ರಲ್ಲಿ ಉತ್ಪಾದನೆಯಾದ ಅದಿರಿನ ಪ್ರಮಾಣವೇ 49 ದಶಲಕ್ಷ ಟನ್ ಆಗಿತ್ತು. ಈಗಿನ ಅತ್ಯಧಿಕ ಉತ್ಪಾದನೆ 43 ಎಂಟಿ (2023–24) ಆಗಿದೆ. ಇದಕ್ಕೂ ಮೇಲೆ ಹೋದರೆ ಪರಿಸ್ಥಿತಿ ಬಿಗಡಾಯಿಸಲಿದೆ. 

‘ಅಕ್ರಮ ಗಣಿಗಾರಿಕೆ ಕಾಲದಲ್ಲಿ ರಸ್ತೆ ಜಾಲಕ್ಕೆ ಆಗಿದ್ದ ಹಾನಿ ಇದುವರೆಗೆ ಸರಿಹೋಗಿಲ್ಲ. ಈಗಂತೂ ಪರಿಸ್ಥಿತಿ ಇನ್ನೂ ಹದಗೆಟ್ಟಿದೆ. ಗಣಿಗಳಿರುವ ಪ್ರದೇಶಗಳಲ್ಲಿ ನಿತ್ಯ 5,500 ಲಾರಿಗಳು ಓಡಾಡುತ್ತಿವೆ. ಉತ್ಪಾದನೆ ಏರಿದರೆ ಲಾರಿಗಳ ಸಂಚಾರ ಇನ್ನೂ ಹೆಚ್ಚಗಲಿದೆ’ ಎಂದು ಆತಂಕ ವ್ಯಕ್ತಪಡಿಸಿದೆ.   

‘ದೊಡ್ಡ ಗಣಿಗಳು ಕನ್ವೇಯರ್‌ ಬೆಲ್ಟ್‌ ಅಳವಡಿಸಿಕೊಳ್ಳಬೇಕೆಂಬ ಸುಪ್ರೀಂ ಕೋರ್ಟ್‌ನ ಆದೇಶ ಇನ್ನೂ ಕಾರ್ಯರೂಪಕ್ಕೆ ಬಂದಿಲ್ಲ. ರೈಲ್ವೆ ಸೈಡಿಂಗ್‌ಗಳನ್ನು ನಿರ್ಮಿಸುವ ಕೆಎಂಇಆರ್‌ಸಿ ಕಾರ್ಯ ಇನ್ನೂ ಪೂರ್ಣಗೊಂಡಿಲ್ಲ. ಗಣಿ ಬಾಧಿತ ಪ್ರದೇಶಗಳಲ್ಲಿ ಆರೋಗ್ಯ, ಶಿಕ್ಷಣ, ಮೂಲಸೌಕರ್ಯ ಒದಗಿಸುವ ಕ್ರಮಗಲಳು ಇನ್ನೂ ಆರಂಭಿಕ ಹಂತದಲ್ಲಿವೆ. ಹೀಗಿರುವಾಗಲೇ ಮಿತಿ ಏರಿಸುವುದು ತರವಲ್ಲ’ ಎಂದು ಹೇಳಿದೆ.   

‘ರಾಜ್ಯ ಮಾಲಿನ್ಯ ನಿಯಂತ್ರಣಾ ಮಂಡಳಿಯ ವರದಿಯಂತೆ ಗಣಿಗಾರಿಕೆ ಪ್ರದೇಶಗಳಲ್ಲಿ ಮಾಲಿನ್ಯ ಹೆಚ್ಚಾಗಿದೆ’ ಎಂದು ಆತಂಕ ವ್ಯಕ್ತಪಡಿಸಿದೆ. 

ಮುಂದಿನ ಪೀಳಿಗೆಗೆ ಸಂಪನ್ಮೂಲ ಉಳಿಯಲಿ

‘ರಾಜ್ಯದಲ್ಲಿ ಸದ್ಯ ಈಗ ಲಭ್ಯವಿರುವುದು 1,023 ದಶಲಕ್ಷ ಟನ್ ಅದಿರು ದಾಸ್ತಾನು ಮಾತ್ರ’ ಎಂದು ಮೇಲುಸ್ತುವಾರಿ ಪ್ರಾಧಿಕಾರ ಹೇಳಿದೆ. ಅದನ್ನು ವಾರ್ಷಿಕ 50 ಎಂಟಿಯಂತೆ ಹೊರ ತೆಗೆದರೆ ಕೇವಲ 20 ವರ್ಷಗಳಲ್ಲಿ ಬರಿದಾಗಲಿದೆ. ಸದ್ಯ ಈಗಿನ ಕಾನೂನುಗಳ ಪ್ರಕಾರ ಗಣಿಗಳ ಗುತ್ತಿಗೆ ಅವಧಿಯೇ 50 ವರ್ಷ. ಲಭ್ಯವಿರುವ ಅದಿರು ದಾಸ್ತಾನನ್ನು 50 ವರ್ಷಗಳಿಗೆ ವಿಭಾಗಿಸಬೇಕು. ಅದರಂತೆ ನೋಡಿದರೆ ವಾರ್ಷಿಕ ಅದಿರು ಉತ್ಪಾದನೆಯ ಒಟ್ಟಾರೆ ಪ್ರಮಾಣ 20.46 ಎಂಎಂಟಿ ಆಗಲಿದೆ. ಆದ್ದರಿಂದ ಎಂಪಿಎಪಿಯನ್ನು ಈಗಿನ 50 ಎಂಟಿಗೆ ಬದಲಾಗಿದೆ 20ಎಂಟಿಗೆ ಸೀಮಿತಗೊಳಿಸಬೇಕು ಎಂದು ಪ್ರತಿಪಾದಿಸಿದೆ.  ಹೀಗೆ ಮಾಡಿದರೆ ಮಾತ್ರ ಮುಂದಿನ ಪೀಳಿಗೆಗೆ ಅದಿರು ಉಳಿಸಲು ಸಾಧ್ಯ’ ಎಂದು ಒತ್ತಾಯಿಸಿದೆ.  

ದುಡ್ಡು ಮಾಡುವ ಆಸೆ:  ಒಂದು ಟನ್‌ ಅದಿರಿನ ಮೇಲೆ ಗಣಿ ಮಾಲೀಕರಿಗೆ ₹3 ಸಾವಿರ ಲಾಭ ಸಿಗುತ್ತಿದೆ. ತಮ್ಮ ಗಣಿಗಳಲ್ಲಿರುವ ಅದಿರಿನ ದಾಸ್ತಾನನ್ನು ಆದಷ್ಟು ಬೇಗ ಹೊರ ತೆಗೆದು, ಲಾಭ ಮಾಡಿಕೊಳ್ಳಬೇಕು. ಅದಕ್ಕೆ 50 ವರ್ಷ ಕಾಯಬಾರದು ಎಂಬುದು ಮಾಲೀಕರ ನಿರೀಕ್ಷೆಯಾಗಿದೆ. ಆದ್ದರಿಂದಲೇ ಸದ್ಯದ ಎಂಪಿಎಪಿಯನ್ನು ಹೆಚ್ಚಿಸಬೇಕು ಎಂದು ಗಣಿ ಮಾಲೀಕರು ಆಗ್ರಹಿಸುತ್ತಿದ್ದಾರೆ ಎಂದು ಮೇಲುಸ್ತುವಾರಿ ಪ್ರಾಧಿಕಾರ ಹೇಳಿದೆ.

ಮೇಲುಸ್ತುವಾರಿ ಪ್ರಾಧಿಕಾರ ಎಂದರೇನು?  

ಅಕ್ರಮ ಗಣಿಗಾರಿಕೆಯಿಂದ ನಾಶವಾದ ಪರಿಸರದ ಪುನಶ್ಚೇತನಕ್ಕೆ  'ಗಣಿಗಾರಿಕೆ ಪರಿಣಾಮ ವಲಯಕ್ಕಾಗಿ ಸಮಗ್ರ ಪರಿಸರ ಯೋಜನೆ (ಸಿಇಪಿಎಂಐಝಡ್‌)' ಅನುಷ್ಠಾನಕ್ಕೆ ತರಲು ಕರ್ನಾಟಕ ಗಣಿ ಪರಿಸರ ಪುನಶ್ಚೇತನ ನಿಗಮ (ಕೆಎಂಇಆರ್‌ಸಿ)ವನ್ನು ರಾಜ್ಯ ಸರ್ಕಾರ ಸುಪ್ರೀಂ ಕೋರ್ಟ್‌ ಸೂಚನೆ ಮೇರೆಗೆ ಸ್ಥಾಪಿಸಿದೆ. ಇದಕ್ಕಾಗಿ ಮೇಲುಸ್ತುವಾರಿ  ಪ್ರಾಧಿಕಾರವನ್ನು ಕೋರ್ಟ್‌ ರಚಿಸಿದೆ. ಅದರ ಜವಾಬ್ದಾರಿಯನ್ನು ನ್ಯಾಯಮೂರ್ತಿ ಸುದರ್ಶನ್‌ ರೆಡ್ಡಿ ವಹಿಸಿಕೊಂಡಿದ್ದಾರೆ. ಹೀಗಾಗಿ ಅದಿರು ಉತ್ಪಾದನಾ ಮಿತಿ ಹೆಚ್ಚಳದ ವಿಷಯದಲ್ಲಿ ಪ್ರಾಧಿಕಾರದ ಅಭಿಪ್ರಾಯ ಅತ್ಯಂತ ನಿರ್ಣಾಯಕವಾಗಲಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.