ಶ್ರೀರಂಗಪಟ್ಟಣ: ಮುಡಾ ನಿವೇಶನ ವಿಚಾರದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯಅವರ ವಿರುದ್ಧ ಪ್ರಾಸಿಕ್ಯೂಷನ್‌ಗೆ ಅವಕಾಶ ನೀಡಿರುವ ರಾಜ್ಯಪಾಲರ ಕ್ರಮವನ್ನು ಖಂಡಿಸಿ ಪಟ್ಟಣದಲ್ಲಿ ಕುರುಬರ ಸಂಘದ ಪದಾಧಿಕಾರಿಗಳು ಹಾಗೂ ಕಾರ್ಯಕರ್ತರು ಶನಿವಾರ ರಾಜ್ಯಪಾಲರ ಭಾವಚಿತ್ರಕ್ಕೆ ಮೊಟ್ಟೆ ಒಡೆದು ಆಕ್ರೋಶ ವ್ಯಕ್ತಪಡಿಸಿದರು.
ಇಲ್ಲಿನ ಬೆಂಗಳೂರು– ಮೈಸೂರು ಹೆದ್ದಾರಿ ವೃತ್ತದಲ್ಲಿ ರಾಜ್ಯಪಾಲ ಥಾವರಚಂದ್ ಗೆಹ್ಲೋಟ್ ಅವರ ಭಾವಚಿತ್ರ ಇದ್ದ ಬ್ಯಾನರ್ ಅನ್ನು ನೆಲಕ್ಕೆ ಹಾಕಿ ಅದರ ಮೇಲೆ ಹತ್ತಾರು ಮೊಟ್ಟೆಗಳನ್ನು ಒಡೆದರು. ‘ಗವರ್ನರ್ ಗೋ ಬ್ಯಾಕ್...., ‘ಗೆಹ್ಲೋಟ್ ಗೋ ಬ್ಯಾಕ್’ ಎಂಬ ಘೋಷಣೆಗಳನ್ನು ಕೂಗಿದರು. ಮಾನವ ಸರಪಳಿ ರಚಿಸಿ ಕೇಂದ್ರ ಸರ್ಕಾರದ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು. ಪ್ರತಿಭಟನೆಯಿಂದಾಗಿ ಹೆದ್ದಾರಿಯಲ್ಲಿ ಕೆಲಕಾಲ ವಾಹನಗಳ ಸಂಚಾರಕ್ಕೆ ಅಡಚಣೆ ಉಂಟಾಯಿತು.
ಕುರುಬರ ಸಂಘದ ತಾಲ್ಲೂಕು ಘಟಕದ ಅಧ್ಯಕ್ಷ ಹಂಪಾಪುರ ಕೃಷ್ಣ, ಜಿಲ್ಲಾ ಘಟಕದ ಪದಾಧಿಕಾರಿಗಳಾದ ಎಂ. ಲೋಕೇಶ್, ಶಿವಮಲ್ಲು, ಭಾಸ್ಕರ್, ಚನ್ನೇಗೌಡ, ಬಿದರಹಳ್ಳಿಹುಂಡಿ ನಾಗರಾಜು, ಟೈಲರ್ ಮಂಜು, ಸಿದ್ದರಾಜು, ಹರೀಶ್, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಎನ್. ಪ್ರಕಾಶ್, ಪಕ್ಷದ ನಗರ ಘಟಕದ ಅಧ್ಯಕ್ಷ ಎಂ. ಸುರೇಶ್, ಅಪೆಕ್ಸ್ ಬ್ಯಾಂಕ್ ಮಾಜಿ ನಿರ್ದೇಶಕ ಅರಕೆರೆ ಶಿವಯ್ಯ, ಗಂಜಾಂ ರವಿಚಂದ್ರ, ಎಂ. ಚಂದ್ರಶೇಖರ್, ಗೂಳಯ್ಯ, ಸಲೀಂ ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.