ADVERTISEMENT

ಘೋರ್ಪಡೆ ‘ಹೊರಗಿನವರು’ ಎಂಬ ಟೀಕೆಗೆ ಕಾಂಗ್ರೆಸ್‌ ತಿರುಗೇಟು

ಘೋರ್ಪಡೆ ಸಂಡೂರಿನವರಾದರೆ, ಆನಂದ್‌ ಸಿಂಗ್‌ ಝಾನ್ಸಿಯವರು–ರಾಯರಡ್ಡಿ

​ಪ್ರಜಾವಾಣಿ ವಾರ್ತೆ
Published 22 ನವೆಂಬರ್ 2019, 14:45 IST
Last Updated 22 ನವೆಂಬರ್ 2019, 14:45 IST
ಕಾಂಗ್ರೆಸ್‌ ಕಾರ್ಯಕರ್ತರ ಸಭೆ ಉದ್ದೇಶಿಸಿ ಕೆ.ಪಿ.ಸಿ.ಸಿ. ಮಾಧ್ಯಮ ವಕ್ತಾರ ವಿ.ಎಸ್‌. ಉಗ್ರಪ್ಪ ಮಾತನಾಡಿದರು
ಕಾಂಗ್ರೆಸ್‌ ಕಾರ್ಯಕರ್ತರ ಸಭೆ ಉದ್ದೇಶಿಸಿ ಕೆ.ಪಿ.ಸಿ.ಸಿ. ಮಾಧ್ಯಮ ವಕ್ತಾರ ವಿ.ಎಸ್‌. ಉಗ್ರಪ್ಪ ಮಾತನಾಡಿದರು   

ಹೊಸಪೇಟೆ: ‘ವೆಂಕಟರಾವ ಘೋರ್ಪಡೆಯವರು ಕ್ಷೇತ್ರದ ‘ಹೊರಗಿನವರು’ ಎಂದು ಆರೋಪಿಸುತ್ತಿರುವ ಬಿಜೆಪಿ ಮುಖಂಡರು, ಆನಂದ್‌ ಸಿಂಗ್‌ ಎಲ್ಲಿನವರು ಎಂಬುದನ್ನು ಸ್ಪಷ್ಟಪಡಿಸಲಿ’ ಎಂದು ಕಾಂಗ್ರೆಸ್‌ ಮುಖಂಡರು ಪ್ರಶ್ನಿಸುವ ಮೂಲಕ ತಿರುಗೇಟು ನೀಡಿದ್ದಾರೆ.

ವಿಜಯನಗರ ಕ್ಷೇತ್ರದ ಉಪಚುನಾವಣೆ ನಿಮಿತ್ತ ಶುಕ್ರವಾರ ಸಂಜೆ ನಗರದಲ್ಲಿ ಹಮ್ಮಿಕೊಂಡಿದ್ದ ಪ್ರಚಾರ ಸಭೆಯಲ್ಲಿ ಮಾತನಾಡಿದ ಕಾಂಗ್ರೆಸ್‌ ಚುನಾವಣಾ ಉಸ್ತುವಾರಿ ಬಸವರಾಜ ರಾಯರಡ್ಡಿ, ‘ಘೋರ್ಪಡೆಯವರು ಸಮೀಪದಲ್ಲೇ ಇರುವ ಸಂಡೂರಿನವರು. ಆನಂದ್‌ ಸಿಂಗ್‌ ಅವರು ದೂರದ ಝಾನ್ಸಿಯವರು’ ಎಂದು ಹೇಳಿದರು.

‘ಅಭಿವೃದ್ಧಿ ವಿಷಯಗಳನ್ನು ಚುನಾವಣೆಯಲ್ಲಿ ಪ್ರಚಾರ ಮಾಡುವುದರ ಬದಲು ಬಿಜೆಪಿಯವರು, ಘೋರ್ಪಡೆಯವರು ಹೊರಗಿನವರು ಎಂದು ಮಾತಾಡುವುದರಲ್ಲಿ ಯಾವುದೇ ಅರ್ಥವಿಲ್ಲ’ ಎಂದರು.

ADVERTISEMENT

ಶಾಸಕ ಪಿ.ಟಿ. ಪರಮೇಶ್ವರ ನಾಯ್ಕ ಮಾತನಾಡಿ, ‘ಆನಂದ್‌ ಸಿಂಗ್‌ ಮೂಲತಃ ಝಾನ್ಸಿಯವರು. ಅಲ್ಲಿಂದ ಬಂದು ಕಂಪ್ಲಿಯಲ್ಲಿ ವ್ಯವಹಾರ ಮಾಡಿಕೊಂಡು ಇದ್ದರು. ನಂತರ ಹೊಸಪೇಟೆಗೆ ವಲಸೆ ಬಂದರು. ಶಾಸಕರಾದ ನಂತರ ಕ್ಷೇತ್ರದಲ್ಲೇ ನೆಲೆಸಿದ್ದಾರೆ’ ಎಂದು ತಿಳಿಸಿದರು.

‘ಘೋರ್ಪಡೆಯವರ ಮನೆತನ ಇಡೀ ಜಿಲ್ಲೆಗೆ ದೊಡ್ಡ ಕೊಡುಗೆ ನೀಡಿದೆ. ಈ ಹಿಂದೆ ವಿಜಯನಗರ ಕ್ಷೇತ್ರದ ಅನೇಕ ಗ್ರಾಮಗಳು ಸಂಡೂರು ವ್ಯಾಪ್ತಿಗೆ ಸೇರಿದ್ದವು. ಅಷ್ಟೇ ಅಲ್ಲ, ಘೋರ್ಪಡೆಯವರು ಜಿಲ್ಲಾ ಪಂಚಾಯಿತಿ ಅಧ್ಯಕ್ಷರಾಗಿ ಕೆಲಸ ನಿರ್ವಹಿಸಿದ್ದಾರೆ. ಇಡೀ ಜಿಲ್ಲೆಯ ಜನರೊಂದಿಗೆ ಉತ್ತಮ ಸಂಬಂಧ ಹೊಂದಿದ್ದಾರೆ. ಅವರು ಹೊರಗಿನವರು ಎಂದು ಟೀಕಿಸುವುದರಲ್ಲಿ ಅರ್ಥವಿಲ್ಲ’ ಎಂದು ಹೇಳಿದರು.

ಕಾಂಗ್ರೆಸ್‌ ಅಭ್ಯರ್ಥಿ ವೆಂಕಟರಾವ ಘೋರ್ಪಡೆ ಮಾತನಾಡಿ, ‘ಮುಂದಿನ ದಿನಗಳಲ್ಲಿ ಕ್ಷೇತ್ರದಲ್ಲೇ ಇರುವೆ. 24 ತಾಸು ಜನರ ಮಧ್ಯೆ ಇದ್ದು ಅವರ ಸಮಸ್ಯೆಗಳನ್ನು ಬಗೆಹರಿಸಲು ಶ್ರಮಿಸುವೆ’ ಎಂದು ಭರವಸೆ ನೀಡಿದರು.

‘ನನ್ನನ್ನು ಹೊರಗಿನವರು ಎಂದು ಬಿಂಬಿಸಲಾಗುತ್ತಿದೆ. ನಮ್ಮ ಸ್ಮಯೊರ್‌ ಕಾರ್ಖಾನೆ ಹಾಗೂ ನಮ್ಮಣ್ಣನ ಮನೆ ನಗರದಲ್ಲಿಯೇ ಇದೆ. ನಾನು ಕೂಡ ಮುಂದಿನ ದಿನಗಳಲ್ಲಿ ಇಲ್ಲಿಯೇ ಮನೆ ಮಾಡಿ ಕ್ಷೇತ್ರದ ಜನರ ಸೇವೆ ಮಾಡಲು ಸಿದ್ಧ. ಅದರ ಬಗ್ಗೆ ಯಾವುದೇ ಅನುಮಾನ ಬೇಡ’ ಎಂದು ಸ್ಪಷ್ಟಪಡಿಸಿದರು.

ಕೆ.ಪಿ.ಸಿ.ಸಿ. ವಕ್ತಾರ ವಿ.ಎಸ್‌. ಉಗ್ರಪ್ಪ ಮಾತನಾಡಿ, ‘ಕೇಂದ್ರದ ನರೇಂದ್ರ ಮೋದಿ ಹಾಗೂ ರಾಜ್ಯದಲ್ಲಿ ಯಡಿಯೂರಪ್ಪ ನೇತೃತ್ವದ ಸರ್ಕಾರಗಳೆರಡೂ ಜನರ ಆಶೋತ್ತರಗಳನ್ನು ಈಡೇರಿಸುವಲ್ಲಿ ವಿಫಲವಾಗಿವೆ’ ಎಂದು ಟೀಕಿಸಿದರು.

ವಿಧಾನ ಪರಿಷತ್ ಸದಸ್ಯ ಕೆ.ಸಿ.ಕೊಂಡಯ್ಯ ಮಾತನಾಡಿ, ‘ಈ ಉಪಚುನಾವಣೆಯ ಅವಶ್ಯಕತೆ ಇರಲಿಲ್ಲ. ಆದರೆ, ಆನಂದ್‌ ಸಿಂಗ್ ರಾಜೀನಾಮೆಯಿಂದ ಚುನಾವಣೆ ನೋಡುವಂತಾಗಿದೆ. ಅವರ ತಪ್ಪುಗಳನ್ನು ಎತ್ತಿ ತೋರಿಸುವ ಮೂಲಕ ಮತದಾರರ ಮನವೊಲಿಸಬೇಕು. ಪಕ್ಷಾಂತರಿ ಸಿಂಗ್‌ಗೆ ಪಾಠ ಕಲಿಸಬೇಕು’ ಎಂದರು.

ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಮೊಹಮ್ಮದ್‌ ಇಮಾಮ್ ನಿಯಾಜಿ, ವಿಧಾನ ಪರಿಷತ್‌ ಸದಸ್ಯ ಅಲ್ಲಂ ವೀರಭದ್ರಪ್ಪ, ಜಿಲ್ಲಾ ಪಂಚಾಯಿತಿ ಸದಸ್ಯ ಪ್ರವೀಣ್ ಸಿಂಗ್‌, ಮುಖಂಡರಾದ ಸೂರ್ಯನಾರಾಯಣ ರೆಡ್ಡಿ, ಗುಜ್ಜಲ ರಘು, ಗುಜ್ಜಲ್‌ ನಾಗರಾಜ, ಆಂಜನೇಯಲು, ತಾರಿಹಳ್ಳಿ ವೆಂಕಟೇಶ, ಫಹೀಮ್ ಬಾಷಾ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.