ADVERTISEMENT

ಕಮಲಾಪುರ ಕೆರೆ ರಕ್ಷಣೆಗೆ ಪಾದಯಾತ್ರೆ

ತುಂಗಭದ್ರಾ ಕಾಲುವೆಗಳಿಂದ ಕೆರೆ ನೀರು ಹರಿಸಲು ಹಕ್ಕೊತ್ತಾಯ

​ಪ್ರಜಾವಾಣಿ ವಾರ್ತೆ
Published 8 ಆಗಸ್ಟ್ 2019, 9:51 IST
Last Updated 8 ಆಗಸ್ಟ್ 2019, 9:51 IST
ಜೆ. ಕಾರ್ತಿಕ್‌
ಜೆ. ಕಾರ್ತಿಕ್‌   

ಹೊಸಪೇಟೆ: ‘ತುಂಗಭದ್ರಾ ಜಲಾಶಯದ ಕಾಲುವೆ ಮೂಲಕ ತಾಲ್ಲೂಕಿನ ಕಮಲಾಪುರ ಕೆರೆಗೆ ನೀರು ಹರಿಸಿ ಅದನ್ನು ಉಳಿಸಬೇಕೆಂದು ಆಗ್ರಹಿಸಿ ಆ. 13ರಂದು ಪಾದಯಾತ್ರೆ ನಡೆಸಲು ತೀರ್ಮಾನಿಸಲಾಗಿದೆ’ ಎಂದು ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆ ಜಿಲ್ಲಾ ಅಧ್ಯಕ್ಷ ಜೆ. ಕಾರ್ತಿಕ್‌ ತಿಳಿಸಿದರು.

ಗುರುವಾರ ನಗರದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ‘ಕಮಲಾಪುರ ಕೆರೆ ವಿಜಯನಗರ ಅರಸರ ಕಾಲದಲ್ಲಿ ನಿರ್ಮಾಣಗೊಂಡಿದೆ. ಅದಕ್ಕೆ ಐತಿಹಾಸಿಕ ಪರಂಪರೆ ಇದೆ. ಮೊದಲಿನಿಂದಲೂ ಕಾಲುವೆ ಮೂಲಕ ಈ ಕೆರೆ ತುಂಬಿಸುವ ಕೆಲಸ ಮಾಡಲಾಗುತ್ತಿದೆ. ಆರಂಭದಲ್ಲಿ ನಿತ್ಯ 11 ಕ್ಯುಸೆಕ್‌ ನೀರು ಬಿಡಲಾಗುತ್ತಿತ್ತು. ನಂತರ 8 ಕ್ಯುಸೆಕ್‌ಗೆ ಇಳಿಕೆ ಮಾಡಲಾಯಿತು. ಕೆಲ ವರ್ಷಗಳಿಂದ 5 ಕ್ಯುಸೆಕ್‌ಗೆ ಸೀಮಿತಗೊಳಿಸಲಾಗಿದೆ. ಇದರಿಂದ ಕೆರೆ ತುಂಬುತ್ತಿಲ್ಲ. ಕೆರೆಯನ್ನೇ ನೆಚ್ಚಿಕೊಂಡು ಕೃಷಿ ಮಾಡುತ್ತಿರುವ ನೂರಾರು ರೈತರಿಗೆ ತೊಂದರೆಯಾಗುತ್ತಿದೆ’ ಎಂದು ಹೇಳಿದರು.

‘ಕೆರೆಯ ತೂಬುಗಳನ್ನು ದುರಸ್ತಿಗೊಳಿಸುವಂತೆ ಈ ಹಿಂದೆ ಅನೇಕ ಸಲ ಸಂಬಂಧಿಸಿದ ಅಧಿಕಾರಿಗಳಿಗೆ ಮನವಿ ಸಲ್ಲಿಸಿದರೂ ಪ್ರಯೋಜನವಾಗಿಲ್ಲ. ತುಂಗಭದ್ರಾ ಅಧಿಕಾರಿಗಳ ನಿರ್ಲಕ್ಷ್ಯದಿಂದ ಕೆರೆ ಬತ್ತು ಹೋಗುತ್ತಿದೆ. ಕಾಲುವೆ ಬಿಟ್ಟರೆ ಬೇರೆ ಜಲಮೂಲಗಳು ಕೆರೆಗಿಲ್ಲ. ಈ ಹಿಂದಿನಂತೆ ನಿತ್ಯ 11 ಕ್ಯುಸೆಕ್‌ ನೀರು ಹರಿಸಬೇಕೆಂದು ಆಗ್ರಹಿಸಿ ಕಮಲಾಪುರದಿಂದ ನಗರದ ವರೆಗೆ ನೂರಾರು ರೈತರೊಂದಿಗೆ ಪಾದಯಾತ್ರೆ ಮಾಡಲಾಗುವುದು. ಬಳಿಕ ರೋಟರಿ ವೃತ್ತದಲ್ಲಿ ಧರಣಿ ನಡೆಸಲಾಗುವುದು. ಉಪವಿಭಾಗಾಧಿಕಾರಿ, ತಹಶೀಲ್ದಾರ್‌ ಹಾಗೂ ನೀರಾವರಿ ಇಲಾಖೆಯ ಅಧಿಕಾರಿಗಳು ಖುದ್ದು ಸ್ಥಳಕ್ಕೆ ಬಂದು ಸಮಸ್ಯೆ ಆಲಿಸಿ, ಖಚಿತ ಭರವಸೆ ನೀಡುವವರೆಗೆ ಧರಣಿ ಕೈಬಿಡುವುದಿಲ್ಲ’ ಎಂದು ಎಚ್ಚರಿಕೆ ನೀಡಿದರು.

ADVERTISEMENT

‘ವಿಜಯನಗರ ಕಾಲುವೆಗಳ ಆಧುನೀಕರಣಕ್ಕೆ ₹430 ಕೋಟಿ ಮಂಜೂರಾದರೂ ಕೆಲಸ ಕೈಗೆತ್ತಿಕೊಂಡಿಲ್ಲ. ಕಾಲುವೆ ಭಾಗದ ಗ್ರಾಮಗಳ ರೈತರ ಸಭೆ ಕರೆದು, ಅವರ ಸಲಹೆ ಪಡೆದು ಕೆಲಸ ಆರಂಭಿಸಬೇಕು. ಆದರೆ, ಜನಪ್ರತಿನಿಧಿಗಳು, ಅಧಿಕಾರಿಗಳು ಇಚ್ಛಾಶಕ್ತಿ ತೋರಿಸುತ್ತಿಲ್ಲ’ ಎಂದು ಟೀಕಿಸಿದರು.

ಸಂಘದ ಮುಖಂಡರಾದ ರೇವಣಸಿದ್ದಪ್ಪ, ಮಲ್ಲಿಕಾರ್ಜುನ, ಸಣ್ಣಕ್ಕಿ ರುದ್ರಪ್ಪ, ಎಲ್‌.ಎಸ್‌. ರುದ್ರಪ್ಪ, ಕೆ. ಸುರೇಸ, ಶ್ರೀನಿವಾಸ, ನಾಗರಾಜ, ಗೋಪಾಲಕೃಷ್ಣ, ರಮೇಶ, ನಾದೀಮ್‌ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.