ADVERTISEMENT

ಪಟ್ಟಣ ಪಂಚಾಯಿತಿ ಸಿಬ್ಬಂದಿ ಕೊರತೆ: ಧೂಳು ಹಿಡಿದ ಕಡತ

​ಪ್ರಜಾವಾಣಿ ವಾರ್ತೆ
Published 15 ಸೆಪ್ಟೆಂಬರ್ 2024, 4:33 IST
Last Updated 15 ಸೆಪ್ಟೆಂಬರ್ 2024, 4:33 IST
ತೆಕ್ಕಲಕೋಟೆ ಪಟ್ಟಣದ 4ನೇ ವಾರ್ಡಿನ ಅಂಗನವಾಡಿಗೆ ತೆರಳುವ ರಸ್ತೆ ಸ್ವಚ್ಛತೆ ಇಲ್ಲದೇ ಗಬ್ಬು ನಾರುತ್ತಿದೆ
ತೆಕ್ಕಲಕೋಟೆ ಪಟ್ಟಣದ 4ನೇ ವಾರ್ಡಿನ ಅಂಗನವಾಡಿಗೆ ತೆರಳುವ ರಸ್ತೆ ಸ್ವಚ್ಛತೆ ಇಲ್ಲದೇ ಗಬ್ಬು ನಾರುತ್ತಿದೆ   

ತೆಕ್ಕಲಕೋಟೆ: ಇಲ್ಲಿನ ಪಟ್ಟಣ ಪಂಚಾಯಿತಿಯ ಸಿಬ್ಬಂದಿ ಕೊರತೆಯಿಂದಾಗಿ ಸರ್ಕಾರದ ಮತ್ತು ಸಾರ್ವಜನಿಕ ಕೆಲಸ ಕಾರ್ಯಗಳು ವಿಳಂಬವಾಗುತ್ತಿವೆ ಎಂಬ ದೂರು ಸಾಮಾನ್ಯವಾಗಿದೆ. ಇನ್ನು ಬೆರಳೆಣಿಕೆ ಸಿಬ್ಬಂದಿ ಮಾತ್ರ ಇದ್ದು, ಪಂಚಾಯಿತಿಯ ಕಚೇರಿ, ಆವರಣ ಸದಾ ಭಣಗುಡುತ್ತಿದೆ.

ವಿವಿಧ ಕೆಲಸ ಕಾರ್ಯಗಳಿಗೆ ಕಚೇರಿಗೆ ನಿತ್ಯ ಎಡತಾಕುವ ಸಾರ್ವಜನಿಕರು ತಮ್ಮ ಕೆಲಸ ವಿಳಂಬಗೊಳ್ಳುತ್ತಿರುವುದಕ್ಕೆ ಬೇಸರಗೊಂಡು ಕಚೇರಿಯಲ್ಲಿರುವ ಇತರೆ ಸಿಬ್ಬಂದಿ ಮೇಲೆ ಕೋಪಗೊಳ್ಳುವುದು ಸಾಮಾನ್ಯವಾಗಿದೆ. ಪ್ರಮುಖ ಶಾಖೆಗಳ ಕಡತಗಳು ವಿಲೇವಾರಿಯಾಗದೇ ಧೂಳು ಹಿಡಿದಿವೆ ಎಂದು ಜನ ದೂರುತ್ತಿದ್ದಾರೆ.

ಪಟ್ಟಣ ಪಂಚಾಯಿತಿಯಲ್ಲಿ 65 ಮಂಜೂರಾತಿ ಹುದ್ದೆಗಳಿದ್ದರೂ 32 ಸಿಬ್ಬಂದಿ ಕರ್ತವ್ಯದಲ್ಲಿದ್ದು, ಇದರಲ್ಲಿ 9 ಜನ ಗುತ್ತಿಗೆ ನೌಕರರಾಗಿದ್ದಾರೆ. ಉಳಿದ ಹುದ್ದೆಗಳನ್ನು ಸರ್ಕಾರ ಭರ್ತಿ ಮಾಡಿಲ್ಲ. ಮೊದಲೇ ಸಿಬ್ಬಂದಿ ಕೊರತೆ ಇತ್ತಾದರೂ ಅವರಲ್ಲಿಯೇ ಒಬ್ಬರನ್ನು ಸಿರುಗುಪ್ಪ ನಗರಸಭೆಗೆ ಮತ್ತು ಇನ್ನೊಬ್ಬರನ್ನು ಜಿಲ್ಲಾ ಅಭಿವೃದ್ಧಿಕೋಶಕ್ಕೆ ಎರವಲು ಸೇವೆಯ ಮೇಲೆ ಕಳುಹಿಸಲಾಗಿದೆ. ಮುಖ್ಯಾಧಿಕಾರಿಯಾಗಿ ಪ್ರಭಾರ ವಹಿಸಿಕೊಂಡಿರುವ ತಿಮ್ಮಪ್ಪ ಜಗಲಿ ಪಂಚಾಯಿತಿಗೆ ಭೇಟಿ ನೀಡುವುದು ಅಪರೂಪ ಎಂಬಂತಾಗಿದೆ ಎಂದು ಸದಸ್ಯರು ದೂರಿದ್ದಾರೆ.

ADVERTISEMENT

ಅಲ್ಲದೆ ಸಹಾಯಕ ಎಂಜಿನಿಯರ್‌, ಲೆಕ್ಕಾಧಿಕಾರಿ, ಕಚೇರಿ ವ್ಯವಸ್ಥಾಪಕ, ಕಂದಾಯ ಅಧಿಕಾರಿ, ಕಂದಾಯ ನಿರೀಕ್ಷಕ ಮತ್ತು ಕಂದಾಯ ಶಾಖೆ ಸಿಬ್ಬಂದಿ, ಆರೋಗ್ಯ ನಿರೀಕ್ಷಣಾಧಿಕಾರಿ ಹೀಗೆ ಮಹತ್ವದ 20ಕ್ಕೂ ಹೆಚ್ಚು ಹುದ್ದೆಗಳು ಖಾಲಿ ಇವೆ.

ರಸ್ತೆ, ಚರಂಡಿ ಅಭಿವೃದ್ಧಿ ಸೇರಿದಂತೆ ಸಿವಿಲ್‌ ಕಾಮಗಾರಿಗಳ ನಿರ್ವಹಣೆ, ಟೆಂಡರ್‌ ಪ್ರಕ್ರಿಯೆ ಕೆಲಸ ಕಾಮಗಾರಿಗಳ ಗುಣಮಟ್ಟವನ್ನು ಖಾತರಿಪಡಿಸಿಕೊಳ್ಳುವುದು, ಅಂದಾಜು ಪತ್ರಿಕೆ ಸಿದ್ಧಪಡಿಸುವುದಕ್ಕೆ ಒಬ್ಬರು ಕಾಯಂ ಎಂಜಿನಿಯರ್‌ ಇರಬೇಕು. ಆದರೆ, ಕಿರಿಯ ಎಂಜಿನಿಯರ್‌ ಮಾತ್ರ ಇದ್ದು ಕಾಮಗಾರಿಗಳು ವಿಳಂಬಗೊಳ್ಳುತ್ತಿವೆ. ಕಾಮಗಾರಿಗಳು ಕಳಪೆಯಾಗಿ ನಡೆಯುತ್ತಿದ್ದರೂ ಕೇಳುವವರಿಲ್ಲ. ನೈರ್ಮಲ್ಯ ವ್ಯವಸ್ಥೆ ನಿರ್ವಹಣೆಗೆ ಎರಡು ಹುದ್ದೆಗಳ ಪೈಕಿ ಒಬ್ಬರೇ ಕರ್ತವ್ಯ ನಿರ್ವಹಿಸುತ್ತಿದ್ದು ಮಾಲಿನ್ಯ ಸಮಸ್ಯೆ ಬಿಗಡಾಯಿಸಿದೆ.

ವಸೂಲಾಗದ ಕರ: ಅದೇ ರೀತಿ ಸಿಬ್ಬಂದಿ ಕೊರತೆಯಿಂದಾಗಿ ಮ್ಯೂಟೆಶನ್, ಆನ್‌ಲೈನ್‌ ದಾಖಲೆ ವಿತರಣೆ, ಕಟ್ಟಡ ನಿರ್ಮಾಣಕ್ಕೆ ಪರವಾನಗಿ ಕೆಲಸವನ್ನು ನಿರ್ವಹಿಸುವವರಿಲ್ಲ. ಸಿಬ್ಬಂದಿ ಮನೆ, ಅಂಗಡಿ ಬಾಗಿಲಿಗೆ ಹೋದರೂ ಜನ ಕರ ಪಾವತಿಸುವುದಿಲ್ಲ. ಈಗ ವಸೂಲಿಗೆ ಸಿಬ್ಬಂದಿಯೂ ಇಲ್ಲ. ಹಾಗಾಗಿ ಪಟ್ಟಣ ಪಂಚಾಯಿತಿಗೆ ಬರಬೇಕಿದ್ದ ಬಹಳಷ್ಟು ಮಾಸಿಕ ಆದಾಯ ಸ್ಥಗಿತಗೊಂಡಿದೆ.

ತುಕ್ಕು ಹಿಡಿದ ಯಂತ್ರಗಳು : ಪಟ್ಟಣ ಪಂಚಾಯಿತಿಯಲ್ಲಿ 1ಜೆಸಿಬಿ, 1ಟ್ರಾಕ್ಟರ್, 5ಕಸ ವಿಲೇವಾರಿ ಆಟೋ, 1ಸಕ್ಕಿಂಗ್ ಮಷೀನ್ ಸೇರಿದಂತೆ 10ಕ್ಕೂ ಹೆಚ್ಚು ಯಂತ್ರಗಳಿದ್ದು ಯಾವುದಕ್ಕೂ ಖಾಯಂ ಚಾಲಕರು ಇರುವುದಿಲ್ಲ. ಇದರಿಂದಾಗಿ ಯಂತ್ರಗಳು ನಿಂತಲ್ಲೇ ನಿಂತು ತುಕ್ಕು ಹಿಡಿವ ಹಂತ ತಲುಪಿವೆ ಎನ್ನುತ್ತಾರೆ ಸಾರ್ವಜನಿಕರು.

ಹಾಲಿ ಆಡಳಿತ ಮಂಡಳಿ ಅಧಿಕಾರದ ಅವಧಿ ಉಳಿದಿದ್ದು ಕೇವಲ 18 ತಿಂಗಳು. ಲೋಕಸಭೆ ಚುನಾವಣೆ ಫಲಿತಾಂಶ ಬರುವವರೆಗೆ ಮೀಸಲಾತಿ ಘೋಷಣೆಯಾಗುವುದಿಲ್ಲ. ಅಲ್ಲಿಗೆ ಕೇವಲ 15 ತಿಂಗಳು ಮಾತ್ರ ಉಳಿಯುತ್ತದೆ. ಫಲಿತಾಂಶದ ನಂತರ ತಕ್ಷಣ ಮೀಸಲಾತಿ ಪ್ರಕಟಗೊಂಡು, ಅಧ್ಯಕ್ಷರ ಆಯ್ಕೆ ಪ್ರಕ್ರಿಯೆ ನಡೆಸಿದರೂ ಮತ್ತೆ 2-3 ತಿಂಗಳು ಕಳೆಯುತ್ತವೆ. ಆಗ ಉಳಿಯುವುದು ಕೇವಲ ಒಂದು ವರ್ಷ ಅವಧಿ ಮಾತ್ರ.

ಪ್ರತಿಯೊಂದು ಕೆಲಸಕ್ಕೂ ಜಿಲ್ಲಾ ಆಡಳಿತ, ಆಡಳಿತಾಧಿಕಾರಿ ಅನುಮೋದನೆ ಪಡೆಯುವ ಅನಿವಾರ್ಯತೆ ಇದೆ. ಯಾವ ಕೆಲಸವೂ ಸಮರ್ಪಕ ರೀತಿಯಲ್ಲಿ ನಡೆಯುತ್ತಿಲ್ಲ. ಜನ ನಮ್ಮನ್ನು ಶಪಿಸುತ್ತಿದ್ದಾರೆ. ಸದಸ್ಯತ್ವ ಇದ್ದರೂ ಇಲ್ಲದಂತಾಗಿದೆ ಎಂದು ಸರ್ಕಾರದ ವ್ಯವಸ್ಥೆ ಬಗ್ಗೆ ಕೆಲ ಸದಸ್ಯರು ಬೇಸರ, ಅಸಹಾಯಕತೆ ಹೊರಹಾಕುತ್ತಿದ್ದಾರೆ.

‘ಕಾಯಂ ಸಿಬ್ಬಂದಿಗಾಗಿ ಸರ್ಕಾರ ಕ್ರಮ ಕೈಗೊಳ್ಳಬೇಕಾಗಿದೆ. ಅಲ್ಲಿಯವರೆಗೆ ಗುತ್ತಿಗೆ ಆಧಾರದ ಮೇಲೆ ಸಿಬ್ಬಂದಿ ನೇಮಿಸುವಂತೆ ಮಾನ್ಯ ಜಿಲ್ಲಾಧಿಕಾರಿಗಳಿಗೆ ಮನವಿ ಸಲ್ಲಿಸಲಾಗುವುದು' ಎಂದು ಆಡಳಿತಾಧಿಕಾರಿಗಳೂ ಆದ ಸಿರುಗುಪ್ಪ ತಹಶೀಲ್ದಾರ್ ಶಂಶಾಲಂ ತಿಳಿಸಿದ್ದಾರೆ.

ತೆಕ್ಕಲಕೋಟೆ ಪಟ್ಟಣದ 14ನೇ ವಾರ್ಡಿನ ಬಸರೇ ಕಟ್ಟೆ ಮುಖ್ಯರಸ್ತೆ ಕಸದ ತಿಪ್ಪೆಯಾಗಿದೆ
ತೆಕ್ಕಲಕೋಟೆ ಪಟ್ಟಣದ ಪಟ್ಟಣ ಪಂಚಾಯಿತಿ ಹೊರನೋಟ
ತೆಕ್ಕಲಕೋಟೆ ಪಟ್ಟಣದ ಪಟ್ಟಣ ಪಂಚಾಯಿತಿಯಲ್ಲಿ ಕಡತಗಳು ಅನಾಥವಾಗಿ ಬಿದ್ದಿವೆ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.