ADVERTISEMENT

ಕಾಯಂ ವೈದ್ಯರಿಲ್ಲದೆ ರೋಗಿಗಳ ಪರದಾಟ

ಶ್ರೀರಾಮರಂಗಾಪುರ ಪ್ರಾಥಮಿಕ ಆರೋಗ್ಯ ಕೇಂದ್ರ: ಚಿಕಿತ್ಸೆ ನೀಡಬೇಕಿದ್ದ ಆಸ್ಪತ್ರೆಗೇ ಅನಾರೋಗ್ಯ

​ಪ್ರಜಾವಾಣಿ ವಾರ್ತೆ
Published 3 ಜುಲೈ 2025, 15:53 IST
Last Updated 3 ಜುಲೈ 2025, 15:53 IST
ಕಂಪ್ಲಿ ತಾಲ್ಲೂಕು ಶ್ರೀರಾಮರಂಗಾಪುರದ ಪ್ರಾಥಮಿಕ ಆರೋಗ್ಯ ಕೇಂದ್ರ
ಕಂಪ್ಲಿ ತಾಲ್ಲೂಕು ಶ್ರೀರಾಮರಂಗಾಪುರದ ಪ್ರಾಥಮಿಕ ಆರೋಗ್ಯ ಕೇಂದ್ರ   

ಕಂಪ್ಲಿ: ತಾಲ್ಲೂಕಿನ ಗಡಿಗ್ರಾಮ ಶ್ರೀರಾಮರಂಗಾಪುರದ ಪ್ರಾಥಮಿಕ ಆರೋಗ್ಯ ಕೇಂದ್ರ ಸುಸಜ್ಜಿತ ಕಟ್ಟಡ, ಪರಿಕರಗಳು ಎಲ್ಲವೂ ಹೊಂದಿದ್ದರೂ ಹಲವು ತಿಂಗಳುಗಳಿಂದ ಕಾಯಂ ವೈದ್ಯರ ಕೊರತೆಯಿಂದ ಸೊರಗುತ್ತಿದೆ.

ಮಾಜಿ ಶಾಸಕ ಭೀಮನೇನಿ ಕೊಂಡಯ್ಯ ಅವರು ದಾನವಾಗಿ ನೀಡಿದ ಸ್ಥಳದಲ್ಲಿ ₹4ಕೋಟಿ ವೆಚ್ಚದಲ್ಲಿ ಸುಸಜ್ಜಿತ ಆಸ್ಪತ್ರೆ, ವಸತಿಗೃಹವು ಕಳೆದ ಆಗಸ್ಟ್ 7ರಂದು ಉದ್ಘಾಟನೆಗೊಂಡಿದೆ.
ಪ್ರಸ್ತುತ ಆಸ್ಪತ್ರೆ ವ್ಯಾಪ್ತಿ ನೀರಾವರಿ ಪ್ರದೇಶವಾಗಿದ್ದು, ರೈತರು ಅಧಿಕ ಸಂಖ್ಯೆಯಲ್ಲಿದ್ದಾರೆ.

ಆಕಸ್ಮಿಕ ವಿಷಜಂತುಗಳ ಕಚ್ಚಿದಲ್ಲಿ ಚಿಕಿತ್ಸೆಗಾಗಿ ದೂರದ ಕಂಪ್ಲಿ, ಬಳ್ಳಾರಿಗೆ ತೆರಳಬೇಕು. ಸಕಾಲಕ್ಕೆ ಆಂಬುಲೆನ್ಸ್ ಸೇವೆಯೂ ದೊರೆಯುವುದಿಲ್ಲ. ಹಾಗಾಗಿ ಸುತ್ತಮುತ್ತಲಿನ ಗ್ರಾಮಗಳ ಜನರಿಗೆ ಆರೋಗ್ಯ ಸೇವೆ ಮರೀಚಿಕೆಯಾಗಿದೆ ಎಂಬುದು ಗ್ರಾಮಸ್ಥರ ದೂರು. ಆರೋಗ್ಯ ಕಾಪಾಡಬೇಕಾದ ಆಸ್ಪತ್ರೆಗೇ ಕಾಯಿಲೆ ಬಂದಿದ್ದು, ಈ ಗ್ರಹಣ ಬಿಡಿಸುವವರು ಯಾರು ಎಂದು ಪ್ರಶ್ನೆ ಮಾಡುತ್ತಿದ್ದಾರೆ.

ADVERTISEMENT

‘ನನಗೆ ಮೂರು ದಿನದ ಹಿಂದೆ ಚೇಳು ಕಡಿಯಿತು. ಚಿಕಿತ್ಸೆಗೆಂದು ಆಸ್ಪತ್ರೆಗೆ ಹೋದರೆ ವೈದ್ಯರಿಲ್ಲದ ಕಾರಣ ಅಲ್ಲಿಯ ಸಿಬ್ಬಂದಿ ಬಳ್ಳಾರಿಗೆ ಹೋಗುವಂತೆ ತಿಳಿಸಿದರು’ ಎಂದು ಗ್ರಾಮದ ಪಿ. ನಾರಾಯಣಸ್ವಾಮಿ ಬೇಸರದಿಂದ ಹೇಳಿದರು.

ಈ ಆಸ್ಪತ್ರೆಯಲ್ಲಿ ವೈದ್ಯರಿಲ್ಲದ ಕಾರಣ ಶುಶ್ರೂಷಕರೇ ಹೆರಿಗೆ ಜವಾಬ್ದಾರಿ ನೋಡಿಕೊಳ್ಳಬೇಕಾದ ಅನಿವಾರ್ಯ ಇದೆ. ಈಚೆಗೆ ಗ್ರಾಮದ ಹಲವರಿಗೆ ಕರಿಮೂತಿ ಕೋತಿಯೊಂದು ಕಚ್ಚಿ ರಕ್ತಸ್ರಾವದಿಂದ ಬಳಲಿ ಬಳ್ಳಾರಿಯ ಬಿಎಂಸಿಆರ್‌ಸಿಗೆ ತೆರಳಿ ಚಿಕಿತ್ಸೆ ಪಡೆಯುವಂತಾಯಿತು ಎಂದು ಗ್ರಾಮಸ್ಥರು ಅಪಾದಿಸಿದರು.

ಕಾಯಂ ವೈದ್ಯರು, ಅಗತ್ಯ ಸಿಬ್ಬಂದಿ, ಸಮರ್ಪಕ ಆಂಬುಲೆನ್ಸ್ ಸೇವೆ ಒದಗಿಸಬೇಕು ಎಂದು ಜನರು ಆಗ್ರಹಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.