ಸಂಡೂರು: ಸಂಸದ ಇ.ತುಕರಾಮ್ ಅವರ ತಂಗಿ ಗಂಡ ಎನ್ಎಂಡಿಸಿ ಕಂಪನಿಯ ನಿವೃತ್ತ ನೌಕರ ಬಂಡ್ರಿ ನಾಗರಾಜ್ ಮುಂಬರುವ ಸಂಡೂರು ವಿಧಾನಸಭಾ ಕ್ಷೇತ್ರ ಉಪಚುನಾವಣೆಗೆ ಬಿಜೆಪಿಯಿಂದ ಸ್ಪರ್ಧಿಸುವ ಇಂಗಿತ ವ್ಯಕ್ತಪಡಿಸಿದ್ದಾರೆ.
ಗುರುವಾರ ಬಿಜೆಪಿ ಸಂಡೂರು ಮಂಡಲ ಅಧ್ಯಕ್ಷ ನಾನಾ ನಿಕ್ಕಂ ಅವರಿಗೆ ಅರ್ಜಿ ಸಲ್ಲಿಸಿರುವ ಅವರು ತಾವೂ ಕೂಡಾ ಆಕಾಂಕ್ಷಿ ಎಂಬುದನ್ನು ಅಧಿಕೃತವಾಗಿ ಧೃಢಪಡಿಸಿದ್ದಾರೆ.
ಈ ಕುರಿತು ಪ್ರತಿಕ್ರಿಯಿ ನೀಡಿದ ಅವರು, ‘ನಾನು ಆರ್‌ಎಸ್‌ಎಸ್ ಹಿನ್ನೆಲೆಯಿಂದ ಬಂದಿದ್ದೇನೆ. ಸುಮಾರು 35 ವರ್ಷಗಳ ಹಿಂದ ಅಲ್ಲಿನ ಸಿದ್ದಾಂತಗಳನ್ನು ಮೈಗೂಡಿಸಿ ಕೊಂಡಿದ್ದೇನೆ. ಎನ್ಎಂಡಿಸಿ ಕಂಪನಿಯಲ್ಲಿಯೂ ಎಸ್‌ಸಿ., ಎಸ್‌ಟಿ., ಅಸೋಷಿಯೇಷನ್ ನಲ್ಲಿ ಎರಡು ಅವಧಿಗೆ ಕಾರ್ಯದರ್ಶಿಯಾಗಿ ಸೇವೆ ಸಲ್ಲಿಸಿದ ಅನುಭವ ಇದೆ. ಜನ ಸೇವೆ ಮಾಡುವ ಉದ್ದೇಶ ಹೊಂದಿದ್ದೇನೆ. ಪಕ್ಷದ ವರಿಷ್ಠರು ಕೈಗೊಳ್ಳುವ ನಿರ್ಧಾರಗಳಿಗೆ ಬದ್ಧನಾಗಿದ್ದೇನೆ' ಎಂದು ತಿಳಿಸಿದರು.
ಬಿಜೆಪಿ ಮುಖಂಡರಾದ ರಮೇಶ್ ಚಂದ್ರಪ್ಪ, ಪುರಸಭೆ ಸದಸ್ಯ ಕೆ.ಹರೀಶ್, ಈರಣ್ಣ, ನರಸಿಂಹ ಇತರರು ಉಪಸ್ಥಿತರಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.