ADVERTISEMENT

ವಿದ್ಯುತ್ ಕಣ್ಣಾಮುಚ್ಚಾಲೆಗೆ ಜನ ಹೈರಾಣ

ಶಶಿಕಾಂತ್ ಎಸ್. ಶೆಂಬೆಳ್ಳಿ
Published 4 ಅಕ್ಟೋಬರ್ 2018, 11:36 IST
Last Updated 4 ಅಕ್ಟೋಬರ್ 2018, 11:36 IST

ಹೊಸಪೇಟೆ: ನಗರದಲ್ಲಿ ಬೇಕಾಬಿಟ್ಟಿ ವಿದ್ಯುತ್‌ ಕಡಿತಗೊಳಿಸುತ್ತಿರುವುದಕ್ಕೆ ಜನ ಹೈರಾಣಾಗಿದ್ದಾರೆ.

ಯಾವುದೇ ಹೊತ್ತು, ಗೊತ್ತು ಇಲ್ಲದೆ ವಿದ್ಯುತ್‌ ಪೂರೈಕೆ ಕಡಿತಗೊಳಿಸಲಾಗುತ್ತಿದೆ. ಇನ್ನು ತುರ್ತು ನಿರ್ವಹಣಾ ಕೆಲಸಕ್ಕಾಗಿ ವಾರದಲ್ಲಿ ಎರಡ್ಮೂರು ದಿನ ಕರೆಂಟ್‌ ಕಟ್‌ ಮಾಡುವುದು ಸಾಮಾನ್ಯವಾಗಿದೆ. ಈ ಮಧ್ಯೆ ಅಘೋಷಿತ ಲೋಡ್‌ ಶೆಡ್ಡಿಂಗ್‌ ಜಾರಿಗೊಳಿಸಿ, ಕಿರಿಕಿರಿ ಉಂಟು ಮಾಡುತ್ತಿರುವುದು ಸರಿಯಲ್ಲ ಎಂದು ಜನ ಅಸಮಾಧಾನ ಹೊರ ಹಾಕುತ್ತಿದ್ದಾರೆ.

ಮಳೆಗಾಲ ಮುಗಿಯುತ್ತಿದ್ದಂತೆ ತಾಪಮಾನದಲ್ಲಿ ಏಕಾಏಕಿ ಭಾರಿ ಏರಿಕೆಯಾಗಿದ್ದು, ನಿಗಿ..ನಿಗಿ.. ಬಿಸಿಲಿನಿಂದ ಜನ ಕಂಗೆಟ್ಟು ಹೋಗಿದ್ದಾರೆ. ಇಂತಹ ಸಂದರ್ಭದಲ್ಲಿ ಪದೇ ಪದೇ ವಿದ್ಯುತ್‌ ಕೈಕೊಡುತ್ತಿರುವುದರಿಂದ ಜನ ಮತ್ತಷ್ಟು ಕಂಗಾಲಾಗುವಂತೆ ಮಾಡಿದೆ. ಜೆಸ್ಕಾಂ ವಿರುದ್ಧ ಜನ ಗರಂ ಆಗಿದ್ದಾರೆ.

ADVERTISEMENT

‘ಬೇಸಿಗೆಯಲ್ಲಿ ವಿದ್ಯುತ್‌ ಉತ್ಪಾದನೆ ಕುಂಠಿತಗೊಳ್ಳುತ್ತದೆ. ಜತೆಗೆ ಹೆಚ್ಚಿನ ಪ್ರಮಾಣದಲ್ಲಿ ಸಾರ್ವಜನಿಕರು ಕರೆಂಟ್‌ ಬಳಸುವುದರಿಂದ ಲೋಡ್‌ ಶೆಡ್ಡಿಂಗ್‌ ಜಾರಿಗೊಳಿಸುವುದು ಸಾಮಾನ್ಯ ಸಂಗತಿ. ಆದರೆ, ಈಗಷ್ಟೇ ಮಳೆಗಾಲ ಮುಗಿದಿದೆ. ಹೀಗಿದ್ದರೂ ಪದೇ ಪದೇ ವಿದ್ಯುತ್‌ ಕಡಿತಗೊಳಿಸಿ ಜನರಿಗೆ ಕಿರಿಕಿರಿ ಕೊಡುತ್ತಿರುವುದು ಎಷ್ಟರಮಟ್ಟಿಗೆ ಸರಿ’ ಎಂದು ಪ್ರಶ್ನಿಸುತ್ತಾರೆ ಇಲ್ಲಿನ ಪಟೇಲ್‌ ನಗರದ ಬಸವರಾಜ.

‘ಮುಂಚಿತವಾಗಿ ವಿಷಯ ತಿಳಿಸದೇ ವಿದ್ಯುತ್‌ ಕಡಿತಗೊಳಿಸುತ್ತಿರುವುದು ಒಂದೆಡೆಯಾದರೆ, ವಾರದಲ್ಲಿ ಎರಡ್ಮೂರು ದಿನ ದುರಸ್ತಿ ಹೆಸರಿನಲ್ಲಿ ಅಧಿಕೃತವಾಗಿ ಕರೆಂಟ್‌ ತೆಗೆಯಲಾಗುತ್ತಿದೆ. ದುರಸ್ತಿ ಕೆಲಸ ಎಷ್ಟು ತಿಂಗಳು ನಡೆಯುತ್ತದೆಯೋ ಗೊತ್ತಾಗುತ್ತಿಲ್ಲ. ಅಂದಹಾಗೆ, ಎಲ್ಲಿ? ಏನು? ದುರಸ್ತಿ ಮಾಡಲಾಗುತ್ತಿದೆ. ಅದಕ್ಕೆ ಕೊನೆಯೇ ಇಲ್ಲವೇ? ಈಗಲೇ ಇಂತಹ ಪರಿಸ್ಥಿತಿ ಇದ್ದರೆ, ಬೇಸಿಗೆಯಲ್ಲಿ ಇನ್ನೆಂತಹ ಪರಿಸ್ಥಿತಿ ಇರಬಹುದು’ ಎಂದು ಕೇಳಿದರು.

‘ಮನಸ್ಸಿಗೆ ತೋಚಿದಂತೆ ವಿದ್ಯುತ್‌ ಕಡಿತಗೊಳಿಸುವುದರ ಬದಲು ನಿರ್ದಿಷ್ಟ ಸಮಯವಾದರೂ ನಿಗದಿಪಡಿಸಬೇಕು. ಈ ಕುರಿತು ಪತ್ರಿಕೆಗಳ ಮೂಲಕ ಮಾಹಿತಿ ನೀಡಬೇಕು. ಜನರಿಗೆ ದೈನಂದಿನ ಕೆಲಸಗಳನ್ನು ಮಾಡಿಕೊಳ್ಳಲು ಅನುಕೂಲವಾಗುತ್ತದೆ’ ಎನ್ನುತ್ತಾರೆ ಚಪ್ಪರದಹಳ್ಳಿಯ ಅಂಜಲಿ.

‘ಬೆಳಿಗ್ಗೆ, ಮಧ್ಯಾಹ್ನ ವಿದ್ಯುತ್‌ ಪೂರೈಕೆ ಕಡಿತಗೊಳಿಸುವ ಕಾರಣ ಅಂಗನವಾಡಿ, ಶಾಲೆಗಳಲ್ಲಿ ಮಕ್ಕಳು ಬೆವತು ಹೋಗುತ್ತಿದ್ದಾರೆ. ತರಗತಿಗಳಲ್ಲಿ ಕುಳಿತುಕೊಳ್ಳಲು ಕಷ್ಟವಾಗುತ್ತಿದೆ. ಈಗಂತೂ ಮಟ..ಮಟ.. ಬಿಸಿಲು ಇರುತ್ತಿರುವುದರಿಂದ ವಯಸ್ಕರಿಗೆ ಮನೆಯಲ್ಲೇ ಕೂರಲು ಆಗುತ್ತಿಲ್ಲ. ಇಂತಹದ್ದರಲ್ಲಿ ಮಕ್ಕಳ ಪಾಡು ಏನಾಗಬಾರದು’ ಎಂದು ಹೇಳಿದರು.

‘ವಿದ್ಯುತ್‌ ಬಿಲ್‌ ಭರಿಸಲು ಒಂದು ದಿನ ತಡವಾದರೂ ತಕ್ಷಣವೇ ಬಂದು ಸಂಪರ್ಕ ಕಡಿತಗೊಳಿಸುತ್ತಾರೆ. ಅದೇ ರೀತಿ ಉತ್ತಮ ಸೇವೆ ಕೊಡುವುದರ ಕಡೆಗೂ ಚಿತ್ತ ಹರಿಸಬೇಕು. ಅನೇಕ ಕಡೆಗಳಲ್ಲಿ ಹಗಲು–ರಾತ್ರಿ ವಿದ್ಯುದ್ದೀಪಗಳು ಬೆಳಗುತ್ತಿರುತ್ತವೆ. ಅವುಗಳನ್ನು ಸರಿಯಾಗಿ ನಿರ್ವಹಣೆ ಮಾಡಲು ಆಗುತ್ತಿಲ್ಲ. ಇದು ಜೆಸ್ಕಾಂ ಕಾರ್ಯವೈಖರಿ ಎಂತಹುದು ಎಂಬುದನ್ನು ತೋರಿಸುತ್ತದೆ’ ಎಂದರು.

ಮೇಲಿಂದ ಮೇಲೆ ವಿದ್ಯುತ್‌ ಕಡಿತಗೊಳಿಸುತ್ತಿರುವುದಕ್ಕೆ ಸಂಬಂಧಿಸಿದಂತೆ ಜೆಸ್ಕಾಂ ಕಾರ್ಯನಿರ್ವಾಹಕ ಎಂಜಿನಿಯರ್‌ ಹನುಮಂತಪ್ಪ ಮೇಟಿ ಅವರನ್ನು ಸಂಪರ್ಕಿಸಲು ಗುರುವಾರ ಹಲವು ಸಲ ಕರೆ ಮಾಡಿದರೂ ಅವರು ಸ್ವೀಕರಿಸಲಿಲ್ಲ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.