
ಬಳ್ಳಾರಿ: ಪೋಕ್ಸೊ ಸಂತ್ರಸ್ತೆ ಹೆಸರು ಬಹಿರಂಗಪಡಿಸಿದ್ದ ಮಾಜಿ ಸಚಿವ ಬಿ.ಶ್ರೀರಾಮುಲು ಅವರ ವಿರುದ್ಧ ನಗರದ ಮಹಿಳಾ ಠಾಣೆಯಲ್ಲಿ ಪೋಕ್ಸೊ ಮತ್ತು ಬಾಲ ನ್ಯಾಯ ಕಾಯ್ದೆಯಡಿ ಭಾನುವಾರ ಎಫ್‌ಐಆರ್ ದಾಖಲಾಗಿದೆ.
ನಗರದಲ್ಲಿ ನಡೆದಿದ್ದ ಘರ್ಷಣೆ, ಕೊಲೆ ಕೃತ್ಯ ಬಿಜೆಪಿ ಜನವರಿ 17ರಂದು ಏರ್ಪಡಿಸಿದ್ದ ಪ್ರತಿಭಟನಾ ಸಮಾವೇಶದಲ್ಲಿ ಭಾಷಣ ಮಾಡುವಾಗ ಶ್ರೀರಾಮುಲು ಅವರು ಪೋಕ್ಸೊ ಪ್ರಕರಣದ ಸಂತ್ರಸ್ತೆಯೊಬ್ಬರ ಗುರುತು ಬಹಿರಂಗಪಡಿಸಿದ್ದರು.
‘ಶಾಸಕ ಭರತ್ ರೆಡ್ಡಿ ಯುವಕರನ್ನು ಯಾವ ಹಂತಕ್ಕೆ ಮಾದಕ ವ್ಯಸನಿಗಳನ್ನಾಗಿ ಮಾಡಿದ್ದಾರೆ ಎಂದರೆ, ನಾಲ್ಕೈದು ವಿದ್ಯಾರ್ಥಿಗಳು ಡ್ರಗ್ಸ್ ತೆಗೆದುಕೊಂಡು ನಗರದ ವಿದ್ಯಾರ್ಥಿನಿ ಮೇಲೆ ಅತ್ಯಾಚಾರ ಮಾಡಿದ್ದಾರೆ’ ಎಂದಿದ್ದರು. ಮುಂದುವರಿದು, ವಿದ್ಯಾರ್ಥಿನಿಯ ಹೆಸರು, ಶಾಲೆ, ತರಗತಿ ಮತ್ತು ಜಾತಿಯನ್ನೂ ಬಹಿರಂಗಪಡಿಸಿದ್ದರು.
ಎಪಿಎಂಸಿ ಠಾಣೆ ಇನ್‌ಸ್ಪೆಕ್ಟರ್ ಈ ಬಗ್ಗೆ ದೂರು ನೀಡಿದ್ದಾರೆ. ‘ಶ್ರೀರಾಮುಲು ಅವರಿಗೆ ನೋಟಿಸ್ ನೀಡಿ, ವಿಚಾರಣೆಗೆ ಕರೆಯುತ್ತೇವೆ’ ಎಂದು ಎಸ್‌ಪಿ ಸುಮನ್ ಪೆನ್ನೇಕರ್ ತಿಳಿಸಿದರು.
‘ಪ್ರಜಾವಾಣಿ’ ಜ. 18ರ ಸಂಚಿಕೆಯಲ್ಲಿ ‘ಸಂತ್ರಸ್ತೆ ವಿವರ ಬಹಿರಂಗಪಡಿಸಿದ ಶ್ರೀರಾಮುಲು’ ಶೀರ್ಷಿಕೆಯಲ್ಲಿ ಸುದ್ದಿ ಪ್ರಕಟವಾಗಿತ್ತು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.