ADVERTISEMENT

ಗೌರವ ಧನಕ್ಕೆ ಆಗ್ರಹಿಸಿ ಅಂಗನವಾಡಿ ಕಾರ್ಯಕರ್ತೆಯರ ಪ್ರತಿಭಟನೆ

​ಪ್ರಜಾವಾಣಿ ವಾರ್ತೆ
Published 3 ಜೂನ್ 2020, 10:52 IST
Last Updated 3 ಜೂನ್ 2020, 10:52 IST

ಹೊಸಪೇಟೆ: ಕೇಂದ್ರ ಹಾಗೂ ರಾಜ್ಯ ಸರ್ಕಾರ ಹೆಚ್ಚುವರಿ ಗೌರವ ಧನ, ಮೂರು ತಿಂಗಳ ಬಾಕಿ ಧನ ಬಿಡುಗಡೆ ಮಾಡುವಂತೆ ಆಗ್ರಹಿಸಿ ಕರ್ನಾಟಕ ರಾಜ್ಯ ಅಂಗನವಾಡಿ ನೌಕರರ ಸಂಘ ತಾಲ್ಲೂಕು ಸಮಿತಿಯ ಕಾರ್ಯಕರ್ತೆಯರು ಬುಧವಾರ ಇಲ್ಲಿನ ಶಿಶು ಅಭಿವೃದ್ಧಿ ಯೋಜನಾಧಿಕಾರಿ ಕಚೇರಿ ಎದುರು ಪ್ರತಿಭಟನೆ ನಡೆಸಿದರು.

ನಂತರ ಶಿಶು ಅಭಿವೃದ್ಧಿ ಯೋಜನಾಧಿಕಾರಿ ಅಮರೇಶ ಅವರಿಗೆ ಮನವಿ ಪತ್ರ ಸಲ್ಲಿಸಿದರು. ಅಂಗನವಾಡಿ ಕಾರ್ಯಕರ್ತೆಯರು ಸರ್ಕಾರದ ಪ್ರತಿಯೊಂದು ಸೌಲಭ್ಯಗಳನ್ನು ಜನರ ಮನೆ ಬಾಗಿಲಿಗೆ ತಲುಪಿಸುತ್ತಿದ್ದಾರೆ. ಕೊರೊನಾ ಲಾಕ್‌ಡೌನ್‌ ಸಂದರ್ಭದಲ್ಲಿ ಸರ್ವೇ ಕಾರ್ಯ ಮಾಡಿದ್ದಾರೆ.

ಆದರೆ, ಸರ್ವೇ ಮಾಡಿದ ಹೆಚ್ಚುವರಿ ಗೌರವ ಧನ ಇದುವರೆಗೆ ಕೊಟ್ಟಿಲ್ಲ ಎಂದು ಆರೋಪಿಸಿದ್ದಾರೆ. ಮೂರು ತಿಂಗಳಿಂದ ಗೌರವ ಧನ ಕೊಟ್ಟಿಲ್ಲ. ಕಾರ್ಯಕರ್ತೆಯರಿಗೆ ಜೀವನ ನಿರ್ವಹಣೆಗೆ ತೊಂದರೆಯಾಗುತ್ತಿದೆ. ಲಾಕ್‌ಡೌನ್‌ ವೇಳೆ ಎಲ್ಲರಿಗೂ ಆಹಾರ ಕಿಟ್‌ ನೀಡಲಾಗಿದೆ. ಆದರೆ, ಯಾವೊಬ್ಬ ದಾನಿಯೂ ಅಂಗನವಾಡಿ ಕಾರ್ಯಕರ್ತೆಯರನ್ನು ಗುರುತಿಸಿ ಕೊಟ್ಟಿಲ್ಲ.

ADVERTISEMENT

ಬಾಣಂತಿಯರಿಗೆ ವಿತರಿಸಿರುವ ಮೊಟ್ಟೆ, ಕಟ್ಟಡದ ಬಾಡಿಗೆ ಹಣ ಸ್ವತಃ ಕಾರ್ಯಕರ್ತೆಯರೇ ಪಾವತಿಸಿದ್ದು, ಆ ಹಣ ಕೂಡ ತಕ್ಷಣವೇ ಬಿಡುಗಡೆ ಮಾಡಬೇಕು ಎಂದು ಒತ್ತಾಯಿಸಿದ್ದಾರೆ. ಮಾತೃವಂದನಾ, ಮಾತೃಶ್ರೀ ಫಲಾನುಭವಿಗಳಿಗೆ ಹಣ ಬಿಡುಗಡೆ ಮಾಡಬೇಕು. ಭಾಗ್ಯಲಕ್ಷ್ಮಿ ಯೋಜನೆಯಡಿ ಅರ್ಜಿ ಸಲ್ಲಿಸಿದವರಿಗೆ ಆದಷ್ಟು ಬೇಗ ಬಾಂಡ್‌ ನೀಡಬೇಕು.

ಎಲ್ಲ ಅಂಗನವಾಡಿ ಕೇಂದ್ರಗಳಲ್ಲಿ ಅಗತ್ಯ ಮೂಲಸೌಕರ್ಯ ಕಲ್ಪಿಸಬೇಕು ಎಂದು ಆಗ್ರಹಿಸಿದ್ದಾರೆ. ಸಂಘದ ತಾಲ್ಲೂಕು ಅಧ್ಯಕ್ಷೆ ಕೆ. ನಾಗರತ್ನ, ಕಾರ್ಯದರ್ಶಿ ಕೆ.ಎಂ. ಸ್ವಪ್ನಾ, ಕಾರ್ಯಕರ್ತೆಯರಾದ ಶಕುಂತಲಾ, ಉಮಾ, ಈರಮ್ಮ, ಕೆಂಚಮ್ಮ, ಸುಮಂಗಳಮ್ಮ, ಮಂಜುಳಾ, ರಾಧ ಮೊದಲಾದವರು ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.