ADVERTISEMENT

ಸೂರಿಗಾಗಿ ಗ್ರಾಮಸ್ಥರ ನಡಿಗೆ

88 ಮುದ್ಲಾಪುರ ಗ್ರಾಮಸ್ಥರಿಂದ ನಗರಸಭೆ ಎದುರು ಪ್ರತಿಭಟನೆ

​ಪ್ರಜಾವಾಣಿ ವಾರ್ತೆ
Published 9 ಆಗಸ್ಟ್ 2019, 11:38 IST
Last Updated 9 ಆಗಸ್ಟ್ 2019, 11:38 IST
88 ಮುದ್ಲಾಪುರ ಗ್ರಾಮಸ್ಥರು ಶುಕ್ರವಾರ ಹೊಸಪೇಟೆ ನಗರಸಭೆ ಕಚೇರಿ ಎದುರು ಪ್ರತಿಭಟನೆ ನಡೆಸಿದರು–ಪ್ರಜಾವಾಣಿ ಚಿತ್ರ
88 ಮುದ್ಲಾಪುರ ಗ್ರಾಮಸ್ಥರು ಶುಕ್ರವಾರ ಹೊಸಪೇಟೆ ನಗರಸಭೆ ಕಚೇರಿ ಎದುರು ಪ್ರತಿಭಟನೆ ನಡೆಸಿದರು–ಪ್ರಜಾವಾಣಿ ಚಿತ್ರ   

ಹೊಸಪೇಟೆ: ಸೂರು ಕಲ್ಪಿಸುವಂತೆ ಒತ್ತಾಯಿಸಿ ನಗರದ ಹೊರವಲಯದ 88 ಮುದ್ಲಾಪುರ ಗ್ರಾಮಸ್ಥರು ‘ಸೂರಿಗಾಗಿ ನಮ್ಮ ನಡಿಗೆ‘ ಹೆಸರಿನಲ್ಲಿ ಶುಕ್ರವಾರ ಪ್ರತಿಭಟನಾ ರ್‍ಯಾಲಿ ನಡೆಸಿದರು.

ಮುದ್ಲಾಪುರದಿಂದ ಆರಂಭಿಸಿದ ರ್‍ಯಾಲಿ, ಸ್ಟೇಷನ್‌ ರಸ್ತೆ, ಬಸ್‌ ನಿಲ್ದಾಣ, ಮಹಾತ್ಮ ಗಾಂಧಿ ವೃತ್ತ ಮೂಲಕ ಹಾದು ನಗರಸಭೆಗೆ ಬಂದರು. ಅಲ್ಲಿ ನಗರಸಭೆ ವಿರುದ್ಧ ಘೋಷಣೆಗಳನ್ನು ಕೂಗಿದರು.

ಬಳಿಕ ಮಾತನಾಡಿದಭೂಮಿ ಮತ್ತು ವಸತಿ ಹಕ್ಕು ವಂಚಿತರ ಹೋರಾಟ ಸಮಿತಿ ಕೇಂದ್ರ ಸಮಿತಿ ಸದಸ್ಯ ಕರಿಯಪ್ಪ ಗುಡಿಮನಿ, ’ತುಂಗಭದ್ರಾ ಜಲಾಶಯ ಹಾಗೂ ಅದರ ಕಾಲುವೆಗಳ ನಿರ್ಮಾಣದ ಸಂದರ್ಭದಲ್ಲಿ ಆಂಧ್ರ ಪ್ರದೇಶ, ತಮಿಳುನಾಡು ಸೇರಿದಂತೆ ರಾಜ್ಯದ ನಾನಾ ಭಾಗಗಳಿಂದ ಸುಮಾರು 200 ಕುಟುಂಬಗಳು ವಲಸೆ ಬಂದಿದ್ದವು. ಅಂದಿನಿಂದ ಇಂದಿನ ವರೆಗೆ ಆ ಕುಟುಂಬಗಳು ರೈಲ್ವೆ ಇಲಾಖೆಗೆ ಸೇರಿದ ಮುದ್ಲಾಪುರದಲ್ಲಿ ಬದುಕು ನಡೆಸುತ್ತಿವೆ. ಈಗ ಆ ಜಾಗವನ್ನು ರೈಲ್ವೆ ಇಲಾಖೆಯು ಅಭಿವೃದ್ಧಿ ಪಡಿಸಲು ಮುಂದಾಗಿದೆ. ಮನೆಗಳನ್ನು ತೆರವುಗೊಳಿಸುವುದು ಅನಿವಾರ್ಯವಾಗಿದ್ದು, ಆ ಎಲ್ಲ ಕುಟುಂಬದವರಿಗೆ ನಗರದ ಬೇರೆ ಭಾಗದಲ್ಲಿ ಸೂರು ಕಲ್ಪಿಸಬೇಕು’ ಎಂದು ಒತ್ತಾಯಿಸಿದರು.

ADVERTISEMENT

‘ಅಭಿವೃದ್ಧಿ ಕೆಲಸಗಳಿಗೆ ನಮ್ಮ ವಿರೋಧವಿಲ್ಲ. ನಗರ ಬೆಳೆಯುತ್ತಿದೆ. ಸಹಜವಾಗಿಯೇ ರೈಲು ನಿಲ್ದಾಣವನ್ನು ಅಭಿವೃದ್ಧಿ ಪಡಿಸಲಾಗುತ್ತಿದೆ. ಇಷ್ಟು ದಿನ ರೈಲ್ವೆ ಇಲಾಖೆಯವರು ಯಾವುದೇ ಕಿರಿಕಿರಿಯಿಲ್ಲದೆ ವಾಸಿಸಲು ಬಿಟ್ಟಿದ್ದಾರೆ. ಈಗ ಅವರು ಮನೆಗಳನ್ನು ತೆರವುಗೊಳಿಸುವಂತೆ ನೋಟಿಸ್‌ ಕೊಟ್ಟಿದ್ದಾರೆ. ಮನೆಗಳನ್ನು ತೆರವುಗೊಳಿಸಲು ಎಲ್ಲರೂ ಸಿದ್ಧರಿದ್ದಾರೆ. ಆದರೆ, ನಗರಸಭೆ ಬೇರೆಡೆ ನಿವೇಶನ ಕೊಟ್ಟು, ಮನೆ ನಿರ್ಮಿಸಿಕೊಡಬೇಕು’ ಎಂದು ಆಗ್ರಹಿಸಿದರು.

‘ಎಲ್ಲ ಕುಟುಂಬದವರು ನಗರಕ್ಕೆ ಬಂದು ಸುಮಾರು 70ರಿಂದ 80 ವರ್ಷಗಳಾಗುತ್ತ ಬಂದಿವೆ. ಎಲ್ಲರ ಬಳಿ ರೇಷನ್‌, ಆಧಾರ್ ಕಾರ್ಡು, ಮತದಾರರ ಗುರುತಿನ ಚೀಟಿಗಳಿವೆ. ಯಾರೊಬ್ಬರೂ ಬೀದಿ ಪಾಲಾಗದಂತೆ ನೋಡಿಕೊಳ್ಳಬೇಕು. ಇಲ್ಲವಾದಲ್ಲಿ ಉಗ್ರ ಹೋರಾಟ ನಡೆಸಲಾಗುವುದು’ ಎಂದು ಎಚ್ಚರಿಕೆ ನೀಡಿದರು.

ಮನವಿ ಸ್ವೀಕರಿಸಿ ಮಾತನಾಡಿದ ಪೌರಾಯುಕ್ತ ವಿ. ರಮೇಶ, ’ಎಲ್ಲ ದಾಖಲೆಗಳ ಸಮೇತ ನಿವೇಶನಕ್ಕಾಗಿ ಅರ್ಜಿ ಸಲ್ಲಿಸಿ, ಅವುಗಳನ್ನು ಪರಿಶೀಲಿಸಿದ ನಂತರ ಮುಂದುವರೆಯಲಾಗುವುದು‘ ಎಂದು ಭರವಸೆ ನೀಡಿದರು. ಅದಕ್ಕೆ ಸ್ಪಂದಿಸಿ ಗ್ರಾಮಸ್ಥರು ತಾತ್ಕಾಲಿಕವಾಗಿ ಪ್ರತಿಭಟನೆ ಕೈಬಿಟ್ಟರು.

ಮುಖಂಡರಾದ ಚೆನ್ನಮ್ಮ, ವಸಂತರಾಜ ಕಹಳೆ, ಶೇಖರ್‌, ಮಹದೇವ, ದೇವಪ್ಪ, ಸಂತೋಷ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.