ಬಳ್ಳಾರಿ: ಹಠಾತ್ ಸಾವು ತಂದೊಡ್ಡುವ ಹೃದಯ ಸಂಬಂಧಿ ಕಾಯಿಲೆಗಳನ್ನು ತಡೆಗಟ್ಟುವ ಉದ್ದೇಶದಿಂದ ಆರೋಗ್ಯ ಇಲಾಖೆಯು ಸರ್ಕಾರಿ ಆಸ್ಪತ್ರೆಗಳಲ್ಲಿ ನಟ ಪುನೀತ್ ರಾಜ್‌ಕುಮಾರ್ ಅವರ ಹೆಸರಿನಲ್ಲಿ ಜಾರಿಗೆ ತಂದಿರುವ ‘ಪುನೀತ್ ರಾಜ್‌ಕುಮಾರ್ ಹೃದಯಜ್ಯೋತಿ– ಸ್ಟೆಮಿ (ಹೃದಯ ಸ್ನಾಯುವಿನ ಸೋಂಕು ನಿವಾರಣೆ)’ ಯೋಜನೆಯು ಬಡವರ ಹೃದಯ ತಪಾಸಣೆಗೆ ವರದಾನವಾಗಿದೆ.
ರಾಜ್ಯ ಸರ್ಕಾರವು 2023ರ ಅಕ್ಟೋಬರ್‌ನಲ್ಲಿ ಸ್ಟೆಮಿಯನ್ನು ಪ್ರಾರಂಭಿಸಿತು. 2024ರ ಮಾರ್ಚ್‌ನಲ್ಲಿ ಇನ್ನೂ ಕೆಲವು ಜಿಲ್ಲೆ, ತಾಲ್ಲೂಕುಗಳಿಗೆ ವಿಸ್ತರಿಸಿದೆ.
ಸದ್ಯ ಬಳ್ಳಾರಿ ಜಿಲ್ಲೆಯಲ್ಲಿ ಸಿರುಗುಪ್ಪ ತಾಲ್ಲೂಕು ಆಸ್ಪತ್ರೆಯಲ್ಲಿ ಮಾತ್ರವೇ ‘ಪುನೀತ್ ರಾಜ್‌ಕುಮಾರ್ ಹೃದಯಜ್ಯೋತಿ’ ಯೋಜನೆ ಇದ್ದು, ಜಿಲ್ಲೆಯ ಇತರ ತಾಲ್ಲೂಕುಗಳಿಗೂ ವಿಸ್ತರಣೆಯಾದರೆ, ಸಾವಿರಾರು ಹೃದ್ರೋಗಿಗಳಿಗೆ ಯೋಜನೆಯ ಫಲ ಸಿಕ್ಕಂತಾಗುತ್ತದೆ, ಜೀವದಾನ ದೊರೆತಂತಾಗುತ್ತದೆ ಎಂಬ ಅಭಿಪ್ರಾಯವಿದೆ.
ಸ್ಟೆಮಿ ಯೋಜನೆಯ ಅಡಿಯಲ್ಲಿ ಸಿರುಗುಪ್ಪದಲ್ಲಿ ಕಳೆದ ತಿಂಗಳು 821 ಮಂದಿಗೆ ಇಸಿಜಿ ಮಾಡಿಸಲಾಗಿದೆ. 17 ಮಂದಿಯಲ್ಲಿ ಸಮಸ್ಯೆ ಇರುವುದು ಪತ್ತೆಯಾಗಿದೆ. 14 ಜನರಿಗೆ ತುರ್ತು ಚಿಕಿತ್ಸೆ, ಹೆಚ್ಚಿನ ಆರೈಕೆ ಒದಗಿಸಿ ಜೀವ ಉಳಿಸಲಾಗಿದೆ. ಮೂವರು ಮೃತಪಟ್ಟಿದ್ದಾರೆ ಎನ್ನಲಾಗಿದೆ.
ಬಿಪಿಎಲ್, ಎಪಿಎಲ್ ಕುಟುಂಬಗಳಿಗೂ ಈ ಯೋಜನೆಯ ಅಡಿಯಲ್ಲಿ ಉಚಿತ ಚಿಕಿತ್ಸೆ ನೀಡಲಾಗುತ್ತದೆ. ಈ ಯೋಜನೆಗೆ ಬಳ್ಳಾರಿ ನಗರದ ಬಳ್ಳಾರಿ ಹೃದಯಾಲಯವನ್ನು ಸಂಯೋಜಿಸಲಾಗಿದೆ. ಆರಂಭಿಕ ಚಿಕಿತ್ಸೆಯನ್ನು ಸ್ಥಳೀಯವಾಗಿಯೇ ನೀಡಲಾಗುತ್ತದೆ. ಹೆಚ್ಚಿನ ಚಿಕಿತ್ಸೆ ಬೇಕಿದ್ದರೆ ಬಳ್ಳಾರಿ ನಗರಕ್ಕೆ ಕರೆತರಲಾಗುತ್ತದೆ. ಮತ್ತೂ ಉನ್ನತ ಆರೈಕೆ ಬೇಕಿದ್ದರೆ ಬೆಂಗಳೂರಿಗೆ ರವಾನಿಸಲಾಗುತ್ತದೆ. ಅತ್ಯಂತ ದುಬಾರಿ ಚುಚ್ಚುಮದ್ದುಗಳನ್ನೂ ಈ ಯೋಜನೆಯ ಅಡಿಯಲ್ಲಿ ಉಚಿತವಾಗಿ ನೀಡಲಾಗಿದೆ ಎಂದು ಜಿಲ್ಲಾ ಸರ್ವೇಕ್ಷಾಧಿಕಾರಿ ಡಾ.ಮರಿಯಂಬಿ ‘ಪ್ರಜಾವಾಣಿ’ಗೆ ತಿಳಿಸಿದರು.
ಈ ಯೋಜನೆಯು ಹಲವರ ಪ್ರಮಾಣ ಉಳಿಸಿದೆ. ಇದನ್ನು ಇಡೀ ಜಿಲ್ಲೆಗೇ ವಿಸ್ತರಿಸಿದರೆ ಬಡವರಿಗೆ ಅನುಕೂಲವಾಗಲಿದೆ ಎಂದೂ ಅವರು ತಿಳಿಸಿದರು.
ಏನಿದು ಸ್ಟೆಮಿ?: ಹೃದಯ ಸ್ನಾಯುವಿನ ಸೋಂಕು ನಿವಾರಣೆಗೆ ಸಂಬಂಧಿಸಿದ ಚಿಕಿತ್ಸೆ ಯೋಜನೆಯೇ ಸ್ಟೆಮಿ. ಸರ್ಕಾರಿ ಆಸ್ಪತ್ರೆಗಳಲ್ಲಿ ಆರಂಭವಾಗಿರುವ ತಪಾಸಣಾ ಕೇಂದ್ರಗಳಲ್ಲಿ ಜನರಿಗೆ ಸ್ಥಳೀಯವಾಗಿಯೇ ತುರ್ತು ಚಿಕಿತ್ಸೆ ಸಿಗುತ್ತದೆ. ಹೃದಯಾಘಾತಕ್ಕೆ ಒಳಗಾದವರಿಗೆ ಒಂದು ಗಂಟೆಯೊಳಗೆ ತುರ್ತು ಚಿಕಿತ್ಸೆ ಸಿಗುತ್ತದೆ. ತುರ್ತು ಚಿಕಿತ್ಸೆ ವ್ಯವಸ್ಥೆ ಸ್ಟೆಮಿ ಕೇಂದ್ರಗಳಲ್ಲಿದೆ.
ಜೂನ್‌ನಲ್ಲಿ ನಾಲ್ಕು ಸಾವು: ಜಿಲ್ಲೆಯಲ್ಲಿ ಹೃದಯ ಸಂಬಂಧಿ ಕಾಯಿಲೆಗಳು, ಚಿಕಿತ್ಸೆಗೆ ಸಂಬಂಧಿಸಿದ ಒಟ್ಟು ದತ್ತಾಂಶಗಳು ಆರೋಗ್ಯ ಇಲಾಖೆ ಬಳಿ ಇಲ್ಲ. ಆದರೆ, ಸಿರುಗುಪ್ಪದಲ್ಲಿ ಸ್ಟೆಮಿ ಜಾರಿಯಲ್ಲಿರುವುದರಿಂದ ಆ ತಾಲ್ಲೂಕು ಒಂದರ ದತ್ತಾಂಶವನ್ನು ಮಾತ್ರ ಆರೋಗ್ಯ ಇಲಾಖೆ ಹೊಂದಿದೆ. ಇದರ ಪ್ರಕಾರ ಸಿರುಗುಪ್ಪ ತಾಲ್ಲೂಕಿನಲ್ಲಿ ಕಳೆದ ತಿಂಗಳು ಒಟ್ಟು ಮೂವರು ಹೃದಯ ಸಂಬಂಧಿ ಸಮಸ್ಯೆಯಿಂದ ಮೃತಪಟ್ಟಿದ್ದಾರೆ. ಇನ್ನು ಬಳ್ಳಾರಿ ವೈದ್ಯಕೀಯ ಕಾಲೇಜು ಮತ್ತು ಸಂಶೋಧನಾ ಸಂಸ್ಥೆಯಲ್ಲಿ (ಬಿಎಂಸಿಆರ್‌ಸಿ) ಒಬ್ಬರು ಮೃತಪಟ್ಟಿದ್ದಾರೆ.
ಇಸಿಜಿ ಮಾಡಿಸುವವರ ಸಂಖ್ಯೆ ಏನೂ ಹೆಚ್ಚಾಗಿಲ್ಲ. ಸಾಮಾನ್ಯವಾಗಿಯೇ ತಪಾಸಣೆಗಳು ನಡೆಯುತ್ತಿವೆ. ನಮ್ಮಲ್ಲಿ ಈ ಒಂದು ತಿಂಗಳಲ್ಲಿ ಮೃತಪಟ್ಟವರ ಸಂಖ್ಯೆ ಒಂದು ಮಾತ್ರಗಂಗಾಧರ ಗೌಡ ಬಿಎಂಸಿಆರ್‌ಸಿ ನಿರ್ದೇಶಕ
ಸ್ಟೆಮಿ ಅತ್ಯಂತ ಉಪಯುಕ್ತ ಕಾರ್ಯಕ್ರಮ. ಸಿರುಗುಪ್ಪ ತಾಲ್ಲೂಕಿನಲ್ಲಿ ಮಾತ್ರವೇ ಈ ಯೋಜನೆ ಇದೆ. ಇದರಿಂದ ಹಲವರ ಪ್ರಾಣ ಉಳಿದಿದೆ. ಅತ್ಯುನ್ನತ ಚಿಕಿತ್ಸೆ ಯೋಜನೆ ಅಡಿಯಲ್ಲಿ ಲಭ್ಯಡಾ.ಮರಿಯಂಬಿ ಜಿಲ್ಲಾ ಸರ್ವೇಕ್ಷಾಧಿಕಾರಿ
ಸಮೂಹಸನ್ನಿ ಇಲ್ಲ
ಹಾಸನ ಸೇರಿದಂತೆ ರಾಜ್ಯದ ವಿವಿಧ ಕಡೆಗಳಲ್ಲಿ ಹೃದಯಾಘಾತದಿಂದ ಯುವಕರೇ ಹೆಚ್ಚಿನ ಸಂಖ್ಯೆಯಲ್ಲಿ ಅದೂ ಸರಣಿಯಾಗಿ ಇತ್ತೀಚೆಗೆ ಜೀವ ಕಳೆದುಕೊಂಡಿರುವ ಈ ಹಿನ್ನೆಲೆಯಲ್ಲಿ ಜಿಲ್ಲೆಯಲ್ಲಿ ಹೃದಯ ಸಂಬಂಧಿ ಕಾಯಿಲೆಗಳ ತಪಾಸಣೆ ಚಿಕಿತ್ಸೆ ವಿಷಯಗಳು ಮುನ್ನೆಲೆಗೆ ಬಂದಿವೆ. ಆದರೆ ಇಸಿಜಿ ಪ್ರಮಾಣ ಏರಿಕೆಯಾದ ಲಕ್ಷಣಗಳು ಇಲ್ಲ. ಬಿಎಂಸಿಆರ್‌ಸಿಯಲ್ಲಿ ನಿತ್ಯ 70–80 ಮಂದಿ ಇಸಿಜಿಗೆ ಒಳಗಾಗುತ್ತಿದ್ದಾರೆ. ಇದು ಸಾಮಾನ್ಯ. ಹೀಗಾಗಿ ಹಾಸನದ ಘಟನೆ ಜಿಲ್ಲೆಯಲ್ಲಿ ಸಮೂಹಸನ್ನಿಯನ್ನೇನೂ ಸೃಷ್ಟಿಸಿಲ್ಲ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.