ADVERTISEMENT

‘ನಾಡಿನ ಸಂಸ್ಕೃತಿಯ ಪ್ರತಿಬಿಂಬ ರಾಜಕುಮಾರ್‌’

​ಪ್ರಜಾವಾಣಿ ವಾರ್ತೆ
Published 24 ಏಪ್ರಿಲ್ 2019, 15:04 IST
Last Updated 24 ಏಪ್ರಿಲ್ 2019, 15:04 IST
ಡಾ. ರಾಜಕುಮಾರ್‌ ಅವರ ಭಾವಚಿತ್ರಕ್ಕೆ ಕುಲಪತಿ ಪ್ರೊ. ಸ.ಚಿ. ರಮೇಶ್‌, ನಿರ್ದೇಶಕ ಆದಿತ್ಯ ಚಿಕ್ಕಣ್ಣ ಹಾಗೂ ಕುಲಸಚಿವ ಪ್ರೊ. ಅಶೋಕಕುಮಾರ ರಂಜೇರೆ ಪುಷ್ಪಗೌರವ ಸಲ್ಲಿಸಿದರು–ಪ್ರಜಾವಾಣಿ ವಾರ್ತೆ
ಡಾ. ರಾಜಕುಮಾರ್‌ ಅವರ ಭಾವಚಿತ್ರಕ್ಕೆ ಕುಲಪತಿ ಪ್ರೊ. ಸ.ಚಿ. ರಮೇಶ್‌, ನಿರ್ದೇಶಕ ಆದಿತ್ಯ ಚಿಕ್ಕಣ್ಣ ಹಾಗೂ ಕುಲಸಚಿವ ಪ್ರೊ. ಅಶೋಕಕುಮಾರ ರಂಜೇರೆ ಪುಷ್ಪಗೌರವ ಸಲ್ಲಿಸಿದರು–ಪ್ರಜಾವಾಣಿ ವಾರ್ತೆ   

ಹೊಸಪೇಟೆ: ‘ಡಾ. ರಾಜಕುಮಾರ್ ಅವರದು ಹಿಮಾಲಯ ಪರ್ವತದಂತಹ ವ್ಯಕ್ತಿತ್ವ. ಕನ್ನಡ ನಾಡಿನ ಸಂಸ್ಕೃತಿ, ಸಂಸ್ಕಾರವೆಲ್ಲ ಅವರಲ್ಲಿತ್ತು’ ಎಂದು ನಿರ್ದೇಶಕ ಆದಿತ್ಯ ಚಿಕ್ಕಣ್ಣ ಹೇಳಿದರು.

ರಾಜಕುಮಾರ್ ಅಧ್ಯಯನ ಪೀಠವು ಬುಧವಾರ ಇಲ್ಲಿನ ಹಂಪಿ ಕನ್ನಡ ವಿಶ್ವವಿದ್ಯಾಲಯದಲ್ಲಿ ಹಮ್ಮಿಕೊಂಡಿದ್ದ ‘ನಾನು ಕಂಡಂತೆ ಡಾ. ರಾಜಕುಮಾರ್’ ವಿಶೇಷ ಉಪನ್ಯಾಸ ನೀಡಿದರು.

‘ಕುಟುಂಬ ಸಂಸಾರದ ಬಗ್ಗೆ ಅವರು ಎಂದೂ ಯೋಚಿಸಲಿಲ್ಲ. ಮೂರು ಹೊತ್ತು ಹೊಟ್ಟೆ ತುಂಬ ಊಟ ಮಾಡಬೇಕು ಅದಕ್ಕೆ ಸದಾ ದುಡಿಯುವ ಶಕ್ತಿ ಕೊಡು ಎಂದು ದೇವರಲ್ಲಿ ಬೇಡಿಕೊಳ್ಳುತ್ತಿದ್ದರು. ಮದ್ರಾಸಿನಲ್ಲಿ ₹35 ಬಾಡಿಗೆಯ ಹೆಂಚಿನ ಮನೆಯಲ್ಲಿ ವಾಸವಾಗಿದ್ದರು. ‘ಕಂದಾ ಬೇರೆಯವರ ಕಾಸಿಗೆ ಆಸೆ ಪಡಬೇಡ’ ಎಂದು ಅವರ ತಂದೆ ಹೇಳಿದಂತೆ ಬದುಕಿದರು. ಅವರೆಂದೂ ಹಣ ಎಣಿಸುವ ಗೋಜಿಗೆ ಹೋಗಲೇ ಇಲ್ಲ’ ಎಂದರು.

ADVERTISEMENT

‘ರಾಜಕೀಯ ರಂಗದ ಸಹವಾಸ ಬೇಡವೇ ಬೇಡ ಎಂದು ತಿರುಪತಿಯಲ್ಲಿ ಬಚ್ಚಿಟ್ಟು ಕೊಂಡಿದ್ದರು. ನಾವು ಬಣ್ಣ ಹಚ್ಚಿ ಅಭಿನಯಿಸಿದರೆ ರಾಜಕೀಯದವರು ಬಣ್ಣ ಹಚ್ಚದೆ ಅಭಿನಯಿಸುತ್ತಾರೆ ಎಂದು ರಾಜ್ ಅವರು ಹೇಳುತ್ತಿದ್ದರು. ನಿರ್ಮಾಪಕರನ್ನು ಅನ್ನದಾತರು ಎನ್ನುತ್ತಿದ್ದರು. ದೇವರು ಮತ್ತು ಅಭಿಮಾನಿಗಳನ್ನು ಬಿಟ್ಟರೆ ಕಲಾವಿದರಿಗೆ ಸ್ಥಾನ ಎನ್ನುತ್ತಿದ್ದರು. ತಾಳ್ಮೆಯ ಪ್ರತೀಕವಾದ ಸತ್ಯ ಪಕ್ಷಪಾತಿಯಾದ ಅವರು ಯಾರ ಮನಸ್ಸನ್ನು ನೋಯಿಸುತ್ತಿರಲಿಲ್ಲ. ಅವರನ್ನು ಹೂವಿಗೆ ಹೋಲಿಸಬಹುದು’ ಎಂದು ತಿಳಿಸಿದರು.

‘ದೈಹಿಕ ಸ್ವಚ್ಛತೆಗಿಂತ ಅಂತರಂಗವನ್ನು ಶುದ್ಧವಾಗಿಟ್ಟುಕೊಳ್ಳಬೇಕು ಎಂದು ಹೇಳುತ್ತಿದ್ದ ಅವರು ಜಾತಿ, ಮತ, ಧರ್ಮಾತೀತವಾಗಿದ್ದರು. ದ್ವೇಷದಿಂದ ಸಾಧಿಸಲಾಗದ್ದನ್ನು ಪ್ರೀತಿಯಿಂದ ಸಾಧಿಸಬಹುದು ಎಂದು ಹೇಳುತ್ತಿದ್ದರು. ಮಹಾರಾಷ್ಟ್ರ ಸರ್ಕಾರವು ಅಲ್ಲಿನ ಏಳನೇ ಪಠ್ಯಕ್ರಮದಲ್ಲಿ ರಾಜಕುಮಾರ್‌ ಕುರಿತ ವಿಷಯವನ್ನು ಸೇರಿಸಿದೆ’ ಎಂದರು.

ಕುಲಪತಿ ಪ್ರೊ. ಸ.ಚಿ. ರಮೇಶ್‌, ‘ಡಾ. ರಾಜಕುಮಾರ್ ಅವರ ವ್ಯಕ್ತಿತ್ವ ಹಾಗೂ ಅವರು ಅಭಿನಯಿಸಿದ ಸಿನಿಮಾಗಳ ಅಧ್ಯಯನದಿಂದ ಆರೋಗ್ಯವಂತ ಕರ್ನಾಟಕ ಮತ್ತು ಸಮಾಜದ ನಿರ್ಮಾಣ ಸಾಧ್ಯ’ ಎಂದು ತಿಳಿಸಿದರು.

ಪೀಠದ ಸಂಚಾಲಕ ಅಶೋಕಕುಮಾರ ರಂಜೇರೆ,‘ರಾಜಕುಮಾರ್ ಅವರ ನಿಧನದ ನಂತರ ರಾಜ್ಯ ಸರ್ಕಾರವು ₹15 ಲಕ್ಷ ಇಡುಗಂಟಿನ ಮೂಲಕ ಕನ್ನಡ ವಿಶ್ವವಿದ್ಯಾಲಯದಲ್ಲಿ ಅವರ ಹೆಸರಿನಲ್ಲಿ ಅಧ್ಯಯನ ಪೀಠ ಸ್ಥಾಪಿಸಿದೆ. ಆ ಬಡ್ಡಿ ಹಣದಲ್ಲಿ ಶೈಕ್ಷಣಿಕ, ರಂಗಭೂಮಿ, ಸಿನಿಮಾಗೆ ಸಂಬಂಧಿಸಿದ ಕಾರ್ಯಕ್ರಮಗಳನ್ನು ನಡೆಸಲಾಗುತ್ತಿದೆ’ ಎಂದು ವಿವರಿಸಿದರು.ಅಧ್ಯಾಪಕ ಶಂಕರ ಮೆಟ್ರಿ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.