ADVERTISEMENT

ಮನಸೂರೆಗೊಂಡ ರಾಮ–ರಾವಣ ಕಥೆ

ರಂಗಮಂದಿರದಲ್ಲಿ ಶ್ರೀ ರಾಮಾಯಣ ದರ್ಶನಂ ಅನಾವರಣ

​ಪ್ರಜಾವಾಣಿ ವಾರ್ತೆ
Published 18 ಡಿಸೆಂಬರ್ 2018, 8:59 IST
Last Updated 18 ಡಿಸೆಂಬರ್ 2018, 8:59 IST
ಬಳ್ಳಾರಿಯಲ್ಲಿ ಸೋಮವಾರ ರಾತ್ರಿ ರಂಗಾಯಣ ಕಲಾವಿದರು ಪ್ರದರ್ಶಿಸಿದ ಶ್ರೀರಾಮಾಯಣದರ್ಶನಂ ನಾಟಕದಲ್ಲಿ ಸೀತೆ (ಶೃತಿ ತಿಪಟೂರು) ಮತ್ತು ರಾಮ (ಮಂಜು ಸಿರಿಗೇರಿ) ಮನೋಜ್ಞ ಅಭಿನಯ..
ಬಳ್ಳಾರಿಯಲ್ಲಿ ಸೋಮವಾರ ರಾತ್ರಿ ರಂಗಾಯಣ ಕಲಾವಿದರು ಪ್ರದರ್ಶಿಸಿದ ಶ್ರೀರಾಮಾಯಣದರ್ಶನಂ ನಾಟಕದಲ್ಲಿ ಸೀತೆ (ಶೃತಿ ತಿಪಟೂರು) ಮತ್ತು ರಾಮ (ಮಂಜು ಸಿರಿಗೇರಿ) ಮನೋಜ್ಞ ಅಭಿನಯ..   

ಬಳ್ಳಾರಿ: ಐದು ಗಂಟೆ ಕಾಲದ ಸುದೀರ್ಘ ಶ್ರೀರಾಮಾಣಯಣ ದರ್ಶನಂ ಮಹಾಕಾವ್ಯದ ನಾಟಕ ಪ್ರಸ್ತುತಿ ನಗರದ ಜೋಳದರಾಶಿ ದೊಡ್ಡನಗೌಡ ರಂಗಮಂದಿರದಲ್ಲಿ ಸೋಮವಾರ ರಾತ್ರಿ ನೂರಾರು ರಂಗಾಸಕ್ತರನ್ನು ತನ್ಮಯಗೊಳಿಸಿತು.

ಕನ್ನಡಕ್ಕೆ ಪ್ರಥಮ ಜ್ಞಾನಪೀಠ ಪ್ರಶಸ್ತಿ ಸಂದ 50 ವರ್ಷದ ಸ್ಮರಣೆಗಾಗಿ ರಾಜ್ಯಾದ್ಯಂತ ನಡೆಯುತ್ತಿರುವ ನಾಟಕ ಪ್ರದರ್ಶನ ನಗರದಲ್ಲೂ ಮರೆಯದ ನೆನಪನ್ನು ಉಳಿಸಿತು.

ಕನ್ನಡ ಸಂಸ್ಕೃತಿ ಇಲಾಖೆಯು ಏರ್ಪಡಿಸಿದ್ದ ಪ್ರದರ್ಶನದಲ್ಲಿ ಸುಮಾರು 40 ಮಂದಿ ಹಿರಿಯ ಹಾಗೂ ಕಿರಿಯ ಕಲಾವಿದರು, 35 ತಂತ್ರಜ್ಞರು ಮಹಾಕಾವ್ಯವನ್ನು ರಂಗದ ಮೇಲೆ ನಿರೂಪಿಸಿದರು.

ADVERTISEMENT

ಎಚ್.ಕೆ.ದ್ವಾರಕ ನಾಥ್ ವಿನ್ಯಾಸ ಹಾಗೂ ರವಿ ಮೂರೂರು ಸಂಗೀತ, ಪ್ರಮೋದ ಶಿಗ್ಗಾಂವ್ ಹಾಗೂ ಮಹೇಶ್ ಕಲ್ಲತ್ತಿ ಅವರ ಬೆಳಕು ವಿನ್ಯಾಸವು ಪ್ರಸ್ತುತಿಯ ಪ್ರಮುಖ ಆಕರ್ಷಣೆಯನ್ನು ಹೆಚ್ಚಿಸಿತು. ನಟರು ಪಾತ್ರಗಳ ಪರಕಾಯ ಪ್ರವೇಶ ಮಾಡಿ ರಾಮಾಯಣವನ್ನು ಮರುಸೃಷ್ಟಿಸಿದ್ದರು.

ಯಕ್ಷಗಾನ ಹಾಗೂ ನಗಾರಿ, ಚಂಡೆ ಮಾದರಿಯಲ್ಲಿ ಅಯೋಧ್ಯೆ ಸಂಸ್ಕೃತಿ, ನಾಗಾಲ್ಯಾಂಡ್ ಹಾಗೂ ಚಾವು ಮಾದರಿಯಲ್ಲಿ ಲಂಕಾ ಸಂಸ್ಕೃತಿಯನ್ನು ನಾಟಕದಲ್ಲಿ ಪ್ರದರ್ಶಿಸಿದ್ದು ವಿಶೇಷವಾಗಿತ್ತು. ಕಿಷ್ಕಿಂಧೆ ಸಂಸ್ಕೃತಿಯನ್ನು ಮಿಳಾವ್ ಹಾಗೂ ತಮಟೆಯ ವಾದ್ಯಗಳೊಂ ದಿಗೆ ಆರಂಭಿಸುವ ಮೂಲಕ ಭಿನ್ನವಾದ ಸಂಸ್ಕೃತಿಗಳ ಮೇಲೆ ಬೆಳಕು ಚೆಲ್ಲುವ ಪ್ರಯೋಗವಾಗಿಯೂ ನಾಟಕ ಗಮನ ಸೆಳೆಯಿತು.

ರಾಮ (ಮಂಜುಸಿರಿಗೇರಿ), ಸೀತೆ (ವಿ.ಶೃತಿ ತಿಪಟೂರು), ರಾವಣ (ಹುಲುಗಪ್ಪ ಕಟ್ಟೀಮನಿ), ವಿಭೀಷಣ (ವಿನಾಯಕ ಭಟ್‌ ಹಾಸಣಗಿ, ಇನ್ಸಾಫ್‌ ಹೊಸಪೇಟೆ), ಆಂಜನೇಯ (ಎಸ್‌.ರಾಮು), ಕೈಕಯಿ (ಬಿ.ಎನ್‌.ಶಶಿಕಲಾ), ದಶರಥ (ಮಾಧವ), ಮಂಥರೆ (ಭಾಗೀರಥಿಬಾಯಿ), ಲಕ್ಷ್ಮಣ (ಮಹಾಂತೇಶ್‌ ಆದಿಮ), ವಾಲಿ (ಪ್ರದೀಪ ಹಾಸನ್‌), ರಾವಣ (ಅನುರಾಗ್‌) ಪಾತ್ರಧಾರಿಗಳು ಪ್ರೇಕ್ಷಕರ ಮನಸೂರೆಗೊಂಡರು.

ಸಂಜೆ ಆರು ಗಂಟೆಗೆ ಯಾವುದೇ ಸಾಂಪ್ರದಾಯಿಕ ಕಾರ್ಯಕ್ರಮಗಳಿಲ್ಲದೆ ಆರಂಭವಾದ ನಾಟಕವು ರಾತ್ರಿ 11ರ ವೇಳೆಗೆ ಮುಕ್ತಾಯವಾಯಿತು.

ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿ ಅರುಣ್‌ ರಂಗರಾಜನ್‌, ಪ್ರೊಬೆಷನರಿ ಐಎಎಸ್‌ ಅಧಿಕಾರಿ ಕೆ.ಆರ್‌.ನಂದಿನಿ, ಹೈದರಾಬಾದ್‌– ಕರ್ನಾಟಕ ಹೋರಾಟ ಸಮಿತಿ ಅಧ್ಯಕ್ಷ ಸಿರಿಗೇರಿ ಪನ್ನರಾಜ್‌ ಮಾತನಾಡಿ, ‘ರಂಗಾಯಣ ತಂಡದ ಪರಿಶ್ರಮ ಶ್ಲಾಘನೀಯ’ ಎಂದರು.

ಬಹಳ ದಿನಗಳ ನಂತರ ಸುದೀರ್ಘ ನಾಟಕವೊಂದನ್ನು ನೋಡಿದ ಸಂತಸದಲ್ಲಿ ಪ್ರೇಕ್ಷಕರು ಮನೆಗಳಿಗೆ ತೆರಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.