ADVERTISEMENT

ಅಪಘಾತದಲ್ಲಿ 4 ಕೂಲಿ ಕಾರ್ಮಿಕರು ಸಾವು: ಪರಿಹಾರಕ್ಕೆ ಆಗ್ರಹಿಸಿ ರಸ್ತೆತಡೆ ಚಳವಳಿ

​ಪ್ರಜಾವಾಣಿ ವಾರ್ತೆ
Published 29 ಏಪ್ರಿಲ್ 2019, 11:43 IST
Last Updated 29 ಏಪ್ರಿಲ್ 2019, 11:43 IST
ಸಿಪಿಎಂ ಹಾಗೂ ಚಿಲಕನಹಟ್ಟಿ ನಾಗರಿಕ ಹೋರಾಟ ಸಮಿತಿ ಕಾರ್ಯಕರ್ತರು ಸೋಮವಾರ ಸಂಡೂರು ಮುಖ್ಯರಸ್ತೆಯಲ್ಲಿ ರಸ್ತೆತಡೆ ಚಳವಳಿ ನಡೆಸಿದರು
ಸಿಪಿಎಂ ಹಾಗೂ ಚಿಲಕನಹಟ್ಟಿ ನಾಗರಿಕ ಹೋರಾಟ ಸಮಿತಿ ಕಾರ್ಯಕರ್ತರು ಸೋಮವಾರ ಸಂಡೂರು ಮುಖ್ಯರಸ್ತೆಯಲ್ಲಿ ರಸ್ತೆತಡೆ ಚಳವಳಿ ನಡೆಸಿದರು   

ಹೊಸಪೇಟೆ: ತಾಲ್ಲೂಕಿನ ಹಾರುವನಹಳ್ಳಿ ಬಳಿ ಇತ್ತೀಚೆಗೆ ಸಂಭವಿಸಿದ ರಸ್ತೆ ಅಪಘಾತದಲ್ಲಿ ಮೃತಪಟ್ಟ ಚಿಲಕನಹಟ್ಟಿ ಗ್ರಾಮದ ನಾಲ್ವರು ಕೂಲಿ ಕಾರ್ಮಿಕರಿಗೆ ₹10 ಲಕ್ಷ ಪರಿಹಾರ ನೀಡುವಂತೆ ಆಗ್ರಹಿಸಿ ನಾಗರಿಕ ಹೋರಾಟ ಸಮಿತಿ ಹಾಗೂ ಸಿಪಿಎಂ ಕಾರ್ಯಕರ್ತರು ಸೋಮವಾರ ಇಲ್ಲಿನ ಸಂಡೂರು ರಸ್ತೆಯಲ್ಲಿ ರಸ್ತೆತಡೆ ಚಳವಳಿ ನಡೆಸಿದರು.

ತಾಲ್ಲೂಕು ಪಂಚಾಯಿತಿ ಎದುರು ಪ್ರತಿಭಟನೆ ನಡೆಸಿ, ಮನವಿ ಪತ್ರ ಸಲ್ಲಿಸಲು ಎರಡೂ ಸಂಘಟನೆಯವರು ತೀರ್ಮಾನಿಸಿದ್ದರು. ಆದರೆ, ಯಾರೊಬ್ಬರೂ ಮನವಿ ಸ್ವೀಕರಿಸಲು ಸ್ಥಳಕ್ಕೆ ಬರಲಿಲ್ಲ. ಇದರಿಂದ ಸಿಟ್ಟಿಗೆದ್ದ ಮುಖಂಡರು, ಕಾರ್ಯಕರ್ತರು ರಸ್ತೆತಡೆ ನಡೆಸಿದರು. ಸುಮಾರು ಅರ್ಧಗಂಟೆಗೂ ಹೆಚ್ಚು ಕಾಲ ರಸ್ತೆ ತಡೆ ನಡೆಸಿದ್ದರಿಂದ ಆ ಭಾಗದಲ್ಲಿ ಸಾರ್ವಜನಿಕ ಸಂಚಾರ ಸಂಪೂರ್ಣ ಅಸ್ತವ್ಯಸ್ತಗೊಂಡಿತ್ತು.

‘ಘಟನೆಯಲ್ಲಿ ಗಾಯಗೊಂಡವರಿಗೆ ₹5 ಲಕ್ಷ ಪರಿಹಾರ ವಿತರಿಸಬೇಕು. ಗಾಯಾಳುಗಳ ಚಿಕಿತ್ಸೆಯಪೂರ್ಣ ವೆಚ್ಚವನ್ನು ಸಾರಿಗೆ ಸಂಸ್ಥೆ ಭರಿಸಬೇಕು.ಮೃತರ ಹಾಗೂ ಗಂಭೀರ ಗಾಯಗೊಂಡು ದುಡಿಯಲು ಸಾಧ್ಯವಾಗದಿರುವ ಮಕ್ಕಳ ಉನ್ನತ ಹಂತದ ವರೆಗಿನ ಶೈಕ್ಷಣಿಕ ವೆಚ್ಚವನ್ನು ಸರ್ಕಾರ ಭರಿಸಬೇಕು. ಕುಟುಂಬದ ಸದಸ್ಯರೊಬ್ಬರಿಗೆ ಸರ್ಕಾರಿ ಉದ್ಯೋಗ ಒದಗಿಸಬೇಕು’ ಎಂದು ಸಿಪಿಎಂ ಜಿಲ್ಲಾ ಕಾರ್ಯದರ್ಶಿ ಆರ್.ಎಸ್. ಬಸವರಾಜ ಆಗ್ರಹಿಸಿದರು.

ADVERTISEMENT

‘ಕಟ್ಟಡ ಕಾರ್ಮಿಕರ ಕಲ್ಯಾಣ ಮಂಡಳಿಯ ಎಲ್ಲ ನೆರವು ದೊರೆಯುವಂತೆ ಅಗತ್ಯ ಕ್ರಮಗಳನ್ನು ಜಿಲ್ಲಾ ಪಂಚಾಯಿತಿ ಹಾಗೂ ಜಿಲ್ಲಾ ಆಡಳಿತ ಕ್ರಮ ತೆಗೆದುಕೊಳ್ಳಬೇಕು.ಎಲ್ಲ ಕುಟುಂಬಗಳಿಗೆ ಕೂಡಲೇ ಮನೆಯನ್ನು ಕಟ್ಟಿಸಿಕೊಡಲು ಅಗತ್ಯ ಕ್ರಮ ವಹಿಸಬೇಕು. ಶವ ಸಂಸ್ಕಾರದ ವೆಚ್ಚವಾಗಿ ತಲಾ ₹5 ಸಾವಿರ ರೂ ಕೂಡಲೇ ನೀಡಬೇಕು.ಕುಟುಂಬ ಸದಸ್ಯರು ಜೀವ ವಿಮೆಯನ್ನು ಪಡೆಯಲು ಅನುವಾಗುವಂತೆ ಉಚಿತ ಕಾನೂನು ನೆರವು ಕಲ್ಪಿಸಬೇಕು’ ಎಂದು ಒತ್ತಾಯಿಸಿದರು.

ಮುಖಂಡರಾದ ಆರ್‌. ಭಾಸ್ಕರ್‌ ರೆಡ್ಡಿ, ಮರಡಿ ಜಂಬಯ್ಯ ನಾಯಕ, ಯಲ್ಲಾಲಿಂಗ, ಗೋಪಾಲಯ್ಯ, ಕೆ. ನಾಗರತ್ನಮ್ಮ ಹಾಗೂ ಚಿಲಕನಹಟ್ಟಿ ಗ್ರಾಮಸ್ಥರು ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.